ಕಾಣಿಯೂರು ಗ್ರಾ.ಪಂ.ಸಭಾಭವನ, ವಿವಿಧ ಕಾಮಗಾರಿಗಳ ಉದ್ಘಾಟನೆ

0

ಅಡಿಕೆ ಎಲೆ ಚುಕ್ಕಿ, ಹಳದಿ ರೋಗ ಸಂಶೋಧನೆಗೆ ಸಮಿತಿ ರಚನೆ ಶೋಭಾ ಕರಂದ್ಲಾಜೆ

ಬಿಜೆಪಿ ಸರಕಾರದಿಂದ ಅಭಿವೃದ್ಧಿಯ ಪರ್ವ – ಎಸ್. ಅಂಗಾರ

ಕಾಣಿಯೂರು: ಅಡಕೆ ಎಲೆ ಚುಕ್ಕಿ ಹಾಗೂ ಹಳದಿ ರೋಗ ಬಾಧೆಯನ್ನು ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನನ್ನ ನೇತೃತ್ವದಲ್ಲಿ ಸಂಬಂಧಪಟ್ಟ ವಿಜ್ಞಾನಿಗಳನ್ನೊಳಗೊಂಡ ಅಧ್ಯಯನ ಸಮಿತಿಯನ್ನು ರಚಿಸಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಕಾಣಿಯೂರಿನಲ್ಲಿ ಅ 27ರಂದು ಕಾಣಿಯೂರು ಗ್ರಾಮ ಪಂಚಾಯತ್ ಸಭಾಭವನ ಕಟ್ಟಡ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಡಕೆಗೆ ಈಗಾಗಲೇ ಹಳದಿ ರೋಗ ಪ್ರಾರಂಭವಾಗಿದೆ, ಅದರ ಬೆನ್ನಿಗೆ ಎಲೆಚುಕ್ಕಿ ರೋಗ ವ್ಯಾಪಕವಾಗುತ್ತಿದೆ, ಇದರಿಂದಾಗಿ ರೈತರು ಕಂಗಾಲಾಗಿದ್ದು, ಅದರ ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ಸಮಿತಿ ರಚನೆಯಾಗಿದೆ. ತೋಟಗಾರಿಕೆ, ಸಿಪಿಸಿಆರ್‌ಐ ಹಾಗೂ ಕೃಷಿಗೆ ಸಂಬಂಧಪಟ್ಟ ವಿಜ್ಞಾನಿಗಳ ತಂಡವನ್ನು ಮಾಡಿ ದೇಶದ ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ರೋಗಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದ ಅವರು ಈ ಹಿಂದಿನ ಯುಪಿಎ ಸರಕಾರದ ಅಧಿಕಾರಿಯೊಬ್ಬರು ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಇದೆ ಎಂದು ವರದಿ ನೀಡಿದ್ದರು. ಇದರ ಪರಿಣಾಮವಾಗಿ ಅಡಕೆ ಬೆಳೆಗಾರರ ತಲೆಯ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಈ ಬಗ್ಗೆ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಡಕೆ ಹಾನಿಕಾರಕವಲ್ಲ ಎಂದು ಮನವರಿಕೆ ಮಾಡಿರುವುದಲ್ಲದೆ ಸರಕಾರ ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡುವ ಕಾರ್ಯವನ್ನು ಮಾಡಿದೆ. ಆದರೂ ರೈತರು ತಾಳೆ ಮರದಂತಹ ಅಡಕೆಗೆ ಪರ್ಯಾಯವಾದ ಬೆಳೆಯನ್ನು ಬೆಳೆದು ದೇಶ ಅಡುಗೆ ಬಳಕೆಯ ತೈಲೋತ್ಪನ್ನದಲ್ಲಿ ಸ್ವಾವಲಂಬಿಯಾಗುವಲ್ಲಿ ಸಹಕರಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ದಿಯ ಪರ್ವ ಆರಂಭವಾಗಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿಗೆ ವೇಗ ದೊರೆತಿದ್ದು ಗ್ರಾಮೀಣ ಭಾಗದ ಅಭಿವೃದ್ಧಿಗಳಿಗೆ ಕಾಯಕಲ್ಪ ದೊರೆತಿದೆ. ಜನತೆಯ ಆಶೋತ್ತರಗಳನ್ನು ಏಕಕಾಲಕ್ಕೆ ಈಡೇರಿಸಲು ಸಾಧ್ಯವಿಲ್ಲ, ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತದೆ. ಅಭಿವೃದ್ದಿಯನ್ನು ಸಹಿಸದ ಪ್ರತಿಪಕ್ಷಗಳು ಟೀಕೆಯಲ್ಲಿ ತಲ್ಲಿನರಾಗಿದ್ದಾರೆ. ಅವರು ನಮ್ಮನ್ನು ಆಳುವ ಸಂದರ್ಭ ಅವರಿಗೆ ಅಭಿವೃದ್ದಿಯ ಚಿಂತನೆ ಇರಲಿಲ್ಲ. ಆದರೂ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ದಿಯನ್ನು ತಮ್ಮದು ಎಂದು ಬಿಂಬಿಸುತ್ತಿರುವುದು ಕೀಳು ಮಟ್ಟದ ರಾಜಕೀಯ ಎಂದ ಸಚಿವರು. ಕಾಣಿಯೂರು ಭಾಗದ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ, ಇನ್ನೂ ಅಭಿವೃದ್ದಿಯಾಗಲು ಬಾಕಿಯಿದೆ ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು. ಗ್ರಾಮ ಪಂಚಾಯತ್ ಸಕ್ರೀಯವಾಗಿರುವುದರಿಂದ ಹೆಚ್ಚಿನ ಅನುದಾನ ತರಿಸಲು ಸಾಧ್ಯವಾಗಿದೆ ಎಂದರು. ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿದರು. ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಪಿಡಿಒ ಎಂ.ದೇವರಾಜ್, ಸದಸ್ಯರಾದ ಪ್ರವೀಣ್‌ಚಂದ್ರ ರೈ ಕುಮೇರು, ರಾಮಣ್ಣ ಗೌಡ ಮುಗರಂಜ, ವಿಶ್ವನಾಥ ಕೊಪ್ಪ, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಸುಲೋಚನಾ ಮಿಯ್ಯೊಳ್ಪೆ, ಮೀರಾ ಕಳೆಂಜೋಡಿ, ಗಂಗಮ್ಮ ಗುಜ್ಜರ್ಮೆ, ಅಂಬಾಕ್ಷಿ ಕೂರೇಲು, ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಸುನಂದ ಅಬ್ಬಡ ಉಪಸ್ಥಿತರಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಪ್ರಸ್ತಾವನೆಗೈದು, ಸ್ವಾಗತಿಸಿದರು. ತೇಜಕುಮಾರಿ ಉದ್ಲಡ್ಡ, ಚಿತ್ರಾ, ಶಶಿಕಲಾ ಪ್ರಾರ್ಥಿಸಿದರು. ತಿಮ್ಮಪ್ಪ ಗೌಡ ಬೀರುಕುಡಿಕೆ, ಚಿತ್ರಾ, ಕುಮಾರ್, ಪಾರ್ವತಿ, ಕೀರ್ತಿಕುಮಾರ್, ಶಶಿಕಲಾ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಗ್ರಾ.ಪಂ. ಸದಸ್ಯ ರಾಮಣ್ಣ ಗೌಡ ಮುಗರಂಜ ವಂದಿಸಿದರು. ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ: ಕಾಣಿಯೂರು ಗ್ರಾ.ಪಂ.ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಚಲ್ಲ ಅಯೋಧ್ಯೆನಗರ, ಪದ್ಮಯ್ಯ ಗೌಡ ಅನಿಲ, ಯಮುನಾ ಕೋಡಂದೂರು ಹಾಗೂ ತಿಮ್ಮಪ್ಪ ಪೂಜಾರಿಯವರ ಪರವಾಗಿ ಪತ್ನಿ ನಳಿನಿ ಅವರು ಸನ್ಮಾನ ಸ್ವೀಕರಿಸಿದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ದೀಕ್ಷಾ ಕುಕ್ಕುನಡ್ಕ ಹಾಗೂ ಅಂತರಾಷ್ಟ್ರೀಯ ಯೋಗ ಪ್ರತಿಭೆ ಪ್ರಣಮ್ಯ ಅಗಳಿ ಅವರಿಗೆ ಸನ್ಮಾ ನಡೆಯಿತು.

ಕಾರ್ಯಕ್ರಮದ ಹೈಲೈಟ್ಸ್

  • 25 ಲಕ್ಷ ರೂ ವೆಚ್ಚದ ಗ್ರಾ.ಪಂ ಸಭಾ ಭವನ ಉದ್ಘಾಟನೆ.
  • ಗ್ರಾ.ಪಂ ಕಛೇರಿ ಆವರಣದಲ್ಲಿ 2.5 ಲಕ್ಷ ರೂ ವೆಚ್ಚದಲ್ಲಿ ಹಾಸಲಾದ ಇಂಟರ್ ಲಾಕ್ ಉದ್ಘಾಟನೆ
  • ಗ್ರಾ,ಪಂ ಕಛೇರಿಗೆ 2.5 ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾದ ಸೋಲಾರ್ ವ್ಯವಸ್ಥೆಯ ಉದ್ಘಾಟನೆ.
  • ಗ್ರಾ.ಪಂ. ಕಟ್ಟಡದಲ್ಲಿ ಪ್ರಾರಂಭವಾದ ಜನೌಷಧ ಕೇಂದ್ರದ ಉದ್ಘಾಟನೆ
  • ಕಾಣಿಯೂರು ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ.
  • ಗ್ರಾಮೀಣಾಭಿವೃದ್ದಿ ಇಲಾಖೆಯ ದೂರದೃಷ್ಠಿ ಯೋಜನೆ ಪುಸ್ತಕ ಅನಾವರಣ
  • ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು ದೀಕ್ಷಾ ಕುಕ್ಕುನಡ್ಕ ಹಾಗೂ ಅಂತರಾಷ್ಟ್ರೀಯ ಯೋಗ ಪ್ರತಿಭೆ ಪ್ರಣಮ್ಯ ಅಗಳಿ
  • ಅವರಿಗೆ ಸನ್ಮಾನ.
  • ಗುತ್ತಿಗೆದಾರರಾದ ಜಲೀಲ್ ಬೈತಡ್ಕ, ಹಸೈನರ್ ಹಾಗೂ ಇಂಜೀನಿಯರ್ ಹರೀಶ್ ಅವರಿಗೆ ಗೌರವಾರ್ಪಣೆ

2 ವರ್ಷದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸುಮಾರು ರೂ 7.50 ಕೋಟಿ ಅನುದಾನದಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದೆ. ಎಲ್ಲಾ ಜನಪ್ರತಿನಿಽಗಳ ಸಹಕಾರದಿಂದ ಅನುದಾನ ಬರುವಲ್ಲಿ ಯಶಸ್ವಿಯಾಗಿದೆ. ಗ್ರಾ.ಪಂ. ನೂತನ ಸಭಾಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲರೂ ಪಕ್ಷಾತೀತವಾಗಿ ಸಹಕಾರ, ಪ್ರೋತ್ಸಾಹ ನೀಡಿದ್ದಾರೆ. ಕಾಣಿಯೂರಿನ ಎಲ್ಲಾ ವರ್ತಕರು, ಗ್ರಾಮಸ್ಥರು ಬೆನ್ನೆಲುಬಾಗಿದ್ದ ಕಾರಣ ಸುಂದರವಾಗಿ, ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬರಲು ಸಾಧ್ಯವಾಗಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಗಣೇಶ್ ಉದನಡ್ಕ
ಉಪಾಧ್ಯಕ್ಷರು, ಗ್ರಾ.ಪಂ.ಕಾಣಿಯೂರು

LEAVE A REPLY

Please enter your comment!
Please enter your name here