ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಭಕ್ತರ ಸಂಪರ್ಕ ಭದ್ರಗೊಳಿಸಲು ‘ಮಮ’ ಪರಿವಾರ ಗ್ರಾಮ ಸಮಿತಿ ಯೋಜನೆ-ಕೇಶವಪ್ರಸಾದ್ ಮುಳಿಯ

0

ಪುತ್ತೂರು:ಪುತ್ತೂರು ಮಹಾಲಿಂಗೇಶ್ವರನ ಭಕ್ತರು ಸೀಮೆ ಮತ್ತು ವಿಶ್ವದೆಲ್ಲೆಡೆ ಇದ್ದಾರೆ.ಬಹಳ ಕಡೆಗಳಿಂದ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ.ದೇವರಲ್ಲಿ ಪ್ರಾರ್ಥಿಸಿ ಅನುಗ್ರಹ ಪಡೆಯುತ್ತಾರೆ. ಇದರ ಜೊತೆಗೆ ದೇವಳದಿಂದ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತರ ಸಂಪರ್ಕವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ‘ಮಮ’ ಪರಿವಾರ ಗ್ರಾಮ ಸಮಿತಿ ಎಂಬ ವಿನೂತನ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದ್ದಾರೆ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಅ.28ರಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.‘ಮಹತೋಭಾರ ಮಹಾಲಿಂಗೇಶ್ವರ (ಮಮ) ಪರಿವಾರ’ ಎಂಬ ಹೆಸರು ಸಮಿತಿಗಳಿಗೆ ಇಡಲಾಗಿದೆ.ಸಂಸ್ಕೃತದಲ್ಲಿ ಮಮ ಎಂದರೆ ನನ್ನ ಎಂದರ್ಥ.ಮಹತೋಭಾರ ಮಹಾಲಿಂಗೇಶ್ವರ ಪರಿವಾರ ನನ್ನ ಪರಿವಾರವೂ ಆಗಲಿ ಎಂಬ ಸದುದ್ದೇಶದಿಂದ ಈ ಹೆಸರಿಡಲಾಗಿದೆ. ದೇವಳದ ಮೂಲಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಎಂಬ 5 ವಿಭಾಗಗಳಲ್ಲಿ ಈಗಾಗಲೇ ಹಲವು ಕಾರ್ಯ ಆರಂಭಿಸಿದ್ದು, ಈ ವ್ಯವಸ್ಥೆ ಸೀಮೆಯ ಭಕ್ತರ ಪ್ರತಿ ಮನೆ ಮನೆ ತಲುಪಬೇಕು.ಈ ನಿಟ್ಟಿನಲ್ಲಿ ಮಮ ಪರಿವಾರ ಸಮಿತಿ ಕಾರ್ಯ ಮಾಡಲಿದೆ.ಪ್ರತಿ ಗ್ರಾಮಗಳಲ್ಲೂ ಸಮಿತಿ ರಚನೆ ಮಾಡಲಾಗುವುದು.ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಲ್ಲೂ ಸಮಿತಿ ರಚನೆ ಕಾರ್ಯ ನಡೆಯುತ್ತಿದೆ. ನ.10ರ ಒಳಗೆ ನಗರಸಭೆ ವ್ಯಾಪ್ತಿಯಲ್ಲಿ 31 ಸಮಿತಿಗಳನ್ನು ರಚಿಸುವ ಗುರಿ ಹೊಂದಲಾಗಿದೆ. ಡಿಸೆಂಬರ್ 10ರ ಒಳಗೆ ತಾಲೂಕಿನ ಗ್ರಾಮಾಂತರ ಭಾಗದಲ್ಲೂ ಸಮಿತಿ ರಚನೆ ಪೂರ್ಣಗೊಳ್ಳಲಿದೆ.ಇದಕ್ಕಾಗಿ ಸರಣಿ ಸಭೆಗಳನ್ನು ಆಯಾ ಭಾಗದಲ್ಲಿ ನಡೆಸಲಾಗುವುದು.ಪ್ರತೀ ಸಮಿತಿಯಲ್ಲಿ ತಲಾ 11 ಮಹಿಳೆಯರು, ಪುರುಷರು ಸೇರಿದಂತೆ 22 ಸದಸ್ಯರಿರುತ್ತಾರೆ.ಅಗತ್ಯ ಬಿದ್ದಾಗಲೆಲ್ಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಾನಾ ರೀತಿಯಲ್ಲಿ ಸೇವೆ ಮಾಡಲು ಸಿದ್ಧರಿರುವ ಭಕ್ತರನ್ನು ಸೇರಿಸಿಕೊಳ್ಳಲಾಗುವುದು.ಪ್ರಸ್ತುತ ಚಾಲ್ತಿಯಲ್ಲಿರುವ ನಿತ್ಯ ಕರಸೇವಕರ ಸಮಿತಿ ಪ್ರತ್ಯೇಕವಾಗಿ ನಿತ್ಯ ಸೇವೆಯಲ್ಲೇ ಇರುತ್ತದೆ.ಇದನ್ನು ಹೊರತುಪಡಿಸಿ ಈ ಮಮ ಪರಿವಾರ ಸಮಿತಿ ರಚಿಸಲಾಗುವುದು.ನಿತ್ಯ ಕರಸೇವಕರು ಕೂಡಾ ಆಯಾ ಗ್ರಾಮದ ಸಮಿತಿಯಲ್ಲಿ ಇರುತ್ತಾರೆ.ಇದು ಪೂರ್ಣ ಪ್ರಮಾಣದಲ್ಲಿ ಭಕ್ತರ ಸಮಿತಿಯಾಗಲಿದೆ ಎಂದ ಅವರು, ಒಟ್ಟು ೪೫ ಅಂಶಗಳ ಕಾರ್ಯಕ್ರಮಗಳನ್ನು ವ್ಯವಸ್ಥಾಪನಾ ಸಮಿತಿ ಜಾರಿಗೆ ತರುತ್ತಿದೆ ಎಂದರು.

ಸಮಿತಿಯಲ್ಲಿ ಪ್ರಮುಖ್, ಸಹಪ್ರಮುಖ್: ಪ್ರತಿ ಸಮಿತಿಯಲ್ಲಿ ಒಬ್ಬರು ಪ್ರಮುಖ್, ಮತ್ತೊಬ್ಬರು ಸಹ ಪ್ರಮುಖ್ ಇರುತ್ತಾರೆ.ಭಜನೆ, ಧರ್ಮ ಜಾಗೃತಿ, ಧರ್ಮ ಶಿಕ್ಷಣ ಯೋಜನೆಯಲ್ಲೂ ಸಹಕರಿಸಲಿದ್ದಾರೆ.ನ.23ರಂದು ನಡೆಯುವ ಲಕ್ಷ ದೀಪೋತ್ಸವದಲ್ಲಿ ದೇವಸ್ಥಾನದ ಆವರಣ, ಗೋಪುರ, ಪುಷ್ಕರಣಿ, ದೇವಳದ ಗದ್ದೆಯಲ್ಲಿರುವ ಶಿವನ ಮೂರ್ತಿ, ಮೂಲ ನಾಗ ಸನ್ನಿಧಿ, ಗೋ ಶಾಲೆ, ಪಂಚಾಕ್ಷರಿ ಮಂಟಪ, ಬ್ರಹ್ಮರಥ ಮಂದಿರವನ್ನು ಅದ್ಭುತವಾಗಿ ದೀಪಾಲಂಕಾರ ಮಾಡಲಾಗುತ್ತದೆ.ಇದರಲ್ಲೂ ಮಮ ಪರಿವಾರ ಸಮಿತಿಯವರ ಸಹಕಾರ ಇರಲಿದೆ.ಧನುರ್ಮಾಸ ಪರ್ಯಂತ ಗ್ರಾಮಾಂತರ ಸಮಿತಿಯವರು ದಿನಕ್ಕೊಂದು ತಂಡದಂತೆ ದೇವಳದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ವಧು-ವರರಿಗೆ ಜೀವನ ಶಿಕ್ಷಣ: ಶೈಕ್ಷಣಿಕ ವಿಚಾರದಲ್ಲಿ ಯೋಗ ಶಿಕ್ಷಣ, ನೂತನ ವಧು-ವರರಿಗೆ ಜೀವನ ಶಿಕ್ಷಣ ಕೂಡಾ ನೀಡುವ ಯೋಜನೆ ಇದೆ.ವಿಚ್ಛೇದನೆಯಂಥ ಸಾಮಾಜಿಕ ಪಿಡುಗುಗಳಿಂದ ಹೇಗೆ ಶುದ್ಧ ದಾಂಪತ್ಯ ಸಂರಕ್ಷಣೆ ಮಾಡಬಹುದು, ಗಂಡ-ಹೆಂಡತಿ ನಡುವಿನ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಜೀವನ ಶಿಕ್ಷಣ ಕಾರ್ಯಕ್ರಮ ದೇವಳದ ವತಿಯಿಂದ ಆರಂಭಿಸಲಾಗುತ್ತದೆ.ವರ್ಷಕ್ಕೆ ೨ ಬಾರಿ ದಿನವಿಡೀ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಸಮಗ್ರ ಜೀರ್ಣೋದ್ದಾರಕ್ಕೆ ಸಂಕಲ್ಪ: ದೇವಳದ ಜೀರ್ಣೋದ್ಧಾರ ಸಂದರ್ಭ ಭಕ್ತರೆಲ್ಲರು ಸಹಕಾರ ನೀಡಿದ್ದಾರೆ.ಅದೇ ರೀತಿ ದೇವಳದ ಸಮಗ್ರ ಜೀರ್ಣೋದ್ಧಾರದಲ್ಲೂ ಭಕ್ತರ ಸಂಕಲ್ಪ ಅಗತ್ಯ. ದೇವಸ್ಥಾನ ಭಕ್ತರ ದೇವಸ್ಥಾನವಾದ್ದರಿಂದ ಪ್ರತಿಯೊಬ್ಬರಿಂದ ಸಮಗ್ರ ಜೀರ್ಣೋದ್ಧಾರದಲ್ಲಿ ಸಂಕಲ್ಪ ತೊಡಿಸಬೇಕು.ಸಂಕಲ್ಪ ಕಾಣಿಕೆ ತಲುಪಿಸಲು ಮಮ ಪರಿವಾರ ಸಮಿತಿ ಕಾರ್ಯನಿರ್ವಹಿಸಲಿದೆ.ಸ್ವಚ್ಛತಾ ಕಾರ್ಯವನ್ನೂ ಮಾಡಲಾಗುವುದು.ಈ ಮೂಲಕ ಸ್ವಚ್ಛತಾ ಮನಪರಿವರ್ತನೆ ಕಾರ್ಯ ನಡೆಯಲಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ. ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ ಉಪಸ್ಥಿತರಿದ್ದರು.

ಪ್ರತೀ ಸಮಿತಿಯಲ್ಲಿ ತಲಾ 11 ಮಹಿಳೆಯರು, ಪುರುಷರು ಸೇರಿದಂತೆ 22 ಸದಸ್ಯರಿರುತ್ತಾರೆ.ಅಗತ್ಯ ಬಿದ್ದಾಗಲೆಲ್ಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಾನಾ ರೀತಿಯಲ್ಲಿ ಸೇವೆ ಮಾಡಲು ಸಿದ್ಧರಿರುವ ಭಕ್ತರನ್ನು ಸೇರಿಸಿಕೊಳ್ಳಲಾಗುವುದು. ಪ್ರಸ್ತುತ ಚಾಲ್ತಿಯಲ್ಲಿರುವ ನಿತ್ಯ ಕರಸೇವಕರ ಸಮಿತಿ ಪ್ರತ್ಯೇಕವಾಗಿ ನಿತ್ಯ ಸೇವೆಯಲ್ಲೇ ಇರುತ್ತದೆ.ಇದನ್ನು ಹೊರತುಪಡಿಸಿ ಈ ಮಮ ಪರಿವಾರ ಸಮಿತಿ ರಚಿಸಲಾಗುವುದು

ಕೇಶವ ಪ್ರಸಾದ್ ಮುಳಿಯ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ

LEAVE A REPLY

Please enter your comment!
Please enter your name here