ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭವಾಗಿದೆ. ಇದಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಶುಕ್ರವಾರ ನಡೆದ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.
ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಗೀತಾ ದಾಸರಮೂಲೆ, ನನ್ನ ವಾರ್ಡ್ ನ ನಂದಿನಿನಗರ ಮತ್ತು ಹರಿನಗರಗಳಲ್ಲಿ ತುಂಬಾ ನೀರಿನ ಸಮಸ್ಯೆ ಇದೆ ಎಂದರು. ಈ ಸಂದರ್ಭ ಮಾತನಾಡಿದ ಸದಸ್ಯ ಹಮ್ಮಬ್ಬ ಶೌಕತ್ ಅಲಿ, ನಂದಿನಿನಗರದಲ್ಲಿ ನೀರಿನ ಸಮಸ್ಯೆ ಇತ್ತು. ಆದರೆ ಅಧ್ಯಕ್ಷರು ಅದಕ್ಕೆ ತುರ್ತು ಸ್ಪಂದನೆ ನೀಡಿ ಹರಿನಗರದಿಂದ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದರು. ಆಗ ಸದಸ್ಯೆ ಗೀತಾ ದಾಸರಮೂಲೆ ಮಾತನಾಡಿ ನಂದಿನಿನಗರದಲ್ಲಿ ಮತ್ತೆ ನೀರಿನ ಸಮಸ್ಯೆ ತಲೆದೋರಿದೆ. ಹರಿನಗರದಲ್ಲೂ ಅದೇ ಪರಿಸ್ಥಿತಿ ಇದೆ ಎಂದರು. ಮುರ ಕ್ವಾರ್ಟರ್ಸ್ನಲ್ಲಿಯೂ ನೀರಿನ ಸಮಸ್ಯೆ ಇರುವುದಾಗಿ ಪ್ರಸ್ತಾಪಿಸಿದ ಸದಸ್ಯ ಸತೀಶ್ ಶೆಟ್ಟಿ ಎನ್, ಅಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುವುದು. ಆದ್ದರಿಂದ ಜನರಿಗೆ ಸಮಸ್ಯೆಯಾಗಿದೆ ಎಂದರು. ಆಗ ಹಮ್ಮಬ್ಬ ಶೌಕತ್ ಅಲಿ ಮಾತನಾಡಿ, ಅಡ್ಕದಗುರಿ ಮತ್ತು ಮುರ ಕ್ವಾರ್ಟರ್ಸ್ನಲ್ಲಿ ಎರಡು ಟ್ಯಾಂಕ್ಗಳಿವೆ. ಅಲ್ಲಿ ನೀರಿನ ಸಮಸ್ಯೆ ಇಲ್ಲ. ನೀರು ಬಿಡುವ ಪಂಪು ಚಾಲಕರ ಸಮಸ್ಯೆಯಿಂದ ಈ ರೀತಿ ಆಗಿದೆ ಎಂದರು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ಕಡೆಗಳಲ್ಲಿ ಅದರಿಂದ ಈ ಸಮಸ್ಯೆಗಳಾಗಿವೆ. ಕಾಮಗಾರಿ ಆದಲ್ಲಿ ಮೀಟರ್ ಅಳವಡಿಸಿದ ಬಳಿಕವೇ ನೀರಿನ ಸಂಪರ್ಕ ಕೊಡಬೇಕು. ಕೆಲವು ಕಡೆ ಈ ಹಿಂದಿನ ಮತ್ತು ಜಲಜೀವನ್ನ ನೀರಿನ ಸಂಪರ್ಕ ಇದೆ. ಹೀಗೆ ಎರಡು ಸಂಪರ್ಕ ಇದ್ದವರದ್ದು ಈ ಹಿಂದಿನ ನೀರಿನ ಸಂಪರ್ಕ ಕಡಿತಗೊಳಿಸಬೇಕು ಎಂದು ಶೌಕತ್ ಅಲಿ ತಿಳಿಸಿದರು. ಆಗ ಗ್ರಾ.ಪಂ. ಕಾರ್ಯದರ್ಶಿ ಪರಮೇಶ್ವರ ಮಾತನಾಡಿ, ಹಾಗಿದ್ದಲ್ಲಿ ಅದನ್ನು ನೋಡಿ ಗಮನಕ್ಕೆ ತನ್ನಿ ಎಂದರು. ಅದಕ್ಕೆ ಶೌಕತ್ ಅಲಿ ಮಾತನಾಡಿ, ಅದನ್ನು ನೋಡುವುದು ಸದಸ್ಯರ ಕೆಲಸವಲ್ಲ. ಸಿಬ್ಬಂದಿಗಳದ್ದು ಎಂದರು. ಅದುಕ್ಕುತ್ತರಿಸಿದ ಕಾರ್ಯದರ್ಶಿ ಪರಮೇಶ್ವರ ಸಂಪರ್ಕ ಕಡಿತಗೊಳಿಸಲು ನೀವು ಹೋಗಬೇಡಿ. ನಿಮ್ಮ ಗಮನಕ್ಕೆ ಬಂದಲ್ಲಿ ಅದನ್ನು ನಮ್ಮ ಗಮನಕ್ಕೆ ತನ್ನಿ. ಮತ್ತೆ ನಾವೇ ಅದನ್ನು ಕಡಿತಗೊಳಿಸುತ್ತೇವೆ ಎಂದರಲ್ಲದೆ, ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ನೀರಿನ ಸಮಸ್ಯೆಯನ್ನು 15 ದಿನಗಳೊಳಗೆ ಪರಿಹರಿಸಲಾಗುವುದು. ಲಕ್ಷಾಂತರ ರೂಪಾಯಿ ನೀರಿನ ಬಿಲ್ ಗ್ರಾ.ಪಂ.ಗೆ ಬರಲು ಬಾಕಿಯಿದ್ದು, ಬಿಲ್ ಬಾಕಿಯಿರಿಸಿದವರಿಗೆ ನೊಟೀಸ್ ಕೊಡಲು ನಿರ್ಣಯ ಅಂಗೀಕರಿಸೋಣ ಎಂದು ತಿಳಿಸಿದಾಗ, ಶೌಕತ್ ಅಲಿ ಮಾತನಾಡಿ, ನೋಟೀಸ್ ನೀಡುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಗ್ರಾ.ಪಂ.ನ ಬಿಲ್ ವಸೂಲಿಗಾರರು ತಿಂಗಳು ತಿಂಗಳು ನೀರಿನ ಕರ ಸಂಗ್ರಹ ಮಾಡುತ್ತಿದ್ದರೆ, ಈಗ ನೊಟೀಸ್ ನೀಡಬೇಕಾದ ಪ್ರಸಂಗ ಎದುರಾಗುತ್ತಿರಲಿಲ್ಲ. ಐದಾರು ತಿಂಗಳ ಬಿಲ್ ಅನ್ನು ಒಮ್ಮೆಲೇ ಕೊಟ್ಟಾಗ ಅದನ್ನು ಕಟ್ಟಲು ಕೆಲವರಿಗೆ ಕಷ್ಟಸಾಧ್ಯವಾಗುತ್ತದೆ ಎಂದರು. ಕೊನೆಗೇ ನೀರಿನ ಬಿಲ್ ಬಾಕಿಯುಳಿಸಿದವರಿಗೆ ನೋಟೀಸ್ ನೀಡುವ ನಿರ್ಣಯ ಅಂಗೀಕರಿಸಲಾಯಿತು.
ಪಲ್ಲೆಜಾಲು- ಗಡಿಮನೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗ್ರಾ.ಪಂ.ನಿಂದ ಕ್ರಿಯಾಯೋಜನೆ ತಯಾರಿಸಿ, ಅನುದಾದ ಇಡಲಾಗಿತ್ತು. ಆದರೆ ಈಗ ಅದಕ್ಕೆ ಶಾಸಕರು ಅನುದಾನ ನೀಡಿದ್ದಾರೆ. ಆದ್ದರಿಂದ ಗ್ರಾ.ಪಂ. ಅಲ್ಲಿಗೆ ಇಟ್ಟ ಅನುದಾನದಲ್ಲಿ ದಾಸರಮೂಲೆಯಲ್ಲಿರುವ ಸರಕಾರಿ ಜಾಗದಲ್ಲಿ ಬಸ್ಸ್ಟ್ಯಾಂಡ್ ನಿರ್ಮಿಸಲು ಹಾಗೂ ನಾಲ್ಕು ಮಾರ್ಗಕ್ಕೆ ದಾರಿ ದೀಪಕ್ಕೆ ವಿಂಗಡಿಸಿ ಇಡಬೇಕು ಎಂದು ಶೌಕತ್ ಅಲಿ ತಿಳಿಸಿದರು. ಆಗ ಗೀತಾ ದಾಸರಮೂಲೆ ಮಾತನಾಡಿ, ದಾಸರಮೂಲೆಯಲ್ಲಿ ನೀವು ಬಸ್ಸ್ಟ್ಯಾಂಡ್ ನಿರ್ಮಿಸಲು ಹೊರಟಿರುವ ಜಾಗ ಸರಕಾರಿ ಜಾಗ ಅಲ್ಲ. ಅದು ಒಬ್ಬರಿಗೆ ಅಕ್ರಮ- ಸಕ್ರಮದಲ್ಲಿ ಮಂಜೂರಾದ ಜಾಗ. ಅಲ್ಲಿ ಈ ಹಿಂದೆಯೇ ಬಸ್ಸ್ಟ್ಯಾಂಡ್ ನಿರ್ಮಾಣಕ್ಕೆ ಹೊರಟಾಗ ಅವರ ಆಕ್ಷೇಪವಿತ್ತು. ಅದಕ್ಕೆ ಆ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಈಗ ಮತ್ತೆ ಅಲ್ಲಿಯೇ ನಿರ್ಮಿಸ ಹೊರಡುವ ಮೂಲಕ ವೈಯಕ್ತಿಕ ದ್ವೇಷ ಸಾಧಿಸೋದು ಸರಿಯಲ್ಲ. ಈ ಬಗ್ಗೆ ಜಿಲ್ಲಾಽಕಾರಿಗಳ ಮೂಲಕ ಆಕ್ಷೇಪಣೆ ಆ ಮನೆಯವರು ತರುತ್ತಾರೆ ಎಂದರು. ಈ ಮೊದಲು ಕೂಡಾ ಲೋಕೋಪಯೋಗಿ ಇಲಾಖೆಯವರು ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಬೇರೆ ಕಡೆ ಇದ್ದ ಮೋರಿಯನ್ನು ದಾಸರಮೂಲೆಯ ಬಳಿ ತಂದು ಹಾಕಿದ್ದಾರೆ. ಇದರಿಂದ ಮಳೆ ನೀರೆಲ್ಲಾ ತೋಟದೊಳಗೆ ಹರಿದು ನನ್ನದೂ ಸೇರಿದಂತೆ ಇಲ್ಲಿನ ಹಲವರ ಕೃಷಿ ಹಾಳಾಗಿದೆ. ಆದ್ದರಿಂದ ಅಭಿವೃದ್ಧಿ ಮಾಡುವಾಗ ಇಂತಹ ವೈಯಕ್ತಿಕ ದ್ವೇಷ ಸಾಧಿಸುವುದು ಬೇಡ ಎಂದರು. ಇದಕ್ಕೆ ಶೌಕತ್ ಅಲಿ ತೀಕ್ಷ್ಮವಾಗಿ ಪ್ರತಿಕ್ರಿಯಿಸಿ, ಪಿಡಬ್ಲ್ಯೂಡಿ ರಸ್ತೆಗೆ 25 ಮೀಟರ್ ರೋಡ್ ಮಾರ್ಜಿನ್ ಇದೆ. ಹಿರೇಬಂಡಾಡಿ ಗ್ರಾ.ಪಂ. ವ್ಯಾಪ್ತಿಯ ಶಾಖೆಪುರದಿಂದ ಕುದ್ಲೂರುವರೆಗೆ ಕಾನೂನು ಬದ್ಧವಾಗಿ ರೋಡ್ ಮಾರ್ಜಿನ್ ಇಡಬೇಕು. ಅದಕ್ಕಾಗಿ ಪಟ್ಟಾ ಸ್ಥಳ ಬಿಟ್ಟು ರಸ್ತೆ ಬದಿಯಲ್ಲಿರುವ ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸಬೇಕು ಎಂದು ನಾವೆಲ್ಲಾ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಹಾಗೂ ಪಿಡಬ್ಲ್ಯೂಡಿ ಎಂಜಿನಿಯರ್ ಅವರಿಗೆ ಬರೆಯೋಣ ಎಂದರು. ದಾಸರಮೂಲೆಯಲ್ಲಿ ರಸ್ತೆ ಮಾರ್ಜಿನ್ ಒತ್ತುವರಿಯಾಗಿದೆ. ಅಲ್ಲಿ ಅದನ್ನು ತೆರವುಗೊಳಿಸಿ ಬಸ್ಸ್ಟ್ಯಾಂಡ್ ನಿರ್ಮಾಣವಾಗಬೇಕು ಎಂದರಲ್ಲದೆ, ಸದಸ್ಯರೋರ್ವರು ಇಲ್ಲಿ ಅಭಿವೃದ್ಧಿಗೆ ಅಸಹಕಾರ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಸಮಗ್ರ ಚರ್ಚೆಯಾಗಿ ಆ ಜಾಗದವರಲ್ಲಿ ಬಸ್ಸ್ಟ್ಯಾಂಡ್ ನಿರ್ಮಿಸುವ ಬಗ್ಗೆ ಅಧ್ಯಕ್ಷರು ಮಾತನಾಡುತ್ತಾರೆ. ಆ ಹಣವನ್ನು ಅಲ್ಲಿ ಬಸ್ಸ್ಟ್ಯಾಂಡ್ಗೆ ಅಂತಲೇ ಇಡಿ ಎಂದರು. ಬಳಿಕ ಈ ಚರ್ಚೆಗೆ ತೆರೆಬಿತ್ತು.
ಸದಸ್ಯ ಸತೀಶ್ ಹೆನ್ನಾಳ ಮಾತನಾಡಿ, ಒಂದು ಕಂಬ ಬಿಟ್ಟು ಒಂದು ಕಂಬಕ್ಕಾದರೂ ದಾರಿ ದೀಪ ಅಳವಡಿಸಬೇಕು ಎಂದು ನಿರ್ಣಯ ಕೈಗೊಂಡು ಹಲವು ತಿಂಗಳುಗಳು ಆಗಿದೆ. ಆದರೆ ಅದಿನ್ನೂ ಅನುಷ್ಠಾನಗೊಂಡಿಲ್ಲ ಎಂದರು. ಆಗ ಗ್ರಾ.ಪಂ.ನಲ್ಲಿ ಸ್ವಂತ ನಿಽ ಇಲ್ಲದಿರುವ ಬಗ್ಗೆ ವಿಚಾರ ಪ್ರಸ್ತಾಪವಾದಾಗ, ಹಾಗಾದರೆ ದಾರಿ ದೀಪ ಅಳವಡಿಸಲು ಇಲ್ಲವೇ ಎಂದು ಸತೀಶ್ ಶೆಟ್ಟಿ ಎನ್. ಪ್ರಶ್ನಿಸಿದರು. ಅದಕ್ಕೆ ಶೌಕತ್ ಅಲಿ ಮಾತನಾಡಿ, 99 ಸಾವಿರ ರೂಪಾಯಿ ನಿಧಿ ಇದೆ. ಅದನ್ನು 15 ಸದಸ್ಯರಿಗೂ ಹಂಚಿ, ಅವರವರ ವಾರ್ಡ್ನಲ್ಲಿ ಅವರು ದಾರಿ ದೀಪ ಅಳವಡಿಸಲಿ ಎಂದರು. ಆಗ ಸತೀಶ್ ಶೆಟ್ಟಿ ನಮಗೆ ಹಣ ಬೇಡ. ದಾರಿ ದೀಪ ಬೇಕು ಎಂದರು. ಈ ಸಂದರ್ಭ ಶೌಕತ್ ಅಲಿ ಮಾತನಾಡಿ, ಈ ಗ್ರಾ.ಪಂ.ಗೆ ಸ್ವಂತ ಆದಾಯ ಕಡಿಮೆ ಇದೆ. ಈ ಹಿಂದೆ ಕೊಳವೆ ಬಾವಿ ತೋಡಿಸಿದ ಹಣವನ್ನು ಕೂಡಾ ಆ ಬಳಿಕದ ಆಡಳಿತ ಮಂಡಳಿಯ ಅನುದಾನದಲ್ಲಿ ನೀಡಿದ್ದು, ಹೀಗೆ ಬಾಕಿಯುಳಿದಿರುವ ಬಿಲ್ಗಳನ್ನೇ ಕೊಡುತ್ತಾ ಹೋದರೆ ಅಭಿವೃದ್ಧಿ ಮಾಡುವುದಾದರೂ ಹೇಗೆ ಎಂದರು. ಆಗ ಗೀತಾ ದಾಸರಮೂಲೆ ಮಧ್ಯಪ್ರವೇಶಿಸಿ ಮಾತನಾಡಿ, ಹಿಂದಿನ ವಿಚಾರ ಈಗ ಎತ್ತುವುದು ಸರಿಯಲ್ಲ ಎಂದಾಗ ಸದಸ್ಯರಾದ ಶೌಕತ್ ಅಲಿ, ನಿತಿನ್ ತಾರಿತ್ತಡಿ ಮಾತನಾಡಿ, ನಿಮ್ಮ ಬಗ್ಗೆ ನಾವು ಉಲ್ಲೇಖಿಸಿಲ್ಲ. ನೀವು ಯಾಕೆ ಮಾತನಾಡೋದು? ಹಾಗಾದರೆ ಅಂದು ಶಾಸಕರ ಅನುದಾನದಲ್ಲಿ ಎಂದು ಕೊಳವೆ ಬಾವಿ ಕೊರೆಸಿ, ಆ ಬಿಲ್ ಅನ್ನು ಗ್ರಾ.ಪಂ. ನೀಡಿದೆ. ಹಾಗಾದರೆ ನಿಮಗೆ ಅಂದು ಶಾಸಕರಿಂದ ಅದಕ್ಕೆ ಅನುದಾನ ಒದಗಿಸಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದರು. ಗ್ರಾ.ಪಂ.ಗೆ ಸಿಸಿ ಕ್ಯಾಮರಾ ಅಳವಡಿಸದಿರುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಈ ಸಂದರ್ಭ ಚರ್ಚೆ ನಡೆಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಸವಿತಾ ಹರೀಶ್, ಸದಾನಂದ ಶೆಟ್ಟಿ, ಲಕ್ಷ್ಮೀಶ, ಹೇಮಾವತಿ, ವಾರಿಜಾಕ್ಷಿ, ಹೇಮಂತ್ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಪಿಡಿಒ ದಿನೇಶ್ ಶೆಟ್ಟಿ ಅರ್ಜಿಗಳನ್ನು ವಿಲೇಗೊಳಿಸಿದರು.