ರಾಮಕುಂಜ: ಇಲ್ಲಿನ ಹಲ್ಯಾರ ನಿವಾಸಿ ಯಾಕೂಬ್ ಮೇಸ್ತ್ರಿಯವರು ತನ್ನ ಜೊತೆ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ದೀಪಾವಳಿ ಪ್ರಯುಕ್ತ ಅಕ್ಕಿ ವಿತರಿಸಿದರು.
ಅ.24ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆತೂರಿನಲ್ಲಿರುವ ಕೊಯಿಲ ಶಾಖಾ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಡಬ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿಯವರು ಮಾತನಾಡಿ, ಯಾಕೂಬ್ ಮೇಸ್ತ್ರಿಯವರಿಗೆ ಕಾರ್ಮಿಕರ ಮೇಲಿನ ಕಾಳಜಿ, ಪ್ರೀತಿ, ಪ್ರೇಮ ಮೆಚ್ಚುವಂತದ್ದು. ಅವರೊಬ್ಬ ಈ ಭಾಗದ ಅಬ್ದುಲ್ ಕಲಾಂ, ಆಧುನಿಕ ಕಾಲದ ಅಕ್ಬರ್. ದೇಶದಲ್ಲಿ ಇಂತವರ ಸಂಖ್ಯೆ ಹೆಚ್ಚಿದಲ್ಲಿ ಶಾಂತಿ, ಸಾಮರಸ್ಯ ಮೂಡಲಿದೆ ಎಂದರು. ಉಪನ್ಯಾಸಕ ಅಬ್ದುಲ್ ರಜಾಕ್ , ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಉಪವಲಯಾರಣ್ಯಾಧಿಕಾರಿ ಸಂಜೀವ ಕೆ., ತುಳುಚಲನಚಿತ್ರ ನಟ ರವಿರಾಮಕುಂಜ, ಅರಣ್ಯ ರಕ್ಷಕ ಹನೀಫ್ರವರು ಸಂದರ್ಭೋಚಿತವಾಗಿ ಮಾತನಾಡಿ ಯಾಕೂಬ್ ಮೇಸ್ತ್ರಿಯವರ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಯಾಕೂಬ್ ಮೇಸ್ತ್ರಿಯವರನ್ನು ಸನ್ಮಾನಿಸಲಾಯಿತು. ಹಿರಿಯ ಕಾರ್ಮಿಕ ದಿನೇಶ್ರವರನ್ನು ಕಾರ್ಮಿಕರ ಪರವಾಗಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸುಭಾಷ್ ಶೆಟ್ಟಿ ಆರ್ವಾರ ಅವರು ಕಾರ್ಮಿಕರಿಗೆ ಬಟ್ಟೆ ವಿತರಿಸಿದರು. ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲಾ ಶಿಕ್ಷಕ ದಿನೇಶ್ಕುಮಾರ್, ಸುಭಾಷ್ ಶೆಟ್ಟಿ ಆರ್ವಾರ, ದುರ್ಗಾಪ್ರಸಾದ್ ಸುಣ್ಣಾಲ, ಮೆಸ್ಕಾಂ ಪವರ್ಮ್ಯಾನ್ ವಿಶ್ವನಾಥ, ನೇಮಣ್ಣ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಲೀಂ ಹಲ್ಯಾರ ನಿರೂಪಿಸಿದರು.