ದೇಶದಲ್ಲಿ 24 ಗಂಟೆಯಲ್ಲಿ 27 ಕಿ ಮೀ ರಸ್ತೆಗಳು ಅಭಿವೃದ್ದಿಯಾಗುತ್ತಿದೆ: ನಳಿನ್ಕುಮಾರ್ ಕಟೀಲ್
ಪುತ್ತೂರು: ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಮೂಲಾಗ್ರ ಬದಲಾವಣೆಗಳು ನಡೆದಿದೆ. ಪ್ರತೀ ದಿನವೂ ದೇಶ ಅಭಿವೃದ್ದಿಯಾಗುತ್ತಿದೆ. ದೇಶದಲ್ಲಿರುವ ರಸ್ತೆಗಳ ಅಭಿವೃದ್ದಿಯಾಗುವ ಮೂಲಕ ಭಾರತವನ್ನು ಜೋಡೋ ಮಾಡಲಾಗುತ್ತದೆ. ದೇಶದಲ್ಲಿ ದಿನವೊಂದಕ್ಕೆ 27 ಕಿ ಮೀ ರಸ್ತೆಗಳು ಅಭಿವೃದ್ದಿಯಾಗುತ್ತಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದರು.
ಮಾಣಿ- ಮೈಸೂರು ರಾ. ಹೆದ್ದಾರಿ 275 ರಲ್ಲಿ ಎಂಟು ಕಿರು ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯ ನೆರವೇರಿಸಿ ಮಾತನಾಡಿದರು.
2014 ರ ನಂತರ ದೇಶದಲ್ಲಿ ಮೋದಿ ಶಕೆ ಆರಂಭವಾಗಿದೆ. ಆ ಬಳಿಕ ದೇಶದಲ್ಲಿ ಪರಿವರ್ತನೆಯಾಗಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಕ್ರಿಸ್ತ ಶಕ – ಕ್ರಿಸ್ತಪೂರ್ವದ ಬದಲು ಭಾರತದಲ್ಲಿ ಮೋದಿಶಕೆ- ಮೋದಿ ಪೂರ್ವ ಶಕೆ ಎಂದು ಕರೆಯಬಹುದಾಗಿದೆ. ನಾಲ್ಕು ವರ್ಷದಲ್ಲಿ ದ ಕ ಜಿಲ್ಲೆಗೆ ರಸ್ತೆ ಅಭಿವೃದ್ದಿಗೆ 23 ಸಾವಿರ ಕೋಟಿ ರೂ ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಜಿಲ್ಲೆಯ ಎಲ್ಲಾ ರಸ್ತೆಗಳು ಎರಡೇ ವರ್ಷದಲ್ಲಿ ಚತುಷ್ಪಥ ರಸ್ತೆಯಾಗಿ ಪರಿವರ್ತನೆಯಾಗಲಿದೆ ಎಂದು ಹೇಳಿದರು.
ಮಡಿಕೇರಿಯಿಂದ ಸಂಪಾಜೆ ತನಕ ಮಾಣಿ- ಮೈಸೂರು ರಾ. ಹೆದ್ದಾರಿ ಚತುಷ್ಪಥ ಆಗಿದ್ದು ಮುಂದಿನ ಎರಡೇ ವರ್ಷದಲ್ಲಿ ಸಂಪಾಜೆಯಿಂದ ಮಾಣಿ ತನಕ ಚತುಷ್ಪಥ ರಸ್ತೆಯಾಗಲಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ, ದೇಶದಲ್ಲಿ ಅಭಿವೃದ್ದಿ ಕಾರ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಇದನ್ನು ಕಂಡು ಸಹಿಸಲು ಸಾಧ್ಯವಾಗದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತವನ್ನು ಜೋಡಿಸಿದ್ದು ಮಾಜಿ ಪ್ರಧಾನಿ ವಾಜಪೇಯಿಯವರು ಈಗ ಕೆಲವರು ಭಾರತವನ್ನು ಜೋಡಿಸುವುದಾಗಿ ಹೇಳುತ್ತಿದ್ದಾರೆ. ದೇಶಾದ್ಯಂತ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳ ಅಭಿವೃದ್ದಿ ಮಾಡುವ ಮೂಲಕ ಮಾಜಿ ಪ್ರಧಾನಿ ವಾಜಪೇಯಿಯವರು ಭಾರತವನ್ನು ಜೋಡಿಸುವ ಕೆಲಸವನ್ನು ಮಾಡಿದ್ದರು ಎಂದು ಹೇಳಿದರು.
ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣ
ಮೇ ತಿಂಗಳ ಅಂತ್ಯಕ್ಕೆ ಎಂಟು ಕಿರು ಸೇತುವೆಗಳ ಕಾಮಗಾರಿ ಪೂರ್ಣವಾಗಲಿದೆ. ಮೊಗೆರೋಡಿ ಗುತ್ತಿಗೆದಾರರಿಗೆ ನೀಡಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿತ್ತು. ಅನೇಕ ದೊಡ್ಡ ಸೇತುವೆಗಳ ನಿರ್ಮಾಣ ಮಾಡಿದ ಅನುಭವ ಇರುವ ಮೊಗೆರೋಡಿ ಗುತ್ತಿಗೆದಾರ ಸುಧಾಕರ ಶೆಟ್ಟಿಯವರು ಗುಣಮಟ್ಟದ ಕಾಮಗಾರಿಯನ್ನು ನಡೆಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಮುಂದಿನ ಮೂರೇ ವರ್ಷದಲ್ಲಿ ಮಾಣಿ- ಮೈಸೂರು ರಸ್ತೆ ಅಗಲೀಕರಣವಾಗಲಿದೆ. ಒಟ್ಟು 45 ಮೀಟರ್ ರಸ್ತೆ ನಿರ್ಮಾಣವಾಗಲಿದ್ದು ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಅಭಿವೃದ್ದಿಗೆ ಅಡ್ಡಿ ಮಾಡಿದರೆ ನಾವೇನು ಮಾಡುವುದು?
ಕೆಲವೊಂದು ಕಡೆಗಳಲ್ಲಿ ರಸ್ತೆ ಅಭಿವೃದ್ದಿಗೆ ಸರಕಾರ ಅನುದಾನ ಬಿಡುಗಡೆ ಮಾಡಿದರೂ ಜಾಗದ ತಕರಾರಿಂದಾಗಿ ಕಾಮಗಾರಿಗೆ ಹಿನ್ನಡೆಯಾಗುತ್ತದೆ. ನಮ್ಮ ಜಾಗದಲ್ಲಿ ರಸ್ತೆ ನಿರ್ಮಾಣವಾಗಬಾರದು ಎಂದು ಕೋರ್ಟಿಗೆ ಹೋಗುತ್ತಿದ್ದಾರೆ. ಮಂಗಳೂರಿನ ಒಂದೇ ರಸ್ತೆಯ ವಿಚಾರದಲ್ಲಿ 80 ಮಂದಿ ಕೋರ್ಟಿಗೆ ಹೋಗಿದ್ದಾರೆ. ಕೋರ್ಟು ಸ್ಟೇ ತಂದರೆ ಕಾಮಗಾರಿ ನಡೆಸಲು ಸಾಧ್ಯವಿಲ್ಲದ ಕಾರಣ ಅಭಿವೃದ್ದಿಗೆ ಸ್ವಲ್ಪ ಹಿನ್ನಡೆಯಾಗಿದೆ. ಜನರ ಸಹಕಾರ ಇದ್ದರೆ ಎಲ್ಲ ಕಾರ್ಯಗಳೂ ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.
ಪ್ರಚಾರ ಪಡೆದುಕೊಳ್ಳದ ಪುತ್ತೂರು ಶಾಸಕರು
ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಅಭಿವೃದ್ದಿ ಕಾರ್ಯಗಳು ನಡೆದಿದೆ. ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳು ಸಮರ್ಪಕವಾಗಿ ನಡೆದಿದೆ. ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಪ್ರಚಾರ ಮಾಡುತ್ತಿಲ್ಲ ಮತ್ತು ಪ್ರಚಾರ ಪಡೆಯುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಒಂದು ಕೋಟಿ ರೂ ಕಾಮಗಾರಿ ನಡೆಸಿ ಒಂದು ಸಾವಿರದ ಬ್ಯಾನರ್ ಹಾಕಿ ಸುಮ್ಮನೆ ಇರುತ್ತರೆ. ರಾಜಕೀಯದಲ್ಲಿ ಪ್ರಚಾರ ತಪ್ಪಲ್ಲ ಎಂದು ಹೇಳಿದರು.
ಅಭಿವೃದ್ದಿಯೊಂದೇ ನಮ್ಮ ಯೋಜನೆಯಾಗಿದೆ: ಮಠಂದೂರು
ಯಾರು ಏನೇ ಹೇಳಲಿ ನಾವು ಅಭಿವೃದ್ದಿಯ ಕಡೆಗೆ ಮಾತ್ರ ಚಿಂತನೆ ನಡೆಸುತ್ತೇವೆ. ಜನರು ಹಲವು ವರ್ಷಗಳಿಂದ ಅಭಿವೃದ್ದಿಯಾಗಬೇಕೆಂಬ ನಿರೀಕ್ಷೆಯಲ್ಲಿದ್ದರು. ಮಾಣಿ- ಮೈಸೂರು ರಾ. ಹೆದ್ದಾರಿಯಲ್ಲಿ ಎಂಟು ಕಿರು ಸೇತುವೆಗಳು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಸೇತುವೆಗಳು ಅಪಘಾತ ವಲಯ ಎಂದು ಈಗಾಗಲೇ ಘೋಷಣೆಯೂ ಆಗಿದೆ. ಕಿರಿದಾದ ಸೇತುವೆಯ ಕಾರಣಕ್ಕೆ ಅನೇಕ ಅವಘಡಗಳು ಸಂಭವಿಸಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜನತೆಯ ಸೌಕರ್ಯಕ್ಕಾಗಿ ಹೊಸ ಸೇತುವೆಯ ನಿರ್ಮಾಣ ಕಾರ್ಯಕ್ಕೆ 51.96 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಮೇ ಅಂತ್ಯಕ್ಕೆ ಸೇತುವೆ ಸಂಚಾರ ಯೋಗ್ಯವಾಗಲಿದೆ. ಜನತೆಯ ಬಹುಕಾಲದ ಕನಸು ನಸಾಗಿದೆ ಎಂಬ ತೃಪ್ತಿ ನಮಗೆಲ್ಲರಿಗೂ ಇದೆ ಎಂದು ಹೇಳಿದರು. ಜಲಜೀವನ್ ಯೋಜನೆಯಡಿ 68 ಕೋಟಿ ರೂ ಅನುದಾನವನ್ನು ಒದಗಿಸಲಾಗಿದ್ದು ಎಲ್ಲರಿಗೂ ಎಲ್ಲಾ ಕಡೆಗಳಿಗೂ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು. ಗ್ರಾಮೀಣ ರಸ್ತೆಗಳು, ಒಳ ರಸ್ತೆಗಳು, ಮಿನಿ ಸೇತುವೆಗಳು ಸೇರಿದಂತೆ ಜನರ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಕ್ಷೇತ್ರಕ್ಕೆ ಹರಿದು ಬರಲಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
8 ಸೇತುವೆ 51.96 ಕೋಟಿ
ಮುಕ್ರಂಪಾಡಿ, ಸಂಪ್ಯ, ಕುಂಬ್ರ, ಶೇಕಮಲೆ, ಕೌಡಿಚ್ಚಾರ್, ಸಂಟ್ಯಾರ್, ಪೈಚಾರ್ ಮತ್ತು ಕಡಪಾಲ ಸೇತುವೆಗೆ ಒಟ್ಟು 51.96 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಸೇತುವೆ ನಿರ್ಮಾಣಕ್ಕೆ ಒಟ್ಟು 2.8 ಕಿ ಮೀ ಭೂ ಸ್ವಾಧೀನ ಪ್ರಕ್ರಿಯೆಯೂ ನಡೆದಿದೆ. ಸೇತುವೆ ನಿರ್ಮಾಣದ ವೇಳೆ ಅಪಾಯಕಾರಿ ಮುಕ್ತ ವಲಯವಾಗಿ ಘೋಷಣೆಯೂ ಆಗಲಿದೆ. ಆಧುನಿಕ ತಂತ್ರಜ್ಞಾನ ಬಳಸಿ ಸೇತುವೆಯ ನಿರ್ಮಾಣ ಕಾರ್ಯ ನಡೆಯಲಿದೆ. ಮೊಗೆರೋಡಿ ಕನ್ಸ್ಟ್ರಕ್ಷನ್ ಗೆ ಗುತ್ತಿಗೆ ನೀಡಿರುವುದು ಉತ್ತಮ ಕೆಲಸವಾಗಿದೆ ಎಂದು ಶಾಸಕ ಮಠಂದೂರು ಹೇಳಿದರು.ಕುಂಬ್ರ ಸೇತುವೆಯ ಬಳಿ ತೆಂಗಿನ ಕಾಯಿ ಒಡೆಯುವ ಮೂಲಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಸಂಜೀವ ಮಠಂದೂರು ಕಾಮಗಾರಿಗೆ ಚಾಲನೆ ನೀಡಿದರು.
ಅಭಿವೃದ್ದಿಗಾಗಿ ಒತ್ತಡ ಹೆಚ್ಚಾಗಿದೆ ; ಅಂಗಾರ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಈ ಡಬಲ್ ಎಂಜಿನ್ ಸರಕಾರದಿಂದ ಕೆಲಸಗಳು ಆಗುತ್ತದೆ ಎಂಬ ಭರವಸೆ ಜನರಿಗೆ ಹೆಚ್ಚಾಗಿದೆ ಈ ಕಾರಣಕ್ಕೆ ಅಭಿವ್ರದ್ದಿ ವಿಚಾರದಲ್ಲಿ ಒತ್ತಡವೂ ಹೆಚ್ಚಾಗಿದ್ದು ಮನವಿ ಕೊಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಒಳನಾಡು ಮೀನುಗಾರಿಕಾ ಸಚಿವ ಅಂಗಾರ ಹೇಳಿದರು.1994 ರಿಂದ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 76 ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿದೆ. ಇದನ್ನು ಕಂಡು ಸಹಿಸದ ಕೆಲವು ವಿಘ್ನ ಸಂತೋಷಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.ದೇಶದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ. ಯುಪಿಎ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ನಯಾ ಪೈಸೆ ಅನುದಾನ ನೀಡುತ್ತಿರಲಿಲ್ಲ ಮೋದಿ ಪ್ರಧಾನಿಯಾದ ಬಳಿಕ ಈ ಯೋಜನೆಗೆ ಜೀವ ಪಡೆದುಕೊಂಡಿದೆ ಎಂದು ಹೇಳಿದರು. ಮೀನುಗಾರಿಕಾ ಕೃಷಿಯ ಬಗ್ಗೆ ಮಾಹಿತಿ ನೀಡಿದ ಅವರು ಅಡಕೆಯನ್ನೇ ನಂಬಿಕೊಂಡು ಇರಬೇಡಿ ಕೃತಕ ಮೀನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಲಾಭಪಡೆದುಕೊಳ್ಳುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ತಾಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಕೆದಂಬಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ ವಿ ತೀರ್ಥರಾಮ , ಮೊಗೆರೋಡಿ ಕನ್ಸ್ಟ್ರಕ್ಷನ್ ಮಾಲಕ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಬೂಡಿಯಾರ್ ರಾಧಾಕೃಷ್ಣ ರೈ, ಕಡಮಜಲು ಸುಬಾಸ್ ರೈ, ಮಾಜಿ ತಾಪಂ ಸದಸ್ಯೆ ಮೀನಾಕ್ಷಿ, ಚನಿಲ ತಿಮ್ಮಪ್ಪ ಶೆಟ್ಟಿ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ಕೈಕಾರ ಮೊದಲಾದವರು ಉಪಸ್ಥಿತರಿದ್ದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸ್ವಾಗತಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಪ್ರ. ಕಾರ್ಯದರ್ಶಿ ನಿತೀಶ್ಕುಮಾರ್ ಶಾಂತಿವನ ವಂದಿಸಿದರು. ಒಳಮೊಗ್ರು ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ನಟ್ಟಣಿಗೆ ಮುಡ್ನೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ, ಮಾಜಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬಓರ್ಕರ್, ಕಾರ್ಯದರ್ಶಿ ತೀರ್ಥಾನಂದ ದುಗ್ಗಳ, ಸಹಕಾರಿ ಭಾರತಿ ಅಧ್ಯಕ್ಷ ಕೃಷ್ಣಕುಮಾರ್ ರೈ ತಿಂಗಳಾಡಿ, ತಿಲಕ್ ರೈ ಕುತ್ಯಾಡಿ, ಕಂಠ್ರಮಜಲು ಭಾಸ್ಕರ ರೈ, ಒಳಮೊಗ್ರು ಬೂತ್ ಅಧ್ಯಕ್ಷರಾದ ಮಾಧವ ರೈ ಕುಂಬ್ರ, ನಾರಾಯಣ ಪೂಜಾರಿ ಕುರಿಕ್ಕಾರ, ಮಹೇಶ್ ರೈ ಕೇರಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.