ಪುತ್ತೂರು: ಬಹು ಕಾಲದ ಬೇಡಿಕೆ ಮತ್ತು ನಗರಸಭೆ ಆಡಳಿತಕ್ಕೆ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ನೀಡುವ ಜೊತೆಗೆ ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿಯಿಂದ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ರೂ. 1.7 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ನ.2ರಂದು ಹಾರಾಡಿಯ ಸಮೀಪ ಗುದ್ದಲಿ ಪೂಜೆ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ಗುದ್ದಲಿಪೂಜೆ ನೆರವೇರಿಸಿ, ನಾಮಫಲಕ ಅನಾವರಣ ಮಾಡಿದರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಳೀಯ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಪದ್ಮನಾಭ ನಾಕ್, ಮೀನುಗಾರಿಕೆ ನಿಗಮದ ಅಧ್ಯಕ್ಷ ಎ ವಿ ತೀರ್ಥರಾಮ್, ರೈಲ್ವೇ ಇಲಾಖೆ ಸಹಾಯಕ ಇಂಜಿನಿಯರ್ ನಿಖಿಲ್, ಮುರಳಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಗುರುತಿನ ಚೀಟಿ, ಕಾರ್ಯಾದೇಶ ಪತ್ರ ವಿತರಣೆ:
ಪಿ. ಎಂ ಸ್ವ ನಿಧಿ ಯೋಜನೆಯಡಿಯಲ್ಲಿ ಸಾಲ ಪಡೆದು ಬೀದಿ ಬದಿ ವ್ಯಾಪಾರ ನಡೆಸುತ್ತಿರುವ 192 ಫಲಾನುಭವಿಗಳಿಗೆ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ ಇರುವ ಗುರುತಿನ ಫಲಕ ಮತ್ತು ಪ್ರಧಾನಿಯವರ ಸಹಿ ಇರುವ ಪ್ರೋತ್ಸಾಹ ಪತ್ರ ವಿತರಣೆ ಮಾಡಲಾಯಿತು. ಡಾ.ಬಿ. ಆರ್.ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ತಲಾ ರೂ. 2 ಲಕ್ಷದಂತೆ 10 ಫಲಾನುಭವಿಗಳಿಗೆ ರೂ. 20 ಲಕ್ಷ ಮತ್ತು ವಾಜಪೇಯಿ ವಸತಿ ಯೋಜನೆಯಲ್ಲಿ ತಲಾ ರೂ.1.20 ಲಕ್ಷ ದಂತೆ 16 ಫಲಾನುಭವಿಗಳಿಗೆ ರೂ. 19.20 ಲಕ್ಷ ಮಂಜೂರಾಗಿದ್ದು, ಈ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ ಮಾಡಲಾಯಿತು.
ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಸ್ವಚ್ಛ ಸರ್ವೇಕ್ಷಣ-2023ರ ಅಂಗವಾಗಿ ಟಾಯ್ಕಾಥಾನ್ ಕಾರ್ಯಕ್ರಮ ಅಡಿಯಲ್ಲಿ ನಿರುಪಯುಕ್ತ ವಸ್ತುಗಳಿಂದ ಆಟಿಕೆ ಅಥವಾ ಇನ್ನಿತರ ಪ್ರದರ್ಶಕ ಸಾಮಗ್ರಿಗಳನ್ನು ತಯಾರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್, ನಗರಸಭೆ ಸದಸ್ಯರಾದ ದೀಕ್ಷಾ ಪೈ, ಶೈಲಾ ಪೈ, ಪ್ರೇಮಲತಾ ನಂದಿಲ, ಸುಂದರ ಪೂಜಾರಿ ಬಡಾವು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ದಿ.ಶಾ ನಾಮನಿರ್ದೇಶಿತ ಸದಸ್ಯ ರಾಮ್ ದಾಸ್ ಹಾರಾಡಿ ಅತಿಥಿಗಳನ್ನು ಗೌರವಿಸಿದರು. ನಗರಸಭೆ ಸದಸ್ಯರಾದ ಗೌರಿ ಬನ್ನೂರು, ಶಶಿಕಲಾ ಸಿ.ಎಸ್ ಪ್ರಾರ್ಥಿಸಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿದರು.