ಪುತ್ತೂರು:ಮೂವರು ವ್ಯಕ್ತಿಗಳನ್ನು ತ್ರಿಮೂರ್ತಿಗಳೆಂದದ್ದಕ್ಕೆ ತನ್ನ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆಂದು ಹೇಳಿಕೊಂಡು ಪುಣಚ ಪರಿಯಾಲ್ತಡ್ಕ ನಿವಾಸಿಯೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪರಿಯಾಲ್ತಡ್ಕ ನಿವಾಸಿ ಪಿಜಿನ(65ವ) ಎಂಬವರು ಹಲ್ಲೆಗೊಳಗಾದವರು.‘ನ.3ರಂದು ಸಂಜೆ ಪುಣಚ ಸಂತು ಎಂಬವರ ಅಂಗಡಿಗೆ ಹೋಗಿದ್ದ ವೇಳೆ ಅಲ್ಲಿ ಕುಳಿತಿದ್ದ ಪರಿಚಯಸ್ಥರಾದ ರಾಕೇಶ್ ಗೌಡ, ಆದರ್ಶ ಮತ್ತು ಕೃಷ್ಣಪ್ಪ ಅವರನ್ನು ನೋಡಿ ತ್ರಿಮೂರ್ತಿಗಳೆಂದು ಕರೆದೆ. ಈ ವಿಚಾರವಾಗಿ ಅವರು ತಗಾದೆ ಎತ್ತಿಕೊಂಡು ನನ್ನನ್ನು ಪ್ರಶ್ನಿಸಿ ಜಾತಿ ನಿಂದನೆ ಮಾಡಿದ್ದಲ್ಲದೆ ನನಗೆ ಹಲ್ಲೆ ನಡೆಸಿದ್ದಾರೆ. ತಲೆಗೆ ಗಾಯಗೊಂಡ ನಾನು ಪುತ್ತೂರು ಆಸ್ಪತ್ರೆಯಲ್ಲಿ ಔಷಧಿ ಪಡೆದು ಮನೆಗೆ ತೆರಳಿದ್ದೆ. ಆದರೆ, ಹಲ್ಲೆ ನಡೆದಿದ್ದ ಕಡೆಯಲ್ಲೆಲ್ಲಾ ನೋವು ಉಲ್ಪಣಿಸಿದ ಹಿನ್ನೆಲೆಯಲ್ಲಿ ನಾನು ನ.5ಕ್ಕೆ ಪುತ್ತೂರು ಆಸ್ಪತ್ರೆಗೆ ಬಂದು ದಾಖಲಾಗಿದ್ದೇನೆ. ಈ ಘಟನೆ ವಿಚಾರವಾಗಿ ನಾನು ಪೊಲೀಸರಿಗೂ ದೂರು ನೀಡಿದ್ದೇನೆ’ ಎಂದು ಪಿಜಿನ ಅವರು ತಿಳಿಸಿದ್ದಾರೆ. ವಿಟ್ಲ ಪೊಲೀಸರು ಗಾಯಾಳುವಿನ ಹೇಳಿಕೆ ಪಡೆದುಕೊಂಡಿದ್ದಾರೆ. ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಸಹಿತ ಅನೇಕ ದಲಿತ ಮುಖಂಡರು ಆಸ್ಪತ್ರೆಯಲ್ಲಿ ಗಾಯಾಳು ಪಿಜಿನ ಅವರ ಆರೋಗ್ಯ ವಿಚಾರಿಸಿದ್ದಾರೆ.