ವಿಟ್ಲ: ಕೊಳ್ಳಾಡು ಗ್ರಾಮದ ಕುಳಾಲು ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಮಾಡು ದಿನಗಳ ಹಿಂದೆ ಸುರಿದ ಭಾರೀ ಗಾಳಿ ಮಳೆಯ ಪರಿಣಾಮ ಕುಸಿದು ಬಿದ್ದು ಭಾರೀ ಹಾನಿ ಸಂಭವಿಸಿದ ಘಟನೆ ನಡೆದಿದೆ. ಘಟನೆ ನಡೆದು ದಿನಗಳು ಕಳೆದರೂ ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಕಟ್ಟಡದ ಶೋಚನೀಯ ಸ್ಥಿತಿಯ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಮಕ್ಕಳ ಪೋಷಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನೂ ಹೀಗೇ ಬಿಟ್ಟರೆ ಅಪಾಯ ಸಂಭವಿಸುವ ಸಾಧ್ಯತೆ ಹಿನ್ನಲೆಯಲ್ಲಿ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಕೊಳ್ಳಾಡು ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲುರವರು ಚರ್ಚಿಸಿ, ಕೇವಲ ಐದು ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದರು. ಈ ಶಾಲೆಗೆ 92 ವರ್ಷಗಳಾಗಿದ್ದು 6 ಕೊಠಡಿಗಳಿವೆ. 1ರಿಂದ 8ನೇ ತರಗತಿವರೆಗೆ ಒಟ್ಟು 93 ಮಕ್ಕಳಿದ್ದಾರೆ. 6 ಶಿಕ್ಷಕರ ಅಗತ್ಯ ವಿದ್ದು 4 ಮಂದಿ ಇದ್ದು ಇನ್ನೆರಡು ಹುದ್ದೆಗಳು ಖಾಲಿಯಾಗಿವೆ. ಅತಿಥಿ ಶಿಕ್ಷಕರನ್ನು ಶ್ರೀ ವಾರಾಹೀ ಯುವಕ ಮಂಡಲ ಮತ್ತು ಮಕ್ಕಳ ಹೆತ್ತವರು ನೇಮಿಸಿದ್ದಾರೆ. ಸ್ಥಳೀಯರೆಲ್ಲರೂ ಸೇರಿ ಖರೀದಿಸಿದ ಬಸ್‌ನಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಹೆತ್ತವರು, ದಾನಿಗಳು ಕೈಜೋಡಿಸಿದ್ದರೂ ಈ ಶಾಲೆಯ ಬಗ್ಗೆ ಇಲಾಖಾಽಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.