ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವ ಕಟ್ಟೆಪೂಜೆ, ಬೆಟ್ಟಂಪಾಡಿ ಬೆಡಿ, ದರ್ಶನ ಬಲಿ, ಬಟ್ಟಲು ಕಾಣಿಕೆ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಉತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ. 8 ಮತ್ತು 9 ರಂದು ನಡೆಯಿತು.

ಕಟ್ಟೆಪೂಜೆ, ಬೆಟ್ಟಂಪಾಡಿ ಬೆಡಿ
ನ. 8 ರಂದು ರಾತ್ರಿ ದೇವಸ್ಥಾನದಲ್ಲಿ ಮಹಾಪೂಜೆ, ಶ್ರೀ ದೇವರ ಉತ್ಸವ ಬಲಿ, ಭೂತಬಲಿ‌ ನಡೆದು ವಸಂತಕಟ್ಟೆ ಪೂಜೆ ನಡೆಯಿತು. ಬಳಿಕ ದೇವಳದಿಂದ ಹೊರಟು ದೇವರ ಸವಾರಿ ನಡೆಯಿತು. ದಾರಿಯುದ್ದಕ್ಕೂ ಕಟ್ಟೆಪೂಜೆ, ಭಕ್ತಾದಿಗಳು ತಳಿರು ತೋರಣಗಳಿಂದ ದೇವರನ್ನು ಬರಮಾಡಿಕೊಂಡರು. ದೇವರ ಮೂಲಸ್ಥಾನ ಬಿಲ್ವಗಿರಿ ಪ್ರವೇಶ ನಡೆದು ಕಟ್ಟೆಪೂಜೆ ನಡೆಯಿತು. ಇದೇ ವೇಳೆ ಆಕರ್ಷಕ ‘ಬೆಟ್ಟಂಪಾಡಿ ಬೆಡಿ’ ಪ್ರದರ್ಶನಗೊಂಡಿತು. ಬಿಲ್ವಗಿರಿಯಿಂದ ಹಿಂತಿರುಗಿ ಕೆರೆ ಉತ್ಸವ ನಡೆಯಿತು. ಪುನಃ ದೇವಾಲಯದ ಒಳಗಾಗಿ ಮಂಗಳಾರತಿ ನಡೆಯಿತು.

ದರ್ಶನ ಬಲಿ, ಬಟ್ಟಲು ಕಾಣಿಕೆ
ನ. 9 ರಂದು ಬೆಳಿಗ್ಗೆ ಉತ್ಸವ ಬಲಿ, ದರ್ಶನ ಬಲಿ‌ ನಡೆದು ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಪ್ರಸಾದ ವಿತರಣೆ,‌ ಮಂತ್ರಾಕ್ಷತೆಯಾಗಿ ಮಹಾಪೂಜೆ ನಡೆಯಿತು.

ಶಾಸಕರ ಭೇಟಿ
ಪುತ್ತೂರು‌ ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಭಜನಾ ಕಾರ್ಯಕ್ರಮ
ನ. 8 ರಂದು ಬೆಳಿಗ್ಗೆ ಮತ್ತು ರಾತ್ರಿ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರ.ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಆಡಳಿತ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ಊರ ಪರವೂರ ಸಾವಿರಾರು ಮಂದಿ ಭಕ್ತಾಭಿಮಾನಿಗಳು ಪಾಲ್ಗೊಂಡು ದೇವರ ಉತ್ಸವ ಕಣ್ತುಂಬಿಕೊಂಡರು.

3000 ಕ್ಕೂ‌ ಮಿಕ್ಕಿ ಭಕ್ತಾದಿಗಳಿಗೆ ಅನ್ನಪ್ರಸಾದ
ಉತ್ಸವದಲ್ಲಿ ಪಾಲ್ಗೊಂಡ 3 ಸಾವಿರಕ್ಕೂ‌ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಜಾತ್ರೋತ್ಸವದ ಅಂಗವಾಗಿ ಭಕ್ತಾದಿಗಳು ವಿಶೇಷ ಸಂಕಲ್ಪ ಸಹಿತ ಅನ್ನದಾನ ಸೇವೆ ಮಾಡಿಸಿದರು.

‘ಸುದ್ದಿ’ ಯಲ್ಲಿ ನೇರ ಪ್ರಸಾರ
ನ. 8 ರಂದು ರಾತ್ರಿ ಮತ್ತು ನ. 9 ರಂದು ಬೆಳಿಗ್ಗೆಯಿಂದ ಉತ್ಸವ ಕಾರ್ಯಕ್ರಮಗಳು ‘ಸುದ್ದಿ ಯುಟ್ಯೂಬ್ ಚಾನೆಲ್’ ನಲ್ಲಿ ನೇರಪ್ರಸಾರಗೊಂಡಿತು. ಸಾವಿರಾರು ಮಂದಿ ನೇರ ಪ್ರಸಾರ ವೀಕ್ಷಣೆ ಮಾಡಿದರು.

LEAVE A REPLY

Please enter your comment!
Please enter your name here