ಮಡಂತ್ಯಾರು: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿ ಜಿಲ್ಲೆಯಲ್ಲಿ 12 ಶಾಖೆಗಳ ಮೂಲಕ ವ್ಯವಹರಿಸುತ್ತಾ 2021-22ನೇ ಸಾಲಿನಲ್ಲಿ ರೂ. 506.59 ಕೋಟಿ ವ್ಯವಹಾರ ನಡೆಸಿ ದಾಖಲೆಯ ರೂ 1.20 ಕೋಟಿ ಲಾಭಾಂಶ ಗಳಿಸಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13. ನೇ ಶಾಖೆಯು ನ.14 ರಂದು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಪೊಂಪೈ ಸಂಕೀರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನೂತನ ಶಾಖೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟನೆ ನಡೆಸಲಿದ್ದಾರೆ. ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.ಭದ್ರತಾ ಕೊಠಡಿಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ನ ಧರ್ಮಗುರು ರೆ.ಫಾ. ಬೇಸಿಲ್ ವಾಸ್, ಕಂಪ್ಯೂಟರ್ ವಿಭಾಗವನ್ನು ಮಾಲಾಡಿ ಗ್ರಾ.ಪಂ ಅಧ್ಯಕ್ಷೆ ಬೇಬಿ ಸುಸ್ಸಾನಾ ಉದ್ಘಾಟಿಸಲಿದ್ದಾರೆ. ಪ್ರಥಮ ಠೇವಣಿಪತ್ರದ ಬಿಡುಗಡೆಯನ್ನು ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿಠಲ ಶೆಟ್ಟಿ ಮೂಡಾಯೂರು ನಡೆಸಿಕೊಡಲಿದ್ದಾರೆ.
ನಿವೃತ್ತ ಉಪತಹಶೀಲ್ದಾರ್ ಬಿ ಅಬ್ದುಲ್ ರಹಿಮಾನ್, ಉದ್ಯಮಿ ಪಿ ಅನಿಲ್ ಕುಮಾರ್ ಅಽಕಾರಿ, ಕಟ್ಟಡದ ಮಾಲಿಕ ಜೇಸನ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಘವು ಕಳೆದ 20 ವರ್ಷಗಳಲ್ಲಿ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ ಮತ್ತು ಬೊಳುವಾರು ಹೀಗೆ 12 ಶಾಖೆಗಳನ್ನು ಹೊಂದಿ ಇದೀಗ ಮಡಂತ್ಯಾರಿನಲ್ಲಿ 13 ನೇ ಶಾಖೆ ತೆರೆಯುತ್ತಿದೆ ಎಂದರು. ಜಾಮೀನು ಸಾಲ, ಅಡಮಾನ ಸಾಲ, ಗೃಹ ಸಾಲ, ವಾಹನ ಸಾಲ, ಆಭರಣ ಸಾಲ, ಉಚಾಪತಿ ಸಾಲ (ಓವರ್ ಡ್ರಾಫ್ಟ್) ಹಾಗೂ ಇನ್ನಿತರ ಸಾಲಗಳ ಮೂಲಕ ರೂ. 80. .56 ಕೋಟಿಯಷ್ಟು ಸಾಲ ನೀಡಿರುತ್ತದೆ. ಸಂಘದ ಪ್ರಗತಿ, ಸೇವೆ ಮತ್ತು ಕಾರ್ಯ ಸಾಧನೆಯನ್ನು ಪರಿಗಣಿಸಿ ಮಂಗಳೂರಿನಲ್ಲಿ ನಡೆದ 64 ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ 2017-18 ನೇ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ವೆಂದು ಪ್ರಶಸ್ತಿ ಪತ್ರ ಪಡೆದುಕೊಂಡಿರುತ್ತದೆ.
ಸಂಘವು ಪ್ರಸ್ತುತ 2.81 ಕೋಟಿ ರೂ.ಗಳಷ್ಟು ಕ್ಷೇಮ ನಿಧಿ ಮತ್ತು 2.88 ಕೋಟಿ ರೂ. ಗಳಷ್ಟು ಇತರ ನಿಽಗಳನ್ನು ಹೊಂದಿ ರೂ. 112.61 ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿದೆ. ಸಂಘದ ಆರಂಭದಿಂದ ಇಂದಿನವರೆಗೆ ಆಡಿಟ್ ವರ್ಗೀಕರಣದಲ್ಲಿ ಎ ತರಗತಿಯನ್ನು ಹೊಂದಿದ್ದು, ಇಷ್ಟು ವರ್ಷದುದ್ದಕ್ಕೂ ಸದಸ್ಯರಿಗೆ ಡಿವಿಡೆಂಡ್ ಪಾವತಿಸಿದೆ ಎಂದು ಸೀತಾರಾಮ ರೈ ವಿವರಿಸಿದರು.
ಸರಕಾರಿ ಶಾಲೆಯಲ್ಲಿ 6 ರಿಂದ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ 942 ಮಕ್ಕಳಿಗೆ ರೂ 17,23,000 ವಿದ್ಯಾನಿಽ ಸಹಾಯಧನ ವಿತರಿಸಿದೆ. 2022-23 ನೇ ಸಾಲಿನಲ್ಲಿ ಸಂಘವು ಸುಮಾರು ರೂ.600 ಕೋಟಿಯಷ್ಟು ವ್ಯವಹಾರ ನಡೆಸಿ ರೂ.1.40 ಕೋಟಿಯಷ್ಟು ಲಾಭ ದಾಖಲಿಸುವ ಗುರಿ ಹೊಂದಿದೆ, ಅಲ್ಲದೆ ರೂ.110 ಕೋಟಿಯಷ್ಟು ಠೇವಣಿ ಸಂಗ್ರಹಿಸುವ ಹಾಗೂ ರೂ.93 ಕೋಟಿಯಷ್ಟು ಸಾಲ ನೀಡುವ ಯೋಜನೆಯನ್ನು ಇಟ್ಟುಕೊಂಡಿದೆ ಎಂದು ಅವರು ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಕೆ ರವೀಂದ್ರ ಶೆಟ್ಟಿ ಕೇನ್ಯ, ಅಶ್ವಿನ್ ಎಲ್ ಶೆಟ್ಟಿ ಸವಣೂರು, ಎನ್ ರಾಮಯ್ಯ ರೈ ತಿಂಗಳಾಡಿ ಮತ್ತು ಜೈರಾಜ್ ಭಂಡಾರಿ, ಮಹಾ ಪ್ರಬಂಧಕರಾದ ವಸಂತ ಜಾಲಾಡಿ ಉಪಸ್ಥಿತರಿದ್ದರು.