ಬೀದಿ ದೀಪ ಹೊರತು ಪಡಿಸಿ ಉಳಿದೆಲ್ಲಾ ಕರ್ತವ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿ: ಗ್ರಾ. ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘದ ಸಮಾಲೋಚನಾ ಸಭೆಯಲ್ಲಿ ತೀರ್ಮಾನ

0

ಪುತ್ತೂರು:ಬೀದಿ ದೀಪ ನಿರ್ವಹಣೆ ಹೊರತು ಪಡಿಸಿ ಉಳಿದಂತೆ ಪಂಚಾಯತ್‌ಗೆ ಸಂಬಂಧಿಸಿ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಡಿ.೧೨ರಿಂದ ಬೆಳಗಾಂನಲ್ಲಿ ನಡೆಯಲಿರುವ ನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗುವುದಾಗಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯು ನ.೧೨ರಂದು ತಾಲೂಕು ಅಧ್ಯಕ್ಷ ಹೊನ್ನಪ್ಪರವರ ಆರ್ಯಾಪು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ನಮ್ಮ ಹೋರಾಟ ಪಂಚಾಯತ್‌ನ ವಿರುದ್ಧವಾಗಲಿ, ಅಧಿಕಾರಿಗಳ ವಿರುದ್ಧ ಅಲ್ಲ. ನಮ್ಮ ಬೇಡಿಕೆ ಈಡೇಸಲು ಆಗ್ರಹಿಸಿ ಮುಷ್ಕರ ನಡೆಸಲಾಗುವುದು. ಈ ಮುಷ್ಕರದಲ್ಲಿ ಪ್ರತಿ ಪಂಚಾಯತ್‌ನಿಂದ ಕನಿಷ್ಠ ಇಬ್ಬರು ಭಾಗವಹಿಸುವುದು. ಸಿಬಂದಿಗಳಿಗಿರುವ ರಜೆಗಳನ್ನು ಬಳಸಿಕೊಂಡು ಮುಷ್ಕರದಲ್ಲಿ ಭಾಗಿಗಳಾಗುವುದು. ತಮ್ಮ ರಜೆಗಳಿಗೆ ಮುಂಚಿತವಾಗಿ ಸಿಬಂದಿಗಳು ಮನವಿ ಸಲ್ಲಿಸಬೇಕು. ಅಲ್ಲದೆ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಸಂಘಟನೆಯಿಂದಲೂ ಇದಕ್ಕೆ ಪೂರಕವಾಗಿ ಮನವಿ ಮಾಡಲಾಗುವುದು. ಪಂಚಾಯತ್‌ನಿಂದ ಅನುಮೋದನೆಯಾಗದಿರುವ ಸಿಬಂದಿಗಳು ಮುಷ್ಕರದಲ್ಲಿ ಭಾಗಿಗಳಾದರೆ ಅವರಿಗೆ ಆಗುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಪಂಪು ಚಾಲಕರು ಸೇರಿದಂತೆ ಪಂಚಾಯತ್‌ನಲ್ಲಿರುವವರು ಎಲ್ಲರೂ ಪಂಚಾಯತ್ ಸಿಬಂದಿಗಳೇ ಆಗಿದ್ದು ಅವರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಅನುಮೋದನೆ ದೊರೆಯದ ಸಿಬಂದಿಗಳಿಗೆ ಏನೇ ಸಮಸ್ಯೆ ಬಂದರೂ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಸಂಘಟನೆಗಳ ಸಹಕಾರ, ಬೆಂಬಲ ನೀಡುವುದಾಗಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಡಿ.೧೨ರಿಂದ ಅನಿರ್ಧಿಷ್ಟವಾಗಿ ನಡೆಯುವ ಮುಷ್ಕರದಲ್ಲಿ ಎಲ್ಲಾ ನೌಕರರು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ಬೆಳಗಾಂನ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಅಲ್ಲಿಗೆ ತೆರಳಲು ಅಸಾಧ್ಯವಾದವರು ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿಯೇ ಇರಬೇಕು ಎಂದು ತೀರ್ಮಾನಿಸಿದರು.

`ಹೊಳಪು’ ಕಾರ್ಯಕ್ರಮಕ್ಕೆ ಗೈರು:
ನ.೨೬ರಂದು ಕುಂದಾಪುರದ ಕೋಟದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಸದಸ್ಯರು ಕ್ರೀಡಾಕೂಟ `ಹೊಳಪು’ ಕಾರ್ಯಕ್ರಮದಲ್ಲಿ ಪಂಚಾಯತ್ ನೌಕರರೂ ಭಾಗವಹಿಸುವಂತೆ ಆಮಂತ್ರಣಗಳು ಬಂದಿದ್ದು, ಈ ಕಾರ್ಯಕ್ರಮದಲ್ಲಿ ನೌಕರರು ಭಾಗವಹಿಸದಿರಲು ಈಗಾಗಲೇ ನಿರ್ಧರಿಸಲಾಗಿದೆ. ನಮ್ಮ ಹೋರಾಟ ನಿರಂತರ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಾಲೂಕು ಅಧ್ಯಕ್ಷ ಹೊನ್ನಪ್ಪ ತಿಳಿಸಿದರು.

ತಾಲೂಕು ಅಧ್ಯಕ್ಷ ಹೊನ್ನಪ್ಪ ಮಾತನಾಡಿ, ಚುನಾವಣಾ ಕರ್ತವ್ಯ ಸೇರಿದಂತೆ ಪಂಚಾಯತ್‌ನ ನೌಕರರ ಎಲ್ಲಾ ರೀತಿಯ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಆದರೂ ಜನರು ಹಾಗೂ ಅಧಿಕಾರಿಗಳಿಂದ ಬಯ್ಯಸಿಕೊಂಡು ಕೆಲಸ ಮಾಡುವ ನಮಗೆ ದೊರೆಯುವುದು ಶೂನ್ಯ ಮಾತ್ರ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಲ್ಲಿಸುವ ನಮ್ಮ ಮನವಿಗೆ ಯಾವುದೇ ಸ್ಪಂಧನೆಯಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ. ಹೋರಾಟ ನಮ್ಮ ಉಳಿವಿಗಾಗಿ. ಇದಕ್ಕಾಗಿ ಪ್ರತಿಯೊಬ್ಬ ನೌಕರರೂ ಎಲ್ಲಾ ಕರ್ತವ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸುವ ಮೂಲಕ ಬೆಂಬಲಿಸಬೇಕು ಎಂದು ತಿಳಿಸಿದರು.

ಕಾರ್ಯದರ್ಶಿ ಶಶಿಧರ ಮಾವಿನಕಟ್ಟೆ ಮಾತನಾಡಿ, ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳನ್ನು ನಿಭಾಯಿಸುವವರು ನೌಕರರು. ಆದರೂ ನಮಗೆ ಯಾವುದೇ ಸೇವಾ ಭದ್ರತೆಯಿಲ್ಲ. ಕನಿಷ್ಠ ವೇತದನದಲ್ಲಿ ದುಡಿಯಬೇಕಾಗಿದೆ. ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ನೇಮಕಗೊಳಿಸಬೇಕು. ಅರ್ಹತೆಯಾಧಾರದಲ್ಲಿ ಮುಂಭಡ್ತಿ ನೀಡಬೇಕು. ಇದಕ್ಕಾಗಿ ನೌಕರರಾದ ನಾವೆಲ್ಲರೂ ಒಗ್ಗಟ್ಟಿನಿಂದ ಮುಷ್ಕರದಲ್ಲಿ ಭಾಗಿಗಳಾಗಿ ಸರಕಾರವನ್ನು ಎಚ್ಚರಿಸಲಾಗುವುದು ಎಂದು ಹೇಳಿದರು.

ಸುದ್ದಿ ಅಭಿನಂದನೆ:
ನಮ್ಮ ಹೋರಾಟದ ಯಶಸ್ವಿಯಲ್ಲಿ ನಿರಂತರವಾಗಿ ಸಹಕಾರ ಪ್ರೋತ್ಸಾಹ ನೀಡುತ್ತಿರುವ ಸುದ್ದಿ ಪತ್ರಿಕೆಗೆ ಅಭಿನಂದನೆ. ನಮ್ಮ ಬೇಡಿಕೆಯಂತೆ ಸಿ ಮತ್ತು ಡಿ ಗ್ರೂಪ್ ನೌಕರರ ಖಾಯಂಗೊಂಡಾಗ ನಾವು ಸುದ್ದಿಯ ಆಶಯದಂತೆ ಲಂಚ, ಭ್ರಷ್ಟಾಚಾರ ರಹಿತವಾಗಿ ಜನರಿಗೆ ಸೇವೆ ನೀಡುವ ಮೂಲಕ ಡಾ.ಯು.ಪಿ ಶಿವಾನಂದರವರ ಅಭಿಯಾನವನ್ನು ಬೆಂಬಲಿಸಲಾಗುವುದು ಎಂದು ತಾಲೂಕು ಅಧ್ಯಕ್ಷ ಹೊನ್ನಪ್ಪ ತಿಳಿಸಿದರು.

ಸಂಘದ ಕಾರ್ಯದರ್ಶಿ ಮಮತಾ, ಹೋರಾಟ ಸಮಿತಿ ಅಧ್ಯಕ್ಷ ಗಣೇಶ, ಕಾರ್ಯದರ್ಶಿ ಜ್ಯೋತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ಗಳ ನೌಕರರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here