ವಿಟ್ಲ: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವ ರನ್ನು ವಿಟ್ಲ ಪೊಲೀಸರ ತಂಡ ಬಂಧಿಸಿದೆ.
ಮಂಜೇಶ್ವರ ತಾಲೂಕಿನ ಉಪ್ಪಳ ಚೆರುಗೋಳಿ ನಿವಾಸಿ ಆಯಿಶಾ ಮಂಜಿಲ್ನ ಯೂಸುಫ್ ರವರ ಪುತ್ರ ಅಬ್ದುಲ್ ನಾಸಿರ್ ಯಾನೇ ಚೆರುಗೋಳಿ ನಾಸಿರ್ ಬಂಧಿತ ಆರೋಪಿ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2015 ರಲ್ಲಿ ನಡೆದ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದ ಅಬ್ದುಲ್ ನಾಸಿರ್ ಯಾನೇ ಚೇರುಂಗೊಳಿ ನಾಸಿರ್ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯ ಪತ್ತೆಗೆ ವಾರಂಟ್ ಜಾರಿ ಮಾಡಿತ್ತು. ವಿಟ್ಲ ಠಾಣಾ ಪೊಲೀಸರು ಆರೋಪಿಯನ್ನು ಕಾಸರಗೋಡಿನ ವಿದ್ಯಾನಗರದಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿ ವಿರುದ್ಧ ಕಾಸರಗೋಡಿನ ವಿವಿಧ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ವಿಶಾಖಪಟ್ಟಣದಲ್ಲಿ ಒಂದು ಗಾಂಜಾ ಪ್ರಕರಣದಲ್ಲಿ ಆರೋಪಿಯಾಗಿ 4 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿ ಹೊರಬಂದಿದ್ದ. ಈತನ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.
ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ರವರ ನೇತೃತ್ವದಲ್ಲಿ ಠಾಣಾ ಪ್ರೊಬೆಷನರಿ ಎಸ್.ಐ. ಧನಂಜಯ, ಎಎಸ್ ಐ. ಜಯರಾಮ ಹಾಗೂ ಸಿಬ್ಬಂದಿ ಹೇಮರಾಜ್ರವರು ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.