ಪುತ್ತೂರು: ಮಾಯಿದೆ ದೇವುಸ್ ಚರ್ಚ್ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2022 -ಸೀಸನ್ 2 ‘ ಜ.8 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದ್ದು, ಈ ಕ್ರಿಕೆಟ್ ಕೂಟದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ವರ್ಷ ನಡೆಸಿದ ಈ ಪಂದ್ಯಾಟವು ಸರ್ವರ ಸಹಕಾರದಿಂದ ಚೊಚ್ಚಲ ಪ್ರಯತ್ನದಲ್ಲಿಯೇ ಅಭೂತಪೂರ್ವ ಯಶಸ್ಸನ್ನು ಗಳಿಸಿತ್ತು. ಇದೇ ಉತ್ಸಾಹದಲ್ಲಿ ಈ ವರ್ಷವೂ ಕಳೆದ ವರ್ಷದ ಮಾದರಿಯಂತೆ ಕ್ರಿಕೆಟ್ ಕೂಟವನ್ನು ಆಯೋಜಿಸಲಿದ್ದು, ಕ್ರಿಕೆಟ್ ಪ್ರಿಯರ ಸಹಕಾರ ಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಉದ್ಯಮಿ ರೋಶನ್ ರೆಬೆಲ್ಲೋ ಕಲ್ಲಾರೆ ಮಾಲಕತ್ವದ ಸಿಝ್ಲರ್ ಸ್ಟ್ರೈಕರ್ಸ್, ಸೋಜಾ ಮೆಟಲ್ ಮಾರ್ಟ್ನ ದೀಪಕ್ ಮಿನೇಜಸ್ ದರ್ಬೆ ಮಾಲಕತ್ವದ ಸೋಜಾ ಸೂಪರ್ ಕಿಂಗ್ಸ್, ಕ್ರಿಶಲ್ ಸ್ಟೀಲ್ಸ್ನ ಕಿರಣ್ ಡಿ’ಸೋಜ ಹಾಗೂ ಮೆಲ್ವಿನ್ ಪಾಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ್ಸ್, ಶಿಂಗಾಣಿ ಪ್ರದೀಪ್ ವೇಗಸ್(ಬಾಬಾ) ಮಾಲಕತ್ವದ ಫ್ಲೈ ಝೋನ್ ಅಟ್ಯಾಕರ್ಸ್, ದರ್ಬೆ ಸೈಂಟ್ ಲಾರೆನ್ಸ್ ಸಾ ಮಿಲ್ನ ಸಿಲ್ವೆಸ್ತರ್ ಡಿ’ಸೋಜ ಮಾಲಕತ್ವದ ಎಸ್.ಎಲ್ ಗ್ಲ್ಯಾಡಿಯೇಟರ್ಸ್, ನೈತಾಡಿ ಲೆಸ್ಟರ್ ಕೆಟರರ್ಸ್ನ ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ್ಸ್ ಹೀಗೆ ಆರು ತಂಡಗಳು ಮತ್ತೊಮ್ಮೆ ಹಣಾಹಣಿಗೆ ಸಿದ್ಧವಾಗುತ್ತಿವೆ. ಸಿಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ್ಸ್ ತಂಡವು ಚಾಂಪಿಯನ್ ಆಗಿ, ದೀಪಕ್ ಮಿನೇಜಸ್ ಮಾಲಕತ್ವದ ಸೋಜಾ ಸೂಪರ್ ಕಿಂಗ್ಸ್ ರನ್ನರ್ಸ್ ಆಗಿ ಹೊರ ಹೊಮ್ಮಿತ್ತು.
ಕ್ಲಬ್ ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ, ಕ್ರೀಡಾ ಕಾರ್ಯದರ್ಶಿ ಸಿಲ್ವೆಸ್ತರ್ ಗೊನ್ಸಾಲ್ವಿಸ್, ಸಿಪಿಎಲ್ ಆಯೋಜಕರಾದ ಪ್ರಕಾಶ್ ಸಿಕ್ವೇರಾ, ಆಲನ್ ಮಿನೇಜಸ್, ಕ್ಲಬ್ ಸದಸ್ಯರಾದ ಜ್ಯೋ ಡಿ’ಸೋಜ, ರೋಯ್ಸ್ ಪಿಂಟೋ, ರೋಹನ್ ಡಾಯಸ್, ರೋಶನ್ ಡಾಯಸ್ ಉಪಸ್ಥಿತರಿದ್ದರು.
ಡಿ.3:ಬಿಡ್ಡಿಂಗ್ ಪ್ರಕ್ರಿಯೆ..
ಸಂಘಟಕರು ಆರಿಸಿದ ಬಲಿಷ್ಟ 12 ಮಂದಿ ಐಕಾನ್ ಆಟಗಾರರಲ್ಲದೆ ನೋಂದಾವಣೆ ಮಾಡಿದಂತಹ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಪಾಯಿಂಟ್ಸ್ ಆಧಾರದಲ್ಲಿ ಡಿ.3 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ೬೦ಕ್ಕೂ ಮಿಕ್ಕಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಮೊದಲು ನ.೨೬ ರಂದು ಬಿಡ್ಡಿಂಗ್ ಪ್ರಕ್ರಿಯೆ ನಡೆಸಲಾಗುವುದು ಎಂದು ಸೂಚಿಸಲಾಗಿತ್ತು. ಪ್ರತೀ ತಂಡಕ್ಕೆ ಐದು ಬಾರಿ ಆಟವಾಡುವ ಅವಕಾಶವನ್ನು ಹೊಂದಲಾಗಿದ್ದು ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ ಸುತ್ತಿಗೆ ತೇರ್ಗಡೆ ಹೊಂದುವ ಅರ್ಹತೆ ಹೊಂದುತ್ತದೆ. ಲೀಗ್, ಫ್ಲೇ ಆಫ್ ಸುತ್ತಿನಲ್ಲಿ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್ ಸೇರಿದಂತೆ ಒಟ್ಟು 18ಪಂದ್ಯಗಳು ನಡೆಯಲಿವೆ. ಫಿಲೋಮಿನಾದ ಎರಡು ಮೈದಾನಗಳಲ್ಲಿ ಏಕಕಾಲದಲ್ಲಿ ಪಂದ್ಯಗಳು ಜರಗಲಿವೆ.