ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟ- ಯೋಗಾಸನ ಸ್ಪರ್ಧೆಯಲ್ಲಿ ಫಿಲೋಮಿನಾದ ತೃಪ್ತಿ ಪ್ರಥಮ

0

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ವತಿಯಿಂದ ಹಾವೇರಿಯಲ್ಲಿ ಆಯೋಜಿಸಿದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟ-2022-23 ಇದರಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತೃಪ್ತಿ ಎನ್.ರವರು ಯೋಗಾಸನ ಪಂಗಡ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.


ತೃಪ್ತಿ ಎನ್.ರವರು ಈ ಹಿಂದೆ ಎಂಟನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಹಾವೇರಿಯಲ್ಲಿ ಆನ್‌ಲೈನ್ ಮೂಲಕ ಜರಗಿದ, ಝೂಮ್ ಆಪ್ ಮುಖೇನ ನೇರಪ್ರಸಾರ ಹೊಂದಲಾದ 3ನೇ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್-2022 ಸ್ಪರ್ಧೆಯಲ್ಲಿ ವಯೋಮಿತಿ 15-20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ನ.19 ರಿಂದ 21ರ ವರೆಗೆ ವಿಜಯಪುರ ತಿಡಗುಂಡಿ ಕೆಜಿಎಸ್‌ಎಸ್ ಮಾನಸಗಂಗೋತ್ರಿ ವಸತಿಯುತ ಶಾಲೆಯಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಜರಗಿದ 3ನೇ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಜ್ಯೂನಿಯರ್ ಬಾಲಕಿಯರ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಾಗೂ ಕಲಾತ್ಮಕತೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಮಾಡಾವು ನಿವಾಸಿ ಐತ್ತಪ್ಪ ನಾಯ್ಕ್ ಹಾಗೂ ಪದ್ಮಲ ಕುಮಾರಿ ದಂಪತಿ ಪುತ್ರಿಯಾಗಿರುವ ತೃಪ್ತಿ ಎನ್‌ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಾಂದೀಪನಿ ಶಾಲೆಯಲ್ಲಿ ಪೂರೈಸಿರುತ್ತಾರೆ. ತೃಪ್ತಿ ಎನ್.ರವರು ಬೆಂಗಳೂರು ಕುಂಡಲಿನಿ ಯೋಗ ಶಾಲೆಯವರು ಹಮ್ಮಿಕೊಂಡ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ, ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್‌ರವರು ಆಯೋಜಿಸಿದ ಸ್ಪರ್ಧೆಯಲ್ಲಿ ಪ್ರಥಮ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ತೃಪ್ತಿರವರು ಭಾಗವಹಿಸಿ ಅನೇಕ ಪದಕಗಳನ್ನು ಪಡೆದಿರುತ್ತಾರೆ. ಇವರಿಗೆ ನವೀನ್ ಕುಮಾರ್ ಕೆಯ್ಯೂರುರವರು ತರಬೇತುದಾರರಾಗಿ ತರಬೇತಿ ನೀಡಿರುತ್ತಾರೆ. ಇವರನ್ನು ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯರವರು ಅಭಿನಂದಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here