ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಿವೃತ್ತ ಮುಖ್ಯ ನ್ಯಾ. ಮೂ. ದಿ. ಎಂ. ರಾಮ ಜೋಯಿಸ್ ಸ್ಮರಣಾರ್ಥ ದತ್ತಿ ಉಪನ್ಯಾಸಕ್ಕೆ ಚಾಲನೆ

0

ನ್ಯಾಯಾಂಗ ಮತ್ತು ಶಾಸಕಾಂಗಗಳು ತಮ್ಮ ಮಿತಿಯನ್ನು ಅರಿಯಬೇಕು: ನ್ಯಾ. ಕೃಷ್ಣ ಎಸ್ ದೀಕ್ಷಿತ್

ಭಾರತದ ಸಂವಿಧಾನ ಎಂಬುದು ಸರಕಾರವನ್ನು ಯಾವ ರೀತಿ ನಡೆಸಬೇಕು, ಸರಕಾರದ ವಿವಿಧ ಭಾಗಗಳು ಹಾಗೂ ಅವುಗಳ ವ್ಯಾಪ್ತಿಯೇನು ಮತ್ತು ಅವುಗಳು ನಾಗರಿಕರ ಜೊತೆಗೆ ಹೇಗೆ ವರ್ತಿಸಬೇಕೆಂಬ ರೂಪುರೇಷೆಯನ್ನು ಕೊಡುವ ರಾಷ್ಟ್ರದ ಮಹಾನ್ ಗ್ರಂಥವಾಗಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ಎಸ್ ದೀಕ್ಷಿತ್ ಹೇಳಿದರು.

ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಿವೃತ ಮುಖ್ಯ ನ್ಯಾಯಮೂರ್ತಿಗಳಾದ ದಿ. ಎಂ ರಾಮ ಜೋಯಿಸ್ ಸ್ಮರಣಾರ್ಥ ನಡೆದ ಮೊದಲ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,
ಅಧಿಕಾರಗಳ ವಿಭಜನೆಯು ಆಡಳಿತದ ಕಾರ್ಯವಿಧಾನವನ್ನು ಮೂರು ಶಾಖೆಗಳಾಗಿ ವಿಂಗಡಿಸುತ್ತದೆ. ಭಾರತ ಸಂವಿಧಾನದ ಮೂಲತತ್ವಗಳು ಅತ್ಯಂತ ಪ್ರಮುಖವಾಗಿ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಕುರಿತು ವಿಸ್ತಾರವಾದ ವಿವರಣೆಯನ್ನು ನೀಡುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಅಂಗವು ಕಾರ್ಯ ನಿರ್ವಹಿಸಿದಾಗ ಸಮಸ್ಯೆಗಳು ಬರುವುದಿಲ್ಲ. ಪ್ರತಿಯೊಂದು ಅಂಗವೂ ಹೊಂದಿರುವ ಅಧಿಕಾರಗಳಿಗೆ ಅಡಚಣೆ ಮಾಡ ದಂತೆ ಎಲ್ಲ ಅಂಗಗಳೂ ಎಚ್ಚರಿಕೆಯಿಂದಿರಬೇಕು. ಪ್ರತಿಯೊಂದು ಅಂಗವು ತಮ್ಮ ಮಿತಿಯನ್ನು ಮೀರದೇ, ತನ್ನ ವ್ಯಾಪ್ತಿಯ ಕೆಲಸವನ್ನು ಸರಿಯಾಗಿ ನಿರ್ವಹಿಸಿದಾಗ ಸಂವಿಧಾನದ ನಿಜವಾದ ಆಶಯವು ನೆರವೇರುತ್ತದೆ. ಅಂತಹ ಒಂದು ಮಹತ್ತರ ಬದಲಾವಣೆ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಆಗಬೇಕಿದೆ ಎಂದು ಹೇಳಿದರು. ತಮ್ಮ ವಿಶೇಷ ಉಪನ್ಯಾಸದ ನಂತರ ಸುಮಾರು 20 ನಿಮಿಷಗಳ ಕಾಲ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣ ಭಟ್ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಉದ್ದೇಶದಿಂದ ವಿವಿಧ ವಿದ್ಯಾಸಂಸ್ಥೆಗಳನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಸ್ಥಾಪಿಸಿತ್ತು. ಮುಖ್ಯವಾಗಿ ನ್ಯಾಯೇನ ಧಾರ್ಯತೇ ಲೋಕಾಃ ಎಂಬ ವಿಶೇಷ ಆಶಯವನ್ನು ಮೂಲವಾಗಿಟ್ಟು 1988ರಲ್ಲಿ ಆರಂಭವಾದ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇಂದು ಲಕ್ಷಾಂತರ ಸೇವಾ ಮನೋಭಾವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ವಕೀಲರನ್ನು ಸಮಾಜದ ವಿವಿಧ ವಲಯಗಳಿಗೆ ನೀಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿರುವ ಅಧಿವಕ್ತ ಪರಿಷದ್ ಕರ್ನಾಟಕ, ದಕ್ಷಿಣ ಪ್ರಾಂತ್ಯದ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರನಾಥ್ ಪಿ. ಎಸ್ ಮಾತನಾಡಿ, ಅಧಿವಕ್ತ ಪರಿಷದ್ ನ ಕಾರ್ಯಕ್ರಮಗಳ ರೂಪುರೇಶೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಕರ್ನಾಟಕ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಶ್ರೀ ನರಗುಂದ್ ಎಂ.ಬಿ., ಕರ್ನಾಟಕ ಸರಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಿ ಶಶಿಕಾಂತ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಂದ್ರ ಕಿಣಿ ಜಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ.ಕೆ. ರವೀಂದ್ರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಧರ್ ಬಿ ಎನ್, ಅಧಿವಕ್ತ ಪರಿಷದ್ ನ ಪುತ್ತೂರು ಘಟಕದ ಅಧ್ಯಕ್ಷರಾದ ಎನ್ ಜಯಪ್ರಕಾಶ್ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ಉಪಸ್ಥಿತರಿದ್ದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ ಪ್ರಾಸ್ತವಿಕವಾಗಿ ಮಾತನಾಡಿ, ನಿವೃತ ಮುಖ್ಯ ನ್ಯಾಯಮೂರ್ತಿಗಳಾದ ದಿ. ಎಂ ರಾಮ ಜೋಯಿಸ್ ರವರು ಪರಿಚಯ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಜೊತೆಗಿನ ಅವರ ನಂಟನ್ನು ವಿವರಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸ್ಥಾಪನೆಗೆ ಅಡಿಕಲ್ಲು ಹಾಕುವುದರಿಂದ ಹಿಡಿದು ಪ್ರತಿಹಂತದಲ್ಲಿ ಮಾರ್ಗದರ್ಶನ ಮಾಡುತ್ತಾ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಇಂದಿನ ಬೆಳವಣಿಗೆಗೆ ಕಾರಣೀಭೂತರಾದವರು ರಾಮ ಜೋಯಿಸ್ ಎಂದು ವಿವರಿಸಿ ಸ್ವಾಗತಿಸಿದರು. ಅಧಿವಕ್ತ ಪರಿಷದ್ ನ ಪುತ್ತೂರು ಘಟಕದ ಅಧ್ಯಕ್ಷರಾದ ಎನ್ ಜಯಪ್ರಕಾಶ್ ಧನ್ಯವಾದ ಸಮರ್ಪಿಸಿ, ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮೀಕಾಂತ ರೈ ಅನಿಕೂಟೇಲ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ -ರಕ್ಷಕ ಸಂಘದ ಸದಸ್ಯರು, ಅಧಿವಕ್ತ ಪರಿಷದ್ ನ ಸದಸ್ಯರು, ಪುತ್ತೂರು ಬಾರ್ ಅಸೋಸಿಯೇಷನ್ ನ ಅಧ್ಯಕ್ಷರು ಹಾಗೂ ಸದಸ್ಯರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಣಕು ನ್ಯಾಯಾಲಯ ಸಭಾಂಗಣಕ್ಕೆ ನಿವೃತ್ತ ಮುಖ್ಯ ನ್ಯಾ. ಮೂ. ದಿ. ಎಂ. ರಾಮ ಜೋಯಿಸ್ ಹೆಸರು

ಕಾರ್ಯಕ್ರಮದ ಆರಂಭದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಣಕು ನ್ಯಾಯಾಲಯ ಸಭಾಂಗಣಕ್ಕೆ ನಿವೃತ ಮುಖ್ಯ ನ್ಯಾಯಮೂರ್ತಿಗಳಾದ ದಿ. ಎಂ ರಾಮ ಜೋಯಿಸ್ ರವರ ಸ್ಮರಣಾರ್ಥ ನಾಮಕರಣ ಕಾರ್ಯಕ್ರಮವನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ನಾಮಫಲಕ ಅನಾವರಣಗೊಳಿಸುವ ಮೂಲಕ ನಡೆಸಿಕೊಟ್ಟರು. ನಂತರ ದಿ. ರಾಮ ಜೋಯಿಸ್ ರವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

61ಕ್ಕಿಂತಲೂ ಅಧಿಕ ಪುಸ್ತಕಗಳ ಉಲ್ಲೇಖಿಸಿದ ನ್ಯಾಯಧೀಶರು

ಸಂವಿಧಾನ ದಿನಾಚರಣೆಯ ಹಿನ್ನಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಿಶೇಷ ಉಪನ್ಯಾಸ ನೀಡಿದ ಅವರು, ಸಂವಿಧಾನವು ಪ್ರತಿಯೊಬ್ಬರನ್ನು ಕಾಪಾಡುವ, ಪ್ರತಿಯೊಬ್ಬರೂ ಯಾವ ಕೆಲಸವನ್ನು ಯಾವ ರೀತಿ ನಿರ್ವಹಿಸಬೇಕೆಂದು ವಿವರಿಸುವ ಒಂದು ಮಹಾನ್ ಗ್ರಂಥವಾಗಿದೆ ಎಂದರು. ತಮ್ಮ ಭಾಷಣದುದ್ದಕ್ಕೂ ಸುಮಾರು 61ಕ್ಕಿಂತಲೂ ಅಧಿಕ ಪುಸ್ತಕಗಳ ಉಲ್ಲೇಖವನ್ನು, ಅದರ ಸಾರಾಂಶದ ಜೊತೆಗೆ ಒತ್ತಿ ಹೇಳಿದ ಅವರು, ಭಾರತದ ಸಂವಿಧಾನದ ವಿಶಿಷ್ಟತೆಯನ್ನು ವಿವರಿಸಿದರು.

ಮೊದಲ ದತ್ತಿ ಉಪನ್ಯಾಸ

ಸಭಾ ಕಾರ್ಯಕ್ರಮದ ನಂತರ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಿವೃತ ಮುಖ್ಯ ನ್ಯಾಯಮೂರ್ತಿಗಳಾದ ದಿ. ಎಂ ರಾಮ ಜೋಯಿಸ್ ಸ್ಮರಣಾರ್ಥ ಮೊದಲ ದತ್ತಿ ಉಪನ್ಯಾಸವನ್ನು ಮಂಗಳೂರಿನ ಹಿರಿಯ ನ್ಯಾಯವಾದಿಗಳಾದ ಶ್ರೀ ಜಿ ಕೆ ಪರಮೇಶ್ವರ ಜೋಯಿಸ್ ನಡೆಸಿಕೊಟ್ಟರು. ಕಾನೂನು ಮತ್ತು ಭಾರತದಲ್ಲಿ ವಕೀಲ ವೃತ್ತಿಯ ವಿಷಯದ ಕುರಿತು ವಿಶೇಷ ಉಪನ್ಯಾಸಕ ನೀಡಿದ ಅವರು, ಕಾನೂನು ಕಾಪಾಡುವುದು ಹಾಗೂ ತಮ್ಮ ವೃತ್ತಿಗೆ ನಿಷ್ಠಾನಾಗಿರುವುದು ಇಂದಿನ ಕಾಲದ ಅನಿವಾರ್ಯವಾಗಿದೆ. ವಕೀಲ ವೃತ್ತಿಗೆ ತನ್ನದೇ ಆದ ಘನತೆ ಇದ್ದು, ವೃತ್ತಿಪರ ಮನಸ್ಸುಳ್ಳವರು ಮಾತ್ರ ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಜೀವನದ ಬಹುತೇಕ ಸಮಯವನ್ನು ಇದಕ್ಕೆ ಮೀಸಲಿಡುವ ಅಗತ್ಯವಿದೆ. ಇಲ್ಲವಾದರೆ, ಯಶಸ್ಸು ಸಿಗುವುದು ತೀರಾ ಕಷ್ಟ. ಇಲ್ಲದಿದ್ದರೆ ಕಾನೂನಿನ ಮೌಲ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here