ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಉಪ್ಪಿನಂಗಡಿಯಾಗಿದ್ದು, ಹಲವು ಪ್ರಮುಖ ನಗರಗಳಿಗೆ ತೆರಳುವ ನೂರಾರು ಬಸ್ಗಳು ದಿನಾ ಇಲ್ಲಿಗೆ ಬರುತ್ತಿದ್ದರೂ, ಇಲ್ಲೊಂದು ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ತಂಗುದಾಣ ನಿರ್ಮಾಣದ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಇಕ್ಕಟ್ಟಿನ ಜಾಗದಲ್ಲಿ ಈಗಿರುವ ಬಸ್ ನಿಲ್ದಾಣವಿದ್ದು, ಪ್ರಯಾಣಿಕರಿಗೆ ನಿಲ್ಲಲು ಶೆಡ್ನಂತಹ ತಂಗುದಾಣವಿದ್ದರೂ ಅದರ ಬಹುಭಾಗವನ್ನು ಕುಡುಕರು, ಅಲೆಮಾರಿಗಳು, ಭಿಕ್ಷುಕರೇ ಆಶ್ರಯಿಸಿಕೊಂಡಿದ್ದಾರೆ.
ಪ್ರಮುಖ ನಗರಗಳಾದ ಮಂಗಳೂರು -ಬೆಂಗಳೂರು, ತಾಲೂಕು ಕೇಂದ್ರವಾದ ಪುತ್ತೂರು, ಪವಿತ್ರ ತೀರ್ಥ ಕ್ಷೇತ್ರಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಪ್ರಮುಖ ಪಟ್ಟಣಗಳಿಗೆ ಉಪ್ಪಿನಂಗಡಿಯು ಸಂಪರ್ಕದ ಪ್ರಮುಖ ಕೊಂಡಿಯಂತಿದೆ, ಉಪ್ಪಿನಂಗಡಿ ಮೂಲಕವಾಗಿ ರಾಜ್ಯದ ವಿವಿಧೆಡೆ ತೆರಳುವ ನೂರಾರು ಕೆಎಸ್ಸಾರ್ಟಿಸಿ ಬಸ್ಗಳು ದಿನ ನಿತ್ಯ ಇಲ್ಲಿಗೆ ಬಂದು ಹೋಗುತ್ತವೆ. ಲಕ್ಷಾಂತರ ರೂಪಾಯಿ ಆದಾಯವನ್ನೂ ಕೆಎಸ್ಸಾರ್ಟಿಸಿಗೆ ದಿನ ನಿತ್ಯ ಉಪ್ಪಿನಂಗಡಿಯು ನೀಡುತ್ತಿದೆ. ಆದರೆ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಾಣ ಮಾತ್ರ ಈವರೆಗೆ ಆಗಿಲ್ಲ. ಹಲವು ವರ್ಷಗಳಿಂದ ಇದರ ಪ್ರಸ್ತಾಪ ಕೇಳಿಬಂದರೂ, ಕನಸು ಮಾತ್ರ ಈಡೇರಿಲ್ಲ. ಉಪ್ಪಿನಂಗಡಿ ಗ್ರಾ.ಪಂ.ಗೆ ಸೇರಿದ ಅಂಗೈಯಗಲದ ಜಾಗದಲ್ಲೇ ಈಗ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ಗಳ ತಂಗುದಾಣವಿದೆ.
ಇದರ ಸುತ್ತಲೂ ಗ್ರಾ.ಪಂ.ನ ವಾಣಿಜ್ಯ ಸಂಕೀರ್ಣಗಳೇ ತುಂಬಿ ಹೋಗಿದ್ದು, ಇದರಿಂದಾಗಿ ಬಸ್ ನಿಲ್ದಾಣದಲ್ಲಿರುವ ಅರ್ಧದಷ್ಟು ಜಾಗವು ಇತರ ಖಾಸಗಿ ವಾಹನಗಳ ಪಾರ್ಕಿಂಗ್ಗೇ ಹೋಗುತ್ತದೆ. ಈ ಬಸ್ ನಿಲ್ದಾಣದಲ್ಲಿ ಓಡಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಬಸ್ಗಳು ಯಾವ ದಿಕ್ಕಿನಿಂದ ಬರುತ್ತವೆ ಅಂತ ಹೇಳೋಕ್ಕಾಗಲ್ಲ. ಬಸ್ ನಿಲ್ದಾಣದ ಸ್ಥಿತಿ ಈ ರೀತಿಯಾದರೆ, ಪ್ರಯಾಣಿಕರಿಗಾಗಿ ನಿರ್ಮಿಸಿರುವ ತಂಗುದಾಣದ ಸ್ಥಿತಿ ಅದಕ್ಕಿಂತಲೂ ಶೋಚನೀಯ. ಬಸ್ ನಿಲ್ದಾಣದ ಒಂದು ಬದಿಯಲ್ಲಿ ಉದ್ದಕ್ಕೆ ಶೀಟ್ ಹಾಕಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದ್ದು, ಕಬ್ಬಿಣದ ಪಟ್ಟಿಗಳನ್ನು ಜೋಡಿಸಿ ಕುಳಿತುಕೊಳ್ಳಲು ಬೆಂಚುಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡವೇ ಷೆಡ್ನಂತಿದ್ದು, ಇದರ ನಿರ್ಮಾಣವೇ ಸಂಪೂರ್ಣ ಅವೈಜ್ಞಾನಿಕವಾಗಿದೆ. ಬಸ್ಗಳು ನಿಲ್ಲುವ ಹಿಂಬದಿಯಲ್ಲಿ ಪ್ರಯಾಣಿಕರ ತಂಗುದಾಣವಿದ್ದು, ಬಸ್ ಕಾಯುವವರು ಅಲ್ಲಿ ಕುಳಿತುಕೊಂಡರೆ ತಾವು ಹೋಗಬೇಕಾದ ಬಸ್ ಬಂದಿದ್ದೇ ಗೊತ್ತಾಗುವುದಿಲ್ಲ. ಯಾಕೆಂದರೆ ಅವರಿಗೆ ಅಲ್ಲಿ ಕುಳಿತುಕೊಂಡಾಗ ಕಾಣುವುದು ಬಸ್ಗಳ ಹಿಂಬದಿ ಮಾತ್ರ. ಇಲ್ಲಿ ಕುಳಿತುಕೊಂಡವರು ಆಗಾಗ ಎದ್ದು ತಾವು ಹೋಗಬೇಕಾದ ಬಸ್ ಬಂತಾ ಎಂದು ಬಸ್ ನಿಲ್ದಾಣದ ಮಧ್ಯಕ್ಕೆ ಹೋಗಿ ಬರಬೇಕಾದ ಸ್ಥಿತಿ ಇದೆ. ಇನ್ನು ಜೋರು ಮಳೆ- ಗಾಳಿಯಿಂದ ಇದರೊಳಗೆ ರಕ್ಷಣೆ ಪಡೆಯಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಿದೆ.
ಇನ್ನೊಂದೆಡೆಯಲ್ಲಿ ಇದನ್ನು ಕುಡುಕರು, ನಿರಾಶ್ರಿತರು, ಭಿಕ್ಷುಕರೇ ಆಶ್ರಯ ಮಾಡಿಕೊಂಡಿದ್ದಾರೆ. ಮದ್ಯಪಾನ ಮಾಡಿ ಏಳಲಾಗದೇ ಈ ಬೆಂಚಿನ ಮೇಲೆ ದಿನಪೂರ್ತಿ ಮಲಗೋದು, ಪರಸ್ಪರ ಜಗಳ, ಹೊಡೆದಾಟ ಮಾಡಿಕೊಳ್ಳುವುದು, ಎಲ್ಲೆಂದರಲ್ಲಿ ಇದರೊಳಗೆ ಬಿದ್ದುಕೊಳ್ಳುವುದು ಇದು ಇಲ್ಲಿನ ದಿನ ನಿತ್ಯದ ದೃಶ್ಯವಾಗಿದೆ. ಅಲ್ಲದೇ, ಕೆಲವರು ಮಲ, ಮೂತ್ರ, ವಾಂತಿ ಹೀಗೆ ಎಲ್ಲವನ್ನೂ ಇಲ್ಲೇ ಮಾಡಿ ಪ್ರಯಾಣಿಕರ ತಂಗುದಾಣವೇ ಗಬ್ಬೆದ್ದು ಹೋಗುವಂತೆ ಮಾಡಿದ್ದಾರೆ. ಇವರ ಕಾಟವನ್ನು ಸಹಿಸಿಕೊಂಡು ಇದರೊಳಗೆ ನಿಲ್ಲುವ ಅನಿವಾರ್ಯತೆ ಪ್ರಯಾಣಿಕರದ್ದಾಗಿದೆ. ಹೆಚ್ಚಿನವರು ಇಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ಅನಾನುಕೂಲ ಆಗುತ್ತಿರುವುದರಿಂದ ಅಂಗಡಿ ಬದಿಯಲ್ಲೋ, ಇನ್ನೆಲ್ಲೋ ನಿಂತು ಬಸ್ಗಾಗಿ ಕಾಯುವಂತಹ ಸ್ಥಿತಿ ಇಲ್ಲಿಯದ್ದು. ಆದ್ದರಿಂದ ಜನಪ್ರತಿನಿಧಿಗಳು ಇನ್ನಾದರೂ ಗಮನ ಹರಿಸಿ, ಉಪ್ಪಿನಂಗಡಿಗೊಂದು ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ವ್ಯವಸ್ಥೆಯನ್ನು ಕಲ್ಪಿಸಬೇಕೆನ್ನುವುದೇ ಎಲ್ಲರ ಆಗ್ರಹ.
ಉಪ್ಪಿನಂಗಡಿಯಲ್ಲಿ ಸುಸಜ್ಜಿತ ಬಸ್ನಿಲ್ದಾಣದ ಅವಶ್ಯಕತೆ ಇದೆ. ಇದಕ್ಕೆ ಪ್ರಯತ್ನಗಳು ಸಾಗಿದ್ದು, ಆದರೆ ಆಯಕಟ್ಟಿನ ಜಾಗದಲ್ಲಿ ಸರಕಾರಿ ಜಾಗದ ಕೊರತೆ ಇದೆ. ಇದರಿಂದ ಸಮಸ್ಯೆಯಾಗಿದೆ. ಇದಕ್ಕೆ ಸುಮಾರು ಎರಡು ಎಕರೆಯಷ್ಟಾದರೂ ಜಾಗ ಬೇಕಾಗಿದ್ದು, ಇದಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಜಾಗ ಖರೀದಿಸುವ ಪ್ರಸ್ತಾಪಕ್ಕೆ ಕೆಎಸ್ಸಾರ್ಟಿಸಿಯವರು ಹಣವಿಲ್ಲವೆಂಬ ಕಾರಣ ನೀಡಿ ಹಿಂದೇಟು ಹಾಕುತ್ತಿದ್ದಾರೆ. ಸುಸಜ್ಜಿತ ಬಸ್ನಿಲ್ದಾಣದ ಕನಸು ನನ್ನದೂ ಆಗಿದ್ದು, ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇದ್ದೇನೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ