ಪುತ್ತೂರು : ಪ್ರಕೃತಿಯನ್ನು ಗೌರವದಿಂದ ಕಾಣುವ ದೃಷ್ಟಿಕೋನ ನಮ್ಮ ಪ್ರತಿಯೊಬ್ಬ ಭಾರತೀಯರಲ್ಲಿದೆ. ಇದನ್ನು ಕಾಪಾಡುವುದು ನಮ್ಮ ಧ್ಯೇಯವಾಗಿರಬೇಕು. ಗಿಡಗಳನ್ನು ನೆಡುವ ಮೂಲಕ ಈ ಭೂಮಿಗೆ ಸದಾ ಚಿರುಋಣಿಯಾಗಿ ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ಸಂರಕ್ಷಣೆ ಮಾಡಬೇಕು. ನಮ್ಮ ಹಿರಿಯರು ನಮಗಾಗಿ ಪ್ರಕೃತಿಯನ್ನು ಬಹಳ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ವಿದ್ಯಾವಂತರಾದ ನಾವೂ ಕೂಡಾ ಅಷ್ಟೇ ಜೋಪಾನವಾಗಿ ಅದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಹಾಗೆಯೇ ಮುಂದಿನ ಪೀಳಿಗೆಗೆ ಇದು ಸ್ಪೂರ್ತಿಯಾಗಬೇಕು ಎಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ.ವೇದವ್ಯಾಸ ರಾಮಕುಂಜ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ(ಸ್ವಾಯತ್ತ)ಕಾಲೇಜು, ಐಕ್ಯೂಎಸಿ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಹಾಗೂ ನೇಚರ್ ಕ್ಲಬ್ ಇದರ ಸಹಭಾಗಿತ್ವದಲ್ಲಿ ನಡೆದ ಸಂಸರ್ಗ ಎನ್ನುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ಮಾತನಾಡಿ ಪ್ರಕೃತಿಯನ್ನು ಉಳಿಸುವ ಹಾಗೂ ಗೌರವಿಸುವ ನಿಟ್ಟಿನಲ್ಲಿ ನಮ್ಮ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಸೇರಿ ಒಳ್ಳೆಯ ಆಕಾಂಕ್ಷೆಯನ್ನು ಇಟ್ಟುಕೊಂಡು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇವರ ಈ ಪ್ರಯತ್ನದಲ್ಲಿ ನಾವೆಲ್ಲರೂ ಜೊತೆಯಾಗೋಣ ಎಂದು ಆಶಿಸಿದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ.ಎಸ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ದ ಮುಖ್ಯಸ್ಥ ಡಾ.ಕೆ. ಎಸ್ ಈಶ್ವರ ಪ್ರಸಾದ್, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀ ಕೃಷ್ಣ ಗಣರಾಜ ಭಟ್, ನೇಚರ್ ಕ್ಲಬ್ ನ ಸಂಚಾಲಕ ಡಾ. ಸೌಮಿತ್ರ, ನೇಚರ್ ಕ್ಲಬ್ ನ ವಿದ್ಯಾರ್ಥಿ ಸಂಯೋಜಕಿ ಸ್ವಾತಿ ಉಪಸ್ಥಿತರಿದ್ದರು.
ತೃತೀಯ ಬಿಎಸ್ಸಿಯ ವಿದ್ಯಾರ್ಥಿಗಳಾದ ಕಲ್ಪ ಸಿ.ಎಸ್ ಸ್ವಾಗತಿಸಿ, ಸ್ಮಿತಾ ಭಂಡಾರಿ ವಂದಿಸಿ, ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.