ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ದ. 3 ರಂದು ಬೆಳಿಗ್ಗೆ ನಡೆಯಿತು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮ ಕೆ. ದೀಪ ಬೆಳಗಿಸಿ ಮಾತನಾಡಿ ‘ಮಾನಸಿಕ, ದೈಹಿಕ ಸಂತೋಷಕ್ಕೆ ಕ್ರೀಡೆ ಅತೀ ಮುಖ್ಯ. ಗೆಲುವು ಸೋಲು ಇದ್ದದ್ದೇ. ಕ್ರೀಡಾಕೂಟವನ್ನು ಸಂತೋಷದಿಂದ ಪಾಲ್ಗೊಳ್ಳಿ’ ಎಂದರು.
ನವೋದಯ ಪ್ರೌಢಶಾಲೆಯ ಮುಖ್ಯಗುರು ಪುಷ್ಪಾವತಿ ಎಸ್. ರವರು ಧ್ವಜವಂದನೆ ಸ್ವೀಕರಿಸಿ ಮಾತನಾಡಿ ‘ಸೋಲನ್ನು ಸ್ವೀಕರಿಸಿ ಗೆಲುವನ್ನು ಸಂಭ್ರಮಿಸುವ ಮನೋಭಾವದಿಂದ ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಿ’ ಎಂದು ಹೇಳಿ ಶುಭ ಹಾರೈಸಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಾಣಾಜೆ ಸುಬೋಧ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ ರವರು ‘ಕ್ರೀಡೆಯಲ್ಲಿ ಪಾಲ್ಗೊಂಡಾಗ ಮಾನಸಿಕ ಸಂತೋಷ ಮತ್ತು ಆರೋಗ್ಯ ಲಭಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಪ್ರಿಯದರ್ಶಿನಿ ಶಾಲೆ ಗುರುತಿಸಲ್ಪಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶುಭಕರ ರೈ ಬೈಲಾಡಿಯವರು ‘ಕ್ರೀಡಾಕೂಟದಲ್ಲಿ ಪ್ರಿಯದರ್ಶಿನಿ ಬೆಳಗುವಂತಾಗಲಿ. ಮಕ್ಕಳಿಗೆ ನವಚೈತನ್ಯವನ್ನು ದೇವರು ಅನುಗ್ರಹಿಸಲಿ’ ಎಂದರು.
ಮುಖ್ಯ ಅತಿಥಿಯಾಗಿ ಅರಿಯಡ್ಕ ಗ್ರಾ.ಪಂ. ಸದಸ್ಯ ಸದಾನಂದ ಮಣಿಯಾಣಿ, ಉದ್ಯಮಿ ಕಟ್ಟಾವು ಸತೀಶ್ ರೈ, ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಸದಾಶಿವ ರೈ ಚೆಲ್ಯಡ್ಕ, ಶಾಲಾ ಸಂಚಾಲಕ ಡಾ. ಸತೀಶ್ ರಾವ್, ಘೋಷ್ ತಯಾರು ಮಾಡಿದ ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಶಂಕರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯಗುರು ರಾಜೇಶ್ ಎನ್. ಸ್ವಾಗತಿಸಿ, ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳು ಬೆಳಗುವಂತೆ ಮಾಡಲು ಪೂರ್ವ ಯೋಜನೆ ಹಾಕಿಕೊಂಡಿದ್ದೇವೆ. ಶಾಲಾ ವಾರ್ಷಿಕೋತ್ಸವ ಮುಗಿದ ತಕ್ಷಣ ಕ್ರೀಡಾ ವಿಭಾಗದಲ್ಲಿ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲಿದ್ದೇವೆ’ ಎಂದರು. ಶಾಲಾ ವಿದ್ಯಾರ್ಥಿ ನಾಯಕಿ ಸಿಂಚನಾ ಕೆ. ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಶಿಕ್ಷಕಿ ಕೃತಿಕಾ ವಂದಿಸಿದರು.