ಪುತ್ತೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ್ ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ತರಬೇತಿಯನ್ನು ನೀಡಲಾಗಿದ್ದು ಸೇನಾ ನೇಮಕಾತಿಯ ದೈಹಿಕ ಕ್ಷಮತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 6 ಜನ ಅಗ್ನಿವೀರ ಅಭ್ಯರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿ ಭಾರತೀಯ ಸೇನೆಯಲ್ಲಿ ಇರುವ ವಿವಿಧ ಸ್ತರಗಳ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾಮಾತಾ ಅಕಾಡೆಮಿಯು ಸೇನಾ ನೇಮಕಾತಿಗಳ ಬಗ್ಗೆ ವಿಶೇಷ ಗಮನ ಹರಿಸಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು ಸವಾಲಿನ ಕೆಲಸ, ಶಾಸಕನಾಗಿ ನನ್ನಿಂದ ಆಗುವ ಎಲ್ಲಾ ಸಹಕಾರವನ್ನು ವಿದ್ಯಾಮಾತಾ ಅಕಾಡೆಮಿಗೆ ನೀಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯಲ್ಲಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಥಮಿಕ ಮಾಹಿತಿ ನೀಡಿ ಶುಭ ಹಾರೈಸಿದರು. ವಿದ್ಯಾಮಾತಾ ಅಕಾಡೆಮಿಯ ಗೌರವ ಸಲಹೆಗಾರ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಶುಭ ಹಾರೈಸಿದರು.
ಸನ್ಮಾನ: ಅಗ್ನಿವೀರರಾಗಿ ಆಯ್ಕೆಯಾದ ಲಕ್ಷ್ಮೀಸಾಗರ್, ಜಯಪ್ರಕಾಶ್, ಭವನ್ ಕುಮಾರ್, ಸಚಿನ್, ಕಿಶೋರ್, ವೈಭವ್ ನಾಣಯ್ಯರವರನ್ನು ಶಾಸಕ ಸಂಜೀವ ಮಠಂದೂರುರವರು ಸನ್ಮಾನಿಸಿದರು. ಅಗ್ನಿಪಥ್ ರ್ಯಾಲಿಗೆ ಪೂರ್ವಭಾವಿಯಾಗಿ ದೈಹಿಕ ಸದೃಢತೆಯ ತರಬೇತಿಯನ್ನು ನೀಡಿದ್ದ ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ತರಬೇತುದಾರ ದಯಾನಂದ ರೈ ಕೋರ್ಮಂಡ, ಪಟ್ಟೆ ಶ್ರೀಕೃಷ್ಣ ಸಮೂಹ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ತರಬೇತುದಾರ ಮೋನಪ್ಪ ಪಟ್ಟೆರವರನ್ನು ಸನ್ಮಾನಿಸಲಾಯಿತು. ಪ್ರಥಮ ದರ್ಜೆ ಸಹಾಯಕರಾಗಿ (ಊ.ಈ.ಅ) ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತುದಾರರಾಗಿರುವ ಬದ್ರುನ್ನೀಸಾ ಹೆಂತಾರ್ರವರನ್ನು ಗೌರವಿಸಲಾಯಿತು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.