`ಸುದ್ದಿ’ ವರದಿಯ ಫಲಶ್ರುತಿ
ಉಪ್ಪಿನಂಗಡಿ: ನಿರ್ವಹಣೆಯ ಕೊರತೆಯಿಂದ ಕಳೆದ ಬಾರಿ ಬತ್ತಿ ಬರಡಾಗಿದ್ದ ಕಿಂಡಿ ಅಣೆಕಟ್ಟುಗಳು ಈ ಬಾರಿ ಇಲ್ಲಿನ ಶಾಸಕ ಸಂಜೀವ ಮಠಂದೂರು ಅವರ ವಿಶೇಷ ಕಾಳಜಿಯಿಂದಾಗಿ ತುಂಬಿ ತುಳುಕುವಂತಾಗಿದೆ. ಎಲ್ಲಾ ಅಣೆಕಟ್ಟುಗಳಿಗೆ ಹಲಗೆ ಜೋಡಿಸಲು ವಿಶೇಷ ಮುತುವರ್ಜಿ ನೀಡಬೇಕೆಂಬ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಂಜಿನಿಯರ್‌ಗಳಿಗೆ ಶಾಸಕರು ಸ್ಪಷ್ಟ ಸೂಚನೆಯನ್ನು ನೀಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿರುವ 40ರಷ್ಟು ಕಿಂಡಿ ಅಣೆಕಟ್ಟುಗಳಿಗೆ ಈಗಾಗಲೇ ಹಲಗೆ ಜೋಡಿಸುವ ಕಾರ್ಯವಾಗಿ ಅಲ್ಲಿ ನೀರು ಶೇಖರಣಾ ಕೆಲಸ ಆಗಿದ್ದು, ಇನ್ನು 14ರಷ್ಟು ಅಣೆಕಟ್ಟುಗಳಿಗೆ ಹಲಗೆ ಜೋಡಿಸುವ ಕಾರ್ಯ ಬಾಕಿಯಿದೆ.
ಬತ್ತಿ ಬರಡಾಗಿದ್ದ ನಾಲಾಯದಗುಂಡಿ ಎಂಬಲ್ಲಿನ ಅಣೆಕಟ್ಟಿನಲ್ಲಿ ತುಂಬಿರುವ ನೀರು
ಪತ್ರಿಕಾ ವರದಿಯಿಂದ ವೇಗ!:
ಉಪ್ಪಿನಂಗಡಿ ಭಾಗದಲ್ಲಿ ಕೃಷಿ ಚಟುವಟಿಕೆ ಹಾಗೂ ಅಂತರ್ಜಲವನ್ನು ವೃದ್ಧಿಸುವ ಮೂಲ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳು ಆ ಬಳಿಕ ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ನೀರು ಸಂಗ್ರಹಿಸುವ ಕೆಲಸ ನಡೆಯದೇ ನಿಷ್ಪ್ರಯೋಜಕವಾಗುತ್ತಿರುವ ಬಗ್ಗೆ `ಸುದ್ದಿ ಬಿಡುಗಡೆ’ ದಿನ ಪತ್ರಿಕೆಯು ಸಮಗ್ರ ವರದಿ ಪ್ರಕಟಿಸಿತ್ತು. ಆ ಬಳಿಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ಇಲ್ಲಿನ ಪಂಚೇರು ಹಾಗೂ ನಾಲಾಯದ ಗುಂಡಿ ಎಂಬಲ್ಲಿ ನಿರ್ಮಿಸಿರುವ ಅಣೆಕಟ್ಟುಗಳಿಗೆ ಹಲಗೆ ಜೋಡಿಸುವ ಕೆಲಸ ನಡೆದಿದ್ದು, ಸಮೃದ್ಧ ಜಲರಾಶಿ ಈಗ ಇವೆರಡು ಅಣೆಕಟ್ಟುಗಳಲ್ಲಿ ಶೇಖರಗೊಂಡಿದೆ.
ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ಪಂಚೇರು ಎಂಬಲ್ಲಿ 2013ರಲ್ಲಿ ಕಿಂಡಿ ಅಣೆಕಟ್ಟೊಂದನ್ನು ನಿರ್ಮಿಸಲಾಗಿತ್ತು. ಇದು ಒಂದೆಡೆ ಪಂಚೇರು ಹಾಗೂ ಹಿರೇಬಂಡಾಡಿ ಗ್ರಾಮದ ಶಾಖೆಪುರವನ್ನು ಜೋಡಿಸಲು ಸಂಪರ್ಕ ಸೇತುವೆಯಾಗಿ ಉಪಯೋಗವಾದರೆ, ಇನ್ನೊಂದೆಡೆ ನೀರು ಶೇಖರಿಸಿದಾಗ ಇಲ್ಲಿನ ಅಂತರ್ಜಲ ವೃದ್ಧಿಯೂ ಆಗುತ್ತಿತ್ತು. ಇದರ ಹಲಗೆ ಗೆದ್ದಲು ಹಿಡಿದು ಹಾಳಾಗಿ ಹೋಗಿದ್ದ ಕಾರಣ ಇಲ್ಲಿ ನೀರು ಸಂಗ್ರಹಿಸುವ ಕೆಲಸ ನಡೆಯುತ್ತಿರಲಿಲ್ಲ. ಆದರೆ ಈಗ ಇದಕ್ಕೆ ಕೆಮ್ಮಾರದಲ್ಲಿ ಮುರಿದು ಹೋಗಿರುವ ಕಿಂಡಿ ಅಣೆಕಟ್ಟಿನ ಹಲಗೆಯನ್ನು ತಂದು ಜೋಡಿಸಲಾಗಿದೆ. ಇಲ್ಲಿನ ಸ್ಥಳೀಯರು ಇದಕ್ಕೆ ಸಹಕಾರ ನೀಡಿದ್ದು, ಇದರಿಂದ ಅಣೆಕಟ್ಟಿನಲ್ಲಿ ಆಳೆತ್ತರಕ್ಕಿಂತಲೂ ಅಧಿಕ ನೀರು ಸಂಗ್ರಹವಾಗಿದ್ದು, ಹೊಳೆಯಲ್ಲಿ ಸುಮಾರು ಒಂದು ಕಿ.ಮೀ. ದೂರದ ತನಕ ಸಮೃದ್ಧ ನೀರು ಶೇಖರಣೆಯಾಗುವಂತಾಗಿದೆ.
40 ಎಕರೆ ಕೃಷಿ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಯ ಉದ್ದೇಶದಿಂದ ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ನಾಲಾಯದ ಗುಂಡಿ ಎಂಬಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ 2019ರಲ್ಲಿ ಕಿಂಡಿ ಅಣೆಕಟ್ಟೊಂದು ನಿರ್ಮಿಸಲಾಗಿತ್ತು. ಎರಡು ಬಾರಿ ಮಳೆಗಾಲ ಮುಗಿದ ಬಳಿಕ ಅಣೆಕಟ್ಟಿಗೆ ಹಲಗೆ ಅಡ್ಡಇಟ್ಟು ನೀರು ಶೇಖರಿಸಿರುವುದು ಬಿಟ್ಟರೆ ಬಳಿಕ ಇದು ನೀರಿಲ್ಲದೆ ಬತ್ತಿ ಬರಡಾಗಿತ್ತು. ಕೇವಲ ಜೀಪು, ರಿಕ್ಷಾಗಳಂತಹ ಮಧ್ಯಮ ಗಾತ್ರದ ವಾಹನಗಳು ಹೋಗಲು ಸಂಪರ್ಕ ಸೇತುವೆಯಾಗಿ ಬಳಕೆಯಾಗುತ್ತಿತ್ತು. ಆದರೆ ಕಳೆದ ವಾರ ಇದಕ್ಕೆ ಹಲಗೆ ಜೋಡಿಸಲಾಗಿದ್ದು, ಅಣೆಕಟ್ಟಿನ ಮುಕ್ಕಾಲು ಭಾಗ ನೀರು ತುಂಬಿ ನಿಂತಿದೆ.
ಪಂಚೇರು ಎಂಬಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಶೇಖರಗೊಂಡಿರುವ ಸಮೃದ್ಧ ಜಲರಾಶಿ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮಂಗಳೂರು ಉಪವಿಭಾಗದ ಸಹಾಯಕ ಎಂಜಿನಿಯರ್ ರಾಕೇಶ್ ಕುಂದರ್, ಎಲ್ಲಾ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವ ಮೂಲಕ ಅದರ ಮೂಲ ಉದ್ದೇಶ ಈಡೇರಲು ಪ್ರಮುಖ ಆದ್ಯತೆ ನೀಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲೇ ಈಗಾಗಲೇ 40ರಷ್ಟು ಅಣೆಕಟ್ಟುಗಳಿಗೆ ಹಲಗೆ ಜೋಡಿಸುವ ಕಾರ್ಯವಾಗಿದ್ದು, ಹೇರಳ ನೀರು ಅಲ್ಲಿ ಸಂಗ್ರಹವಾಗಿದೆ. ಇನ್ನು 14ರಷ್ಟು ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಹರಿವು ಈ ತಿಂಗಳಲ್ಲಿ ಹೆಚ್ಚಳವಾಗಿರುವ ಕಾರಣ ಹಲಗೆ ಜೋಡಿಸಿಲ್ಲ. ನೀರಿನ ಹರಿವು ಕಡಿಮೆಯಾದ ಕೂಡಲೇ ಹಲಗೆ ಜೋಡಿಸಿ, ನೀರನ್ನು ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತದೆ. ಹಲಗೆ ಇಲ್ಲದ ಕಡೆ ಹಲಗೆಗಳನ್ನು ಹಾಗೂ ಇದರ ನಿರ್ವಹಣೆಗೆ ವೆಚ್ಚವನ್ನೂ ಇಲಾಖೆಯ ವತಿಯಿಂದ ಭರಿಸಲಾಗಿದೆ ಎಂದರು.
ಹೊಳೆಗಳಲ್ಲಿ ನೀರಿನ ಹರಿವು ಇರುವ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸಿ ನೀರು ಶೇಖರಿಸುವುದು. ಮಳೆಗಾಲ ಆರಂಭಕ್ಕೆ ಮುನ್ನ ಹಲಗೆಗಳನ್ನು ತೆಗೆಯುವ ಕೆಲಸ ವರ್ಷಂಪ್ರತಿ ಹೀಗೆ ನಡೆಯುತ್ತಾ ಬಂದರೆ ಈ ಭಾಗದಲ್ಲಿ ಅಂತರ್ಜಲಕ್ಕೆ ಕೊರತೆ ಇರದು.
ಕೋಟಿ ರೂ.ಗಳ ವೆಚ್ಚದಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಪ್ರತಿ ವರ್ಷ ಅದರ ನಿರ್ವಹಣೆಗೂ ಅಷ್ಟೇ ಮುತುವರ್ಜಿ ತೋರಬೇಕು. ಇಲಾಖೆಯ ಎಂಜಿನಿಯರ್‌ಗಳ ಮೇಲುಸ್ತುವಾರಿಯಲ್ಲಿ ಕಿಂಡಿ ಅಣೆಕಟ್ಟು ಇರುವಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯರನ್ನೊಳಗೊಂಡ ಸ್ಥಳೀಯರ ಸಮಿತಿಯೊಂದನ್ನು ರಚಿಸಿ ಅದರ ಮೂಲಕ ಹಲಗೆ ಜೋಡಿಸುವುದು, ತೆಗೆಸುವ ಕಾರ್ಯವನ್ನು ಮಾಡಬೇಕು ಅಥವಾ ನಿರ್ವಹಣೆಗೆ ಅನುದಾನ ಕೊರತೆ ಇದ್ದರೆ, ಆ ವ್ಯಾಪ್ತಿಯ ಗ್ರಾ.ಪಂ.ಗಳ ವಶಕ್ಕೆ ಕಿಂಡಿ ಅಣೆಕಟ್ಟುಗಳನ್ನು ಒಪ್ಪಿಸಬೇಕು. ಆಗ ಗ್ರಾ.ಪಂ. ಅನುದಾನ ಮೂಲಕ ಅದನ್ನು ನಿರ್ವಹಣೆ ಸಾಧ್ಯವಾಗುತ್ತದೆ. ಆಗ ಕಿಂಡಿ ಅಣೆಕಟ್ಟುಗಳು ನೀರಿಲ್ಲದೆ ಬತ್ತಿ ನಿಷ್ಪ್ರಯೋಜಕವಾಗುವುದಿಲ್ಲ. ಈಗ ಶಾಸಕರಾದ ಸಂಜೀವ ಮಟಂದೂರು ಅವರ ವಿಶೇಷ ಮುತುವರ್ಜಿಯಿಂದ ಈ ಭಾಗದಲ್ಲಿ ಕಿಂಡಿ ಅಣೆಕಟ್ಟುಗಳು ಜಲಸಂಪತ್ತಿನಿಂದ ತುಂಬುವಂತಾಗಿದೆ.
– ಸುರೇಶ್ ಅತ್ರೆಮಜಲು
ಸದಸ್ಯರು, ಉಪ್ಪಿನಂಗಡಿ ಗ್ರಾ.ಪಂ.