ಉಪ್ಪಿನಂಗಡಿ: ಗ್ರಾಮೀಣ ಜನಸಮುದಾಯಕ್ಕೆ ಸ್ಥಳೀಯ ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯಾಗಿದ್ದು, ಇಲ್ಲಿ ಹಲವು ಸೇವೆಗಳು ಲಭ್ಯವಾಗುತ್ತಿದ್ದರೂ, ಹೆಚ್ಚಿನ ಕಡೆಗಳಲ್ಲಿ ಮಾಹಿತಿಯ ಕೊರತೆಯಿಂದ ಜನತೆ ಈ ಕಡೆ ಮುಖಮಾಡುತ್ತಿಲ್ಲ. ಅಲ್ಲದೇ ಈ ಕೇಂದ್ರಕ್ಕೆ ಕಟ್ಟಡದ ಕೊರತೆಯೂ ಇರುವುದರಿಂದ ಹೆಚ್ಚಿನ ಕಡೆ ಎಲ್ಲಾ ಸೇವೆಗಳನ್ನು ನೀಡುವಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ.
೩೪ನೆಕ್ಕಿಲಾಡಿಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಆರೋಗ್ಯ ತಪಾಸಣೆ
ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೇಂದ್ರ ಸ್ಥಾನವನ್ನು ಬಿಟ್ಟು ಅವುಗಳ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಈ ಕೇಂದ್ರಗಳಿವೆ. ದ.ಕ. ಜಿಲ್ಲೆಯಲ್ಲಿ ಈ ಯೋಜನೆ ಕಳೆದ ಡಿಸೆಂಬರ್ ತಿಂಗಳಿಂದ ಹಂತಹಂತವಾಗಿ ಅನುಷ್ಠಾನವಾಗಿವೆ. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಬನ್ನೂರು, ಪಡ್ನೂರು ಹಾಗೂ ಚಿಕ್ಕಮುಡ್ನೂರುನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿವೆ. ಇವುಗಳಿಗೆ ಪ್ರಮುಖವಾಗಿ ಕಾಡುತ್ತಿರುವುದು ಕಟ್ಟಡದ ಕೊರತೆ. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆರು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿದ್ದರೂ, ಅವುಗಳಲ್ಲಿ ಕೋಡಿಂಬಾಡಿ ಮತ್ತು ಬನ್ನೂರಿನ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡದಲ್ಲಿ ಒಂದು ಲ್ಯಾಬ್, ವೈಟಿಂಗ್ ರೂಂ ಹೀಗೆ ಹಲವು ಸವಲತ್ತುಗಳಿರಬೇಕೆಂಬ ಮಾನದಂಡಗಳಿವೆ. ಆದ್ದರಿಂದ ಇದಕ್ಕೆ ವಿಶಾಲ ಕಟ್ಟಡ, ಪ್ರತ್ಯೇಕ ಪ್ರತ್ಯೇಕ ಕೋಣೆಗಳ ಅಗತ್ಯವಿದೆ. ಆದರೆ ಕೋಡಿಂಬಾಡಿ ಮತ್ತು ಬನ್ನೂರಿನ ಕಟ್ಟಡ ಸ್ವಂತದ್ದಾದರೂ, ಅವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ವಸತಿ ಗೃಹ. ಆದ್ದರಿಂದ ಅಲ್ಲಿ ಅಂತಹ ಸೌಲಭ್ಯಗಳಿಲ್ಲ. ಇನ್ನು 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಪಡ್ನೂರು, ಚಿಕ್ಕಮುಡ್ನೂರುವಿನಲ್ಲಿ ಈ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಸೌಲಭ್ಯಗಳೇನು?:
ಈ ಕೇಂದ್ರದಲ್ಲಿ 48 ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಅರ್ಹ ದಂಪತಿಗೆ ತಾತ್ಕಾಲಿಕ ಹಾಗೂ ಶಾಶ್ವತ ಗರ್ಭ ನಿರೋಧಕ ವಿಧಾನಗಳ ಸೇವೆ, ಕಣ್ಣು, ಮೂಗು, ಗಂಟಲು ಮತ್ತು ಬಾಯಿ ಸಂಬಂಧಿ ರೋಗಗಳ ತಪಾಸಣೆ, ಔಷಧಿ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ಗಾಯಗಳಿಗೆ ಡ್ರೆಸ್ಸಿಂಗ್, ರೋಗಿಗಳನ್ನು ತಪಾಸಣೆ ನಡೆಸಿ, ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಸೌಲಭ್ಯ. ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣೆ, ಹದಿಹರೆಯದವರಿಗೆ ಆಪ್ತ ಸಮಾಲೋಚನೆ, ಸಾರ್ವಜನಿಕರಿಗೆ ಯೋಗ ಶಿಕ್ಷಣ ಶಿಬಿರ ಮುಂತಾದ ಸೇವೆಗಳು ಲಭ್ಯವಿದೆ. ಆದರೆ ಇದಿನ್ನೂ ಅನುಷ್ಠಾನದ ಹಂತದಲ್ಲಿ ಇರುವುದರಿಂದ ಎಲ್ಲಾ ಸೇವೆಗಳು ಈಗ ಲಭ್ಯವಿಲ್ಲ. ಈಗ ಹೆಚ್ಚಿನ ಕೇಂದ್ರಗಳಲ್ಲಿ ಅರ್ಹ ದಂಪತಿಗೆ ತಾತ್ಕಾಲಿಕ ಹಾಗೂ ಶಾಶ್ವತ ಗರ್ಭ ನಿರೋಧಕ ವಿಧಾನಗಳ ಸೇವೆ, ಕಣ್ಣು, ಮೂಗು, ಗಂಟಲು ಮತ್ತು ಬಾಯಿ ಸಂಬಂಧಿ ರೋಗಗಳ ತಪಾಸಣೆ, ಔಷಧಿ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ಗಾಯಗಳಿಗೆ ಡ್ರೆಸ್ಸಿಂಗ್, ರೋಗಿಗಳನ್ನು ತಪಾಸಣೆ ನಡೆಸಿ, ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಸೌಲಭ್ಯ. ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣೆ ಮಾತ್ರ ನಡೆಯುತ್ತಿದೆ. ಮುಂದಕ್ಕೆ ಇಲ್ಲಿ ರೋಗಿಯ ಮಲೇರಿಯಾ ಲಕ್ಷಣಗಳನ್ನು ನೋಡಿ ಆರ್‌ಡಿಕೆ ಕಿಟ್ ಮೂಲಕ ರಕ್ತ ತಪಾಸಣೆ ನಡೆಸುವ ಸೌಲಭ್ಯವೂ ದೊರೆಯಲಿದೆ. ಅಲ್ಲದೇ, ಕ್ಷೇಮ ಕೇಂದ್ರದ ವ್ಯಾಪ್ತಿಗೆ ಬರುವ ಗರ್ಭಿಣಿ, ಬಾಣಂತಿ, ಎಂಡೋ ಪೀಡಿತರು, ದೀರ್ಘ ಕಾಲದಿಂದ ಹಾಸಿಗೆ ಹಿಡಿದವರು ಇರುವ ಮನೆಗಳಿಗೆ ಮನೆ ಭೇಟಿ ನೀಡಿ, ಅವರ ಆರೋಗ್ಯ ತಪಾಸಣೆಯೂ ಈ ಕೇಂದ್ರದ ಮೂಲಕ ನಡೆಯಲಿದೆ. ಅಲ್ಲದೇ, ಕೇಂದ್ರದ ವ್ಯಾಪ್ತಿಯೊಳಗಿದ್ದುಕೊಂಡು ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನೂ ತಲುಪದ ಜನಕೇಂದ್ರಿತ ಪ್ರದೇಶಗಳಲ್ಲಿ ಎನ್‌ಸಿಡಿ ಶಿಬಿರದ ಮೂಲಕ ರಕ್ತದೊತ್ತಡ, ಸಕ್ಕರೆಕಾಯಿಲೆ ತಪಾಸಣೆಗಳನ್ನು ಈ ಕೇಂದ್ರದ ಸಿಬ್ಬಂದಿ ಮಾಡಬೇಕಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಈ ಮೊದಲು ಉಪ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ ಪಿಎಚ್‌ಸಿಒ (ಪ್ರಾಥಮಿಕ ಆರೋಗ್ಯಾಧಿಕಾರಿ) ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳಿತ್ತು. ಆದರೆ ಈಗ ಅದನ್ನು ಮೇಲ್ದರ್ಜೆಗೇರಿಸಿ ಅದಕ್ಕೆ ಆರೋಗ್ಯ ಮತ್ತು ಕ್ಷೇಮ ಕೇಂದ್ರವೆಂದು ಹೆಸರಿಡಲಾಗಿದ್ದು, ಇಲ್ಲಿ ಸಿಎಚ್‌ಒ ( ಸಮುದಾಯ ಆರೋಗ್ಯಾಧಿಕಾರಿ) ಎಂಬ ಹೆಚ್ಚುವರಿ ಹುದ್ದೆಯನ್ನು ಸೃಷ್ಟಿಸಿ, ಬಿಎಸ್ಸಿ ನರ್ಸಿಂಗ್ ಪದವೀಧರರನ್ನು ಇದಕ್ಕೆ ನೇಮಕಗೊಳಿಸಲಾಗಿದೆ. ಈ ಕೇಂದ್ರದ ವ್ಯಾಪ್ತಿಯಲ್ಲಿ ಸಿಎಚ್‌ಒ, ಪಿಎಚ್‌ಸಿಒ ಹಾಗೂ ಆಶಾ ಕಾರ್ಯಕರ್ತೆಯರು ಬರುತ್ತಾರೆ.
ಗ್ರಾಮೀಣ ಪ್ರದೇಶಗಳ ಜನರಿಗೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸ್ಥಾಪಿಸಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯ ಪರಿಕಲ್ಪನೆ ಉತ್ತಮವಾಗಿದ್ದು, ಇದರ ಸ್ಥಾಪನೆಗೆ ಒತ್ತು ನೀಡುವ ಸರಕಾರ ಇವುಗಳಿಗೆ ಬೇಕಾದ ಕಟ್ಟಡ, ಅಗತ್ಯ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸುವಲ್ಲಿ ಕೂಡಾ ಗಮನಹರಿಸಬೇಕಿದೆ. ಅಲ್ಲದೆ, ಇಲ್ಲಿರುವ ಸೇವೆಗಳ ಬಗ್ಗೆ ಗ್ರಾಮೀಣ ಜನರಿಗೂ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಆಗ ಮಾತ್ರ ಈ ಯೋಜನೆ ಹೆಚ್ಚಿನ ಜನರಿಗೆ ತಲುಪಿ ಜನೋಪಯೋಗಿಯಾಗಲು ಸಾಧ್ಯ.