ರಾಷ್ಟ್ರೀಯತೆಯ ಚಿಂತನೆಯ ಶಿಕ್ಷಣ ಅತೀ ಮುಖ್ಯ – ಸುರೇಶ್ ಪರ್ಕಳ
ವಿವೇಕಾನಂದ ಶಿಕ್ಷಣ ಸಂಸ್ಥೆ ಜೀವನ ಪಾಠ ಕಲಿಸಿಕೊಡುತ್ತಿವೆ – ಡಾ. ಅವಿನಾಶ್
ವಿಸ್ತತ ಶಿಕ್ಷಣ ಕೊಡುವಲ್ಲಿ ವಿವೇಕಾನಂದ ಹೆಸರುವಾಸಿ – ಸತೀಶ್ ರಾವ್
ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಎರಡನೇ ದಿನದ ವಾರ್ಷಿಕೋತ್ಸವ ಸಂಭ್ರಮ, ಸಮಾರಂಭ ದ. 9 ರಂದು ನಡೆಯಿತು. ಅಪರಾಹ್ನ ಗೋವರ್ದನ್ ಕುಮಾರ್ ಐ. ರವರು ದೀಪಪ್ರಜ್ವಲಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಹಬ್ಬ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಸುರೇಶ್ ಪರ್ಕಳ ಮಾತನಾಡಿ ‘ಜಗತ್ತು ಕೆಲವು ಋಣಾತ್ಮಕ ಅಂಶಗಳಿಂದ ಕೂಡಿದೆ. ಆದರೆ ಅನೇಕ ಧನಾತ್ಮಕ ವಿಚಾರಗಳು ಸಮಾಜದಲ್ಲಿವೆ. ಅವುಗಳನ್ನು ಮಕ್ಕಳಲ್ಲಿ ಬೆಳೆಸುವ ಶಿಕ್ಷಣ ಬೇಕಾಗಿದೆ. ಸಮಾಜದಲ್ಲಿ ದುಷ್ಟರು ಕಡಿಮೆ. ಸಜ್ಜನರು ಅನೇಕರಿದ್ದಾರೆ. ಆದರೆ ಸಜ್ಜನರ ನಿಷ್ಕ್ರೀಯತೆಯು ದುಷ್ಟರ ಅಟ್ಟಹಾಸಕ್ಕೆ ಕಾರಣವಾಗುತ್ತದೆ. ನಮ್ಮ ಸಂಸ್ಕೃತಿ, ಪರಂಪರೆ, ಮಾತೃಭಾಷೆ ಮೂಲಕ ಸಂವಹನಕ್ಕಾಗಿ ಆಂಗ್ಲ ಭಾಷೆ ಕಲಿಕೆ ಬೇಕು. ರಾಷ್ಟ್ರೀಯತೆಯ ಚಿಂತನೆಯುಳ್ಳ ಶಿಕ್ಷಣ ಇಂದಿನ ಸಮಾಜಕ್ಕೆ ಅತ್ಯವಶ್ಯಕವಾದುದರಿಂದ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಇದನ್ನು ನೀಡಲಾಗುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ’ ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಕಣಚೂರ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ಅವಿನಾಶ್ ರವರು ಮಾತನಾಡಿ ‘ಕಲಿಕೆಯ ಮೂಲಕ ವ್ಯಕ್ತಿಯ ಜೀವನ ನಿರ್ಮಾಣವಾಗುತ್ತದೆ. ಅಂತಹ ಜೀವನ ರೂಪಿಸುವ ಕಲಿಕೆಯಲ್ಲಿ ಒಳಗೊಳ್ಳುವ ಬಗೆಯನ್ನು ವಿವೇಕಾನಂದ ವಿದ್ಯಾಸಂಸ್ಥೆ ಕಲಿಸಿಕೊಟ್ಟಿರುವುದಲ್ಲದೇ ಆ ದಿಶೆಯಲ್ಲಿ ಪ್ರೇರಣೆ ನೀಡಿದೆ’ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ರವರು ಮಾತನಾಡಿ ‘ಸಾಂಸ್ಕೃತಿಕವಾಗಿ ಮಕ್ಕಳ ಹಬ್ಬ ಆಗುವ ರೀತಿಯಲ್ಲಿ ಅವರ ಒಟ್ಟು ಶಿಕ್ಷಣ ಅವರ ಜೀವನದಲ್ಲಿ ಹಬ್ಬವಾಗುವಂತೆ ಶಿಕ್ಷಣದ ವಿಸ್ತಾರತೆಯನ್ನು ವಿವೇಕಾನಂದ ವಿದ್ಯಾಸಂಸ್ಥೆಗಳು ನೀಡುತ್ತಿವೆ’ ಎಂದರು.
ಶಾಲಾ ಸಂಚಾಲಕ ರವಿನಾರಾಯಣರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ‘ವಿವೇಕಾನಂದ ವಿದ್ಯಾಸಂಸ್ಥೆಯು ತನ್ನ ವಿಭಿನ್ನ ಕಾರ್ಯಶೈಲಿಯಿಂದ ರಾಜ್ಯದಲ್ಲಿಯೇ ಗುರುತಿಸಲ್ಪಟ್ಟಿದೆ. ವಿವಿಧ ಕ್ಷೇತ್ರಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಿದ್ದಾರೆ. ಯೋಗ, ನೈತಿಕ ಶಿಕ್ಷಣದ ಮೂಲಕ ಮಕ್ಕಳನ್ನು ಸಮಾಜಕ್ಕೆ ಉತ್ತಮ ನಾಗರಿಕನನ್ನಾಗಿ ಕೊಡುವ ಉzಶ ನಮ್ಮದಾಗಿದೆ’ ಎಂದು ಹೇಳಿದರು.
ಅಗ್ನಿವೀರ ರಕ್ಷಿತ್ ಗೆ ಅಭಿನಂದನೆ
ಅಗ್ನಿವೀರ್ ಮೂಲಕ ಭಾರತೀಯ ಸೇನೆಗೆ ಆಯ್ಕೆಗೊಂಡ ಶಾಲೆಯ ಹಿರಿಯ ವಿದ್ಯಾರ್ಥಿ, ಕುರಿಯ ದಾಮಯ್ಯ ಮತ್ತು ಶೀಲಾವತಿ ದಂಪತಿ ಪುತ್ರ ರಕ್ಷಿತ್ರವರನ್ನು ಇದೇ ವೇಳೆ ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸಾಧಕರಿಗೆ ಅಭಿನಂದನೆ : ಕ್ರೀಡಾಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸಾಧನೆಗೈದ ಕ್ರೀಡಾ, ಸ್ಕೌಟ್ ಗೈಡ್ಸ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಅಭಿನಂದಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್, ಶಿಕ್ಷಕರಾದ ರಮ್ಯ, ಮಹೇಶ್ ಕುಮಾರ್, ಅಶ್ವಿನಿ ರಾವ್ ಹಾಗು ಶಾಂತಿರವರು ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಗಣ್ಯರು ಸರಸ್ವತಿ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ವಿದ್ಯಾರ್ಥಿಗಳಿಂದ ಶ್ಲೋಕ, ನಿತ್ಯಪಂಚಾಂಗ, ಸುಭಾಷಿತ ಮತ್ತು ಅಮೃತವಚನ ನಡೆಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶಾಂತಿ ಶೆಣೈ, ಮುಖ್ಯಗುರು ಸತೀಶ್ ಕುಮಾರ್ ರೈ ಎಸ್., ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಂಧ್ಯಾ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಮಮತಾ, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಶ್ರೀನಿಧಿ, ಉಪನಾಯಕಿ ಅನ್ವಿಕಾ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯೆ ಅಮೃತಾ ಪ್ರಸಾದ್ ವಂದಿಸಿದರು. ಶಿಕ್ಷಕರಾದ ಅನುರಾಧ, ಶಾಂತಿ, ಗಣೇಶ್ ಏತಡ್ಕ, ಯಶೋದಾ, ಆಶಾ, ಕವಿತಾ ಹಾಗು ರಾಧಾಕೃಷ್ಣ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೇಶಭಕ್ತಿ ಸಾರುವ ಸಹಿತ ಸಾಂಸ್ಕೃತಿಕ ವೈವಿಧ್ಯ ಜರಗಿತು.
ಇಂದು ಹಿರಿಯ ವಿದ್ಯಾರ್ಥಿ ಸಂಘದ
ವತಿಯಿಂದ ‘ಅವಿಯುಕ್ತ – ೨೨’
ವಾರ್ಷಿಕೋತ್ಸವದ ಮೂರನೇ ದಿನವಾದ ದ. 10ರಂದು ಹಿರಿಯ ವಿದ್ಯಾರ್ಥಿ ಸಂಘ ಪ್ರಸ್ತುತಪಡಿಸುವ ‘ಅವಿಯುಕ್ತ – ೨೦೨೨’ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಹಾಲ್ ಶೆಟ್ಟಿ ವಹಿಸಲಿದ್ದಾರೆ. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಸುರೇಂದ್ರ ಕಿಣಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ರವಿನಾರಾಯಣ, ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ಡಾ. ಸ್ಮಿತಾ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.