ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ
ಪುತ್ತೂರು: ಕಂಬಳ ಕೂಟವನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಾಣಿದಯಾ ಸಂಘದವರು ಸಲ್ಲಿಸಿರುವ ಅರ್ಜಿ ಮತ್ತು ಪ್ರಾಣಿದಯಾ ಸಂಘದವರ ಅರ್ಜಿಗೆ ಪ್ರತಿಯಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಮತ್ತಿತರರು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸಿದೆ.
ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಪೂರ್ಣ:
ಕಂಬಳ ಕೂಟದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ. ಆದ್ದರಿಂದ ಕಂಬಳ ಆಯೋಜನೆಗೆ ನಿಷೇಧ ಹೇರಬೇಕು ಎಂದು ಪ್ರಾಣಿದಯಾ ಸಂಘ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಇದರ ವಿರುದ್ಧ ಅಶೋಕ್ ರೈಯವರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ ರಾಷ್ಟ್ರಪತಿಯವರು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಂಬಳ ಕೂಟಕ್ಕೆ ಅವಕಾಶ ಕಲ್ಪಿಸಿದ್ದರು.
ಆ ಬಳಿಕ ಕರ್ನಾಟಕದ ಕರಾವಳಿ ಭಾಗದಲ್ಲಿ ನಿರಾತಂಕವಾಗಿ ಕಂಬಳ ಕೂಟ ನಡೆಯುತ್ತಿತ್ತು. ಈ ಮಧ್ಯೆ, ಪ್ರಾಣಿದಯಾ ಸಂಘದವರು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಕಂಬಳವನ್ನು ನಿಷೇಧಿಸಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಇದಕ್ಕೆ ತಕರಾರು ಅರ್ಜಿ ಸಲ್ಲಿಸಿದೆ.
ಕಂಬಳ ಸಮಿತಿಗಳ ಪರವಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈಯವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ಕಂಬಳ ಕೂಟಕ್ಕೆ ಪ್ರಾಚೀನ ಇತಿಹಾಸ ಇದೆ. ಧಾರ್ಮಿಕ ಪರಂಪರೆ ಇದೆ. ಕಂಬಳದಲ್ಲಿ ಕೋಣಗಳಿಗೆ ಹಿಂಸೆ ಆಗುವುದಿಲ್ಲ. ಮಕ್ಕಳಂತೆ ಕೋಣಗಳನ್ನು ಪ್ರೀತಿಸಿ ಸಾಕಿ ಸಲಹಲಾಗುತ್ತಿದೆ. ಆದ್ದರಿಂದ ಕಂಬಳ ಕೂಟಕ್ಕೆ ನಿಷೇಧ ಹೇರಬಾರದು. ಎಂದಿನಂತೆ ಕಂಬಳ ಕೂಟ ಆಯೋಜನೆಗೆ ಅವಕಾಶ ಕೊಡಬೇಕು ಎಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಜಲ್ಲಿಕಟ್ಟು, ಕಂಬಳ ಮುಂತಾದ ಕ್ರೀಡೆಗಳ ಕುರಿತು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಅಂತಿಮ ತೀರ್ಪು ಪ್ರಕಟಿಸಲಿದೆ. ಅಶೋಕ್ ರೈ ಪರ ಖ್ಯಾತ ವಕೀಲ ಸಂಜಯ್ ನೂಲಿ ವಾದ ಮಂಡಿಸುತ್ತಿದ್ದಾರೆ.