ಕಡಬ: ಸಚಿವ ಎಸ್. ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರದಿಂದ ನಗರೋತ್ಥಾನ ಯೋಜನೆಯಡಿ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಮಂಜೂರಾದ 5 ಕೋಟಿ ರೂ. ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯಡಿ ಮಂಜೂರಾದ 2.90 ಕೋಟಿ ರೂ. ಕಾಮಗಾರಿಗಳಿಗೆ ಸಚಿವ ಎಸ್. ಅಂಗಾರ ಅವರು ಡಿ.12ರಂದು ಚಾಲನೆ ನೀಡಿದರು.
ಬಳಿಕ ಕಡಬ ಸಿ.ಎ.ಬ್ಯಾಂಕ್ ವಠಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು, ಈ ಹಿಂದೆ ದೇಶ ಮತ್ತು ರಾಜ್ಯವನ್ನು ಆಳಿದ ಕಾಂಗ್ರೆಸ್ ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದ ಅಭಿವೃದ್ದಿ ಕಾರ್ಯಗಳು ನಡೆಯುತ್ತಿರಲಿಲ್ಲ, ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆದ ಬಳಿಕ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಸಡಕ್ ಯೋಜನೆಯನ್ನು ತರಲಾಯಿತು, ಇದರಿಂದ ಗ್ರಾಮ ಗ್ರಾಮಗಳ ಮಧ್ಯೆ ಸಂಪರ್ಕ ರಸ್ತೆಗಳು ಅಭಿವೃದ್ದಿಯಾದವು, ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯಿತು.
ಸುಳ್ಯ ಕ್ಷೇತ್ರದಲ್ಲಿ ಬಹುತೇಕ ಅಭಿವೃದ್ದಿ ಕಾಮಗಾರಿಗಳು ನಡೆದಿದ್ದರೂ ಇನ್ನೂ ಹಲವು ರಸ್ತೆಗಳ ಅಭಿವೃದ್ದಿ ಬಾಕಿ ಇದೆ, ಎಲ್ಲವನ್ನೂ ಹಂತ ಹಂತವಾಗಿ ಮಾಡಲಾಗುವುದು. ಅಭಿವೃದ್ದಿಯ ಬಗ್ಗೆ ಜನರು ನೀಡಿದ ಮನವಿಗಳನ್ನು ಯಾವುದನ್ನು ನಿರ್ಲಕ್ಷ ಮಾಡುತ್ತಿಲ್ಲ, ಸಂದರ್ಭ ಬಂದಾಗ ಅದಕ್ಕೆ ಅನುದಾನ ಜೋಡಿಸಿಕೊಂಡು ಅನುದಾನ ನೀಡಲಾಗುವುದು, ಕಡಬ ತಾಲೂಕು ಅಭಿವೃದ್ದಿಗೆ ಸಂಬಂಧಪಟ್ಟು ಮಿನಿ ವಿಧಾನಸೌಧ ಕಟ್ಟಡ, ಕಡಬ ತಾಲೂಕು ಪಂಚಾಯತ್ ಕಟ್ಟಡಗಳು ನಿರ್ಮಾಣವಾಗುತ್ತಿದೆ, ಇದರ ಉದ್ಘಾಟನೆಗೆ ಮುಖ್ಯ ಮಂತ್ರಿಗಳನ್ನೆ ಆಹ್ವಾನಿಸಲಾಗುವುದು ಎಂದ ಸಚಿವ ಅಂಗಾರ ಅವರು ಕಡಬದ ಬಸ್ಸು ತಂಗುದಾನಕ್ಕೆ ಸಂಬಂಧಿಸಿ ಈಗಾಗಲೇ ಸಾರಿಗೆ ಸಚಿವರಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. 60 ವರ್ಷ ಆಡಳಿತ ಮಾಡಿ ಅಭಿವೃದ್ದಿ ಮಾಡದವರು ಇದೀಗ ಅತ್ಯಲ್ಪ ಸಮಯದಲ್ಲಿ ಬಿಜೆಪಿ ಸರಕಾರ ಮಾಡಿದ ಸಾಧನೆಗೆ ಅಸೂಯೆಪಟ್ಟು ಬಿಜೆಪಿಯ ಬಗ್ಗೆ ಜನರಲ್ಲಿ ತಪ್ಪು ಭಾವನೆ ಉಂಟು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ, ಆದರೆ ಪ್ರಜ್ಞಾವಂತ ನಾಗರಿಕರಿಗೆ ಎಲ್ಲವೂ ಅರ್ಥವಾಗಿದೆ, ಇನ್ನೂ ಕಾಂಗ್ರೆಸ್ ಆಟ ನಡೆಯದು ಎಂದು ಅವರು ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಅವರು ಮಾತನಾಡಿ, ಬಿಜೆಪಿ ಸರಕಾರ ಬಂದ ಬಳಿಕ ಸುಳ್ಯ ಕ್ಷೇತ್ರವೂ ಸಾಕಷ್ಟು ಅಭಿವೃದ್ದಿಯನ್ನು ಕಂಡಿದೆ, ಅದೇ ರೀತಿ ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಯೂ ಅಭಿವೃದ್ದಿಯಾಗಿದ್ದು, ರಾಜ್ಯದಲ್ಲಿ ಮೀನುಗಾರಿಗೆ ಖಾತೆ ನಂ.ಒನ್ ಖಾತೆ ಆಗಿ ಹೊರಹೊಮುತ್ತಿದೆ, ಇದು ನಮ್ಮ ಸಚಿವರ ಸಾಧನೆ ಎಂದು ಹೇಳಿದರು.
ಪ್ರ.ಶಿಕ್ಷಣ ಪ್ರಕೋಷ್ಠದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಸತೀಶ್ ನಾಯಕ್, ಪುಲಸ್ತ್ಯ ರೈ, ಪ್ರಕಾಶ್ ಎನ್.ಕೆ. ರಮೇಶ್ ಕಲ್ಪುರೆ, ಸೀತಾರಾಮ ಗೌಡ ಪೊಸವಳಿಕೆ, ಪಿ.ವೈ. ಕುಸುಮಾ, ಸುಂದರ ಗೌಡ ಮಂಡೆಕರ, ಸುಳ್ಯ ಮಂಡಲ ಸಾಮಾಜಿಕ ಜಾಲತಾಣದ ಸಂಚಾಲಕ ಘಯಾಜ್ ಕೆನರಾ ಉಪಸ್ಥಿತರಿದ್ದರು.
ಸಚಿವರಿಗೆ ಸನ್ಮಾನ:
ಮೂರಾಜೆ ಕೊಪ್ಪ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿದ ಸಚಿವ ಎಸ್. ಅಂಗಾರ ಅವರನ್ನು ಮೂರಾಜೆ ಶಾಲೆಯ ಪರವಾಗಿ ಅಲ್ಲಿಯ ನಾಗರಿಕರು ಸನ್ಮಾನಿಸಿದರು.
ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಎ.ಪಿ. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೇಶವ ಬೇರಿಕೆ ವಂದನಾರ್ಪಣೆ ಸಲ್ಲಿಸಿದರು. ಯುವ ಮೊರ್ಛ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್. ಪ್ರಾರ್ಥನೆ ಹಾಡಿ, ಕಾರ್ಯಕ್ರಮ ನಿರೂಪಿಸಿದರು.