ಶಿಕ್ಷಣ ಜ್ಞಾನದ ಜೊತೆಗೆ ಚಾರಿತ್ರ್ಯ ನಿರ್ಮಾಣವೂ ಮಾಡುತ್ತದೆ; ಜಗದೀಶ್ ಹೆಬ್ಬಾರ್ ಕಾರಿಜ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲಾ 2022-23ನೇ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.13ರಂದು ನಡೆಯಿತು.
ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಗಮ ಬೆಂಗಳೂರು ಇದರ ಸಂಪನ್ಮೂಲ ವ್ಯಕ್ತಿ ಜಗದೀಶ್ ಹೆಬ್ಬಾರ್ ಕಾರಿಜರವರು ಮಾತನಾಡಿ, ಶಿಕ್ಷಣವು ಜ್ಞಾನದ ಜೊತೆಗೆ ಚಾರಿತ್ರ್ಯ ನಿರ್ಮಾಣ ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಮಯ ಹಾಗೂ ಸಮಯ ಪ್ರಜ್ಞೆ ಮುಖ್ಯವಾಗಿದೆ. ಆಟೋಟ, ಸಾಂಸ್ಕೃತಿಕ ಸೇರಿದಂತೆ ಶಾಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಯೂ ಪೂರ್ಣವಾಗಿ ಪಾಲ್ಗೊಳ್ಳಬೇಕು. ದೈವರಾಧಾನೆ, ಯಕ್ಷಗಾನ, ಕಂಬಳ ಬಗ್ಗೆಯೂ ಆಸಕ್ತಿ ಹೊಂದಬೇಕು. ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಯು ಎಲ್ಲಾ ವಿಚಾರದಲ್ಲೂ ಸರ್ವತೋಮುಖ ಬೆಳವಣಿಗೆ ಆಗಬೇಕೆಂದು ಹೇಳಿದರು.
ದೇಶದಲ್ಲಿ ಶೇ.60ರಷ್ಟು ಯುವಕರಿದ್ದಾರೆ. ಆದರೆ ಯುವಶಕ್ತಿ ಯಾವುದೇ ವಿಚಾರದಲ್ಲೂ ಸಮರ್ಪಕವಾಗಿ ತೊಡಗಿಕೊಳ್ಳುತ್ತಿಲ್ಲ. ಇದಕ್ಕೆ 70ವರ್ಷದ ಹಿಂದಿನ ಶಿಕ್ಷಣ ನೀತಿಯೇ ಕಾರಣವಾಗಿದೆ. ಹಿಂದೆ ಗುರುಕುಲ ಶಿಕ್ಷಣ ಸಿಗುತ್ತಿತ್ತು. ಈಗ ಮಕ್ಕಳಿಗೆ ಹೊಡೆದು, ತಿದ್ದಿ ಹೇಳುವವರಿಲ್ಲ. ರಾಷ್ಟ್ರ, ಧರ್ಮ, ಸಂಸ್ಕೃತಿಯ ಶಿಕ್ಷಣ ಸಿಗಬೇಕೆಂದು ಜಗದೀಶ್ ಹೆಬ್ಬಾರ್ ಕಾರಿಜ ಹೇಳಿದರು. ಇನ್ನೋರ್ವ ಅತಿಥಿ ಪುತ್ತೂರು ಸಮರ್ಥ ನಿಧಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ನವೀನ್ಕುಮಾರ್ ಕೆ. ಮಾತನಾಡಿ, ಪ್ರತಿಭೆ ಎಂಬುದು ಎಲ್ಲರಲ್ಲೂ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಗಾಧ ಶಕ್ತಿ ಇದೆ. ಹಿಂಜರಿಕೆ ಬಿಟ್ಟು ಸಾಧಿಸುವ ಪ್ರಯತ್ನ, ಛಲ, ಪರಿಶ್ರಮ, ಶ್ರದ್ಧೆ ಇರಬೇಕು. ಇದರಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ರವರು ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದಲ್ಲಿ ವಿದ್ಯಾರ್ಥಿಯಲ್ಲಿನ ಯಾವ ಪ್ರತಿಭೆಗೂ ಮಾನ್ಯತೆ ಸಿಗುವುದಿಲ್ಲ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದು ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿಗಳ ಏಳಿಗೆಗೆ ಉಪನ್ಯಾಸಕರು, ಶಿಕ್ಷಕರು ಶ್ರಮ ವಹಿಸುತ್ತಿದ್ದಾರೆ. ವಿದ್ಯಾರ್ಥಿಯು ಒಳ್ಳೆಯ ಹುದ್ದೆ, ಸ್ಥಾನಕ್ಕೆ ಹೋಗುವ ಮೂಲಕ ವಿದ್ಯಾಸಂಸ್ಥೆಗೂ ಹೆಸರು ತರಬೇಕೆಂದು ಹೇಳಿದರು.
ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ನಿವೃತ್ತ ಉದ್ಯೋಗಿ ರವೀಂದ್ರ ಆನ, ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕಟ್ಟಪುಣಿ, ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನನ್ಯ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜನನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ರವೀಶ, ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ಗಗನ್ದೀಪ್ರವರು ವಿದ್ಯಾರ್ಥಿ ಸಂಘದ ಚಟುವಟಿಕೆ ಬಗ್ಗೆ ವರದಿ ಮಂಡಿಸಿದರು. ಪ್ರಾಂಶುಪಾಲ ಚಂದ್ರಶೇಖರ ಕೆ.ಅತಿಥಿಗಳನ್ನು ಪರಿಚಯಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಸತೀಶ್ ಭಟ್ ವಂದಿಸಿದರು. ಶಿಕ್ಷಕ ಬಾಲಚಂದ್ರ ಮುಚ್ಚಿಂತಾಯ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಬಹುಮಾನ ವಿತರಣೆ:
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಕೆಗಳಲ್ಲಿ ಸಾಧನೆ ಮಾಡಿದ ಪದವಿ ಪೂರ್ವ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲಾ ಸಾಧಕ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪನ್ಯಾಸಕರಾದ ಮಲ್ಲಿಕಾ, ಪ್ರಜ್ಞಾ, ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ಭವ್ಯ, ಸುಪ್ರೀತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಭರತ್, ಪ್ರಫುಲ್ಲಾ ರೈಯವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಕಾರ್ಯಕ್ರಮದ ಅತಿಥಿಗಳಾಗಿದ್ದ ಜಗದೀಶ್ ಹೆಬ್ಬಾರ್ ಕಾರಿಜ, ನವೀನ್ಕುಮಾರ್ ಕೆ., ರವೀಂದ್ರ ಆನ ಅವರಿಗೆ ಶಾಲು ಹಾಕಿ, ಹಾರಾರ್ಪಣೆ ಮಾಡಿ ಗೌರವಿಸಲಾಯಿತು.