ಪುತ್ತೂರು:ರೈಲ್ವೇ ಅಧೀನದ ಮಡಿವಾಳಕಟ್ಟೆ-ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಮಳೆನೀರಿನ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ರೈಲ್ವೇ ಸಬ್ಡಿವಿಷನಲ್ ಇಂಜಿನಿಯರ್ಗೆ ಪತ್ರದ ಮೂಲಕ ಸೂಚಿಸಿದ್ದಾರೆ.
ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿರುವ ರೈಲ್ವೇ ಅಧೀನದ ಮಡಿವಾಳಕಟ್ಟೆ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಮಳೆನೀರಿನ ಚರಂಡಿ ಇಲ್ಲದೆ ಸಮರ್ಪಕವಾಗಿ ಮಳೆನೀರು ಹರಿದು ಹೋಗದೆ ಸ್ಥಳೀಯ ಸಾರ್ವಜನಿಕ ಸ್ಥಳಗಳಿಗೆ ಮತ್ತು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಈ ಕುರಿತು ರೈಲ್ವೇ ಇಲಾಖೆಯಿಂದ ಅಗತ್ಯ ಕಾಮಗಾರಿ ಕೈಗೊಳ್ಳಲು ಸೂಚಿಸುವಂತೆ ಪುತ್ತೂರು ನಗರಯೋಜನಾ ಪ್ರಾಽಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಶಾಸಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ, ಮಳೆ ನೀರಿನ ಹರಿವಿಗೆ ಸಾರ್ವಜನಿಕ ವಾಹನ ಸಂಚಾರಕ್ಕೆ ಅನುಕೂಲ ಮತ್ತು ರೈಲ್ವೇ ಜಮೀನಿನ ಅತಿಕ್ರಮಣ ತಡೆಗಟ್ಟುವ ನಿಟ್ಟಿನಲ್ಲಿ ಆರ್ಸಿಸಿ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ರೈಲ್ವೇ ಸಬ್ಡಿವಿಷನಲ್ ಇಂಜಿನಿಯರ್ಗೆ ಶಾಸಕರು ಸೂಚನೆ ನೀಡಿದ್ದಾರೆ.