ರಾಮಕುಂಜ: ಕೊಯಿಲ ಗ್ರಾಮದ ಬುಡಲೂರಿನ ಕೀರ್ತಿಕಾ ಬಿ.ರವರು ಕೇಂದ್ರ ಸರಕಾರದ ಅಧೀನದ ರೈಲ್ವೆ ಭರ್ತಿ ಮಂಡಳಿಯು ನಡೆಸಿದ 2019ನೇ ಎನ್.ಟಿ.ಪಿ.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸ್ಟೇಷನ್ ಮಾಸ್ಟರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
2019ನೇ ಫೆಬ್ರವರಿಯಲ್ಲಿ ರೈಲ್ವೆ ಭರ್ತಿ ಮಂಡಳಿಯು ಎನ್.ಟಿ.ಪಿ.ಸಿ.ಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ದೇಶದಾದ್ಯಂತ 1.23 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕೋವಿಡ್-19 ಕಾರಣದಿಂದ ಪರೀಕ್ಷೆಯು ಮುಂದೂಡಲ್ಪಟ್ಟು ಫೆಬ್ರವರಿ 2021ರಲ್ಲಿ ಪರೀಕ್ಷೆ ನಡೆದಿದ್ದು ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶ ಜನವರಿ 2022ರಲ್ಲಿ ಪ್ರಕಟವಾಯಿತು. ಪ್ರಥಮ ಹಂತದ 1, ದ್ವಿತೀಯ ಹಂತದ 4 ಮತ್ತು ತೃತೀಯ ಹಂತದ 2 ಪರೀಕ್ಷೆಯು ಮಂಗಳೂರು, ತಿರುಚಿರಾಪಳ್ಳಿ, ಬೆಂಗಳೂರು ಮತ್ತು ಕಣ್ಣೂರು ಕೇಂದ್ರಗಳಲ್ಲಿ ನಡೆಯಿತು. ಈ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕೀರ್ತಿಕಾರವರು ಡಿ.9ರಂದು ರೈಲ್ವೆ ಹುಬ್ಬಳ್ಳಿ ವಿಭಾಗದಲ್ಲಿ ಸ್ಟೇಷನ್ ಮಾಸ್ಟರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಯಾವುದೇ ಕೋಚಿಂಗ್ ಇಲ್ಲದೆ ಸ್ವಪ್ರಯತ್ನದಿಂದ ಪ್ರಥಮ ಪ್ರಯತ್ನದಲ್ಲಿಯೇ ಪರೀಕ್ಷೆಗೆ ಬರೆದು ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಪುತ್ತೂರು ನಗರಸಭೆಯ ನಿವೃತ್ತ ಕಂದಾಯ ಅಧಿಕಾರಿ ಬಿ. ರಾಮಯ್ಯ ಗೌಡ(ರಮೇಶ) ಮತ್ತು ಲೀಲಾವತಿ ದಂಪತಿಯ ಪುತ್ರಿ.