ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಕೊಯಿಲ- ಉಳಯ ಸಂಪರ್ಕ ರಸ್ತೆ ಹಾಗೂ ತಲೆಂಜಿ ಉಳಯ ಸಂಪರ್ಕ ರಸ್ತೆ ಸಹಿತ 13 ಕಡೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 1 ಕೋಟಿ 60 ಲಕ್ಷ ರೂಪಾಯಿ ಅನುದಾನದ ರಸ್ತೆ ಕಾಂಕ್ರೀಟೀಕರಣಕ್ಕೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿದರು. ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 25, 30 ವರ್ಷಗಳಲ್ಲಿ ಡಾಮರು ಹಾಗೂ ಕಾಂಕ್ರೀಟ್ ಕಾಣದ ಹೊಸ ರಸ್ತೆಗಳು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಕಾಕ್ರೀಟ್ ರಸ್ತೆಯಾಗುತ್ತದೆ. ಇದರಿಂದ ಈ ಭಾಗಕ್ಕೆ ಹೊಸ ಬೆಳಕು ಸಿಗುವಂತಾಗುತ್ತದೆ ಎಂದು ಅರ್ಥ. ಮುಂದಿನ ದಿನಗಳಲ್ಲಿ ಆ ಭಾಗದ ರಸ್ತೆಗಳು ಮತ್ತು ಗ್ರಾಮದ ಅಭಿವೃದ್ಧಿಯಾಗುವ ಸಂಕೇತವಾಗಿದೆ ಎಂದರು.
ಗೆಜ್ಜೆಗಿರಿ ಹನುಮಗಿರಿ ಪಡುಮಲೆ ಶಂಖಪಾಲ ಬೆಟ್ಟ, ಕೋಟಿ ಚೆನ್ನಯರ ಆರಾಧನಾ ಕೇಂದ್ರಗಳು ಒಟ್ಟಿನಲ್ಲಿ ಪಡುಮಲೆ ಪ್ರವಾಸಿ ತಾಣವಾಗಿ ಹೊರಹೊಮ್ಮುತಿರುವ ಸಂದರ್ಭದಲ್ಲಿ ಇಲ್ಲಿಗೆ ಯಾವ ಭಾಗದಿಂದ ಬಂದರು ರಸ್ತೆ ಸಂಚಾರಕ್ಕೆ ತಡೆಯಾಗದೆ ಸುಗಮವಾಗಿ ಸಂಚರಿಸುವ ನಿಟ್ಟಿನಲ್ಲಿ ಗ್ರಾಮದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಿ ಸರ್ವಋತು ಸಂಚರಿಸಲು ಅನುಕೂಲ ಕಲ್ಪಿಸುವುದು ನಮ್ಮ ಧ್ಯೇಯ. ಇದರಿಂದ ಗ್ರಾಮಸ್ಥರು ಪದೇಪದೇ ರಸ್ತೆ ದುರಸ್ತಿ ಅರ್ಜಿ ಸಲ್ಲಿಸುವ ಪ್ರಮೇಯ ಕೂಡ ಕಡಿಮೆಯಾಗುತ್ತದೆ ಎಂದ ಅವರು ಗ್ರಾಮದಲ್ಲಿ ಜಲಸಿರಿ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು, 94 ಸಿ ಯಲ್ಲಿ ನಿವೇಶನ ರಹಿತ ಕುಟುಂಬಕ್ಕೆ ನಿವೇಶನ, ಸ್ವಚ್ಛ ಗ್ರಾಮ ಯೋಜನೆಯಡಿ ಪಂಚಾಯತಿಗೊಂದು ಘನ ತ್ಯಾಜ್ಯ ನಿರ್ವಹಣೆ ಘಟಕ ಹಾಗೂ ತ್ಯಾಜ್ಯ ವಿಲೇವಾರಿ ಮಾಡಲು ವಾಹನ ವ್ಯವಸ್ಥೆ, ವಸತಿ ಯೋಜನೆಯಡಿ ಸುಮಾರು 50 ಮನೆ ಹಂಚಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ಅಭಿವೃದ್ಧಿಗೆ ಸುಮಾರು 32 ಕೋಟಿ ಅನುದಾನ ಸರ್ಕಾರ ನೀಡಿದೆ.
ಸಮುದಾಯ ಅಭಿವೃದ್ಧಿ ಯೋಜನೆಯಡಿ ಪಡುಮಲೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 15 ಲಕ್ಷ ರೂಪಾಯಿ, ಧಾರ್ಮಿಕ ಹಾಗೂ ಮಂಗಳ ಕಾರ್ಯ ನಡೆಸುವ ದೃಷ್ಟಿಯಿಂದ ಸಭಾಭವನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ, ನೂತನ ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದ ಅವರು ಮುಂದಿನ 6 ತಿಂಗಳಲ್ಲಿ ಚುನಾವಣೆ ಎದುರಾಗುತ್ತದೆ. ಪುನಃ ನಮ್ಮನ್ನು ಅರ್ಶೀವಾದಿಸಿ ಇನ್ನಷ್ಟು ಗ್ರಾಮದ ಅಭಿವೃದ್ಧಿಪಡಿಸುವಲ್ಲಿ ಪಣತೊಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ ಹಾಗೂ ಗ್ರಾ.ಪಂ ಸದಸ್ಯರು, ಪಕ್ಷದ ಪ್ರಮುಖರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.