ವರದಿ: ಹರೀಶ್ ಬಾರಿಂಜ
ನೆಲ್ಯಾಡಿ: ಸಿ ಮತ್ತು ಡಿ ದರ್ಜೆ ಸ್ಥಾನಮಾನ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಸರಕಾರ, ಸಚಿವರು ಹಾಗೂ ಇಲಾಖೆಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ(ಆರ್.ಡಿ.ಪಿ.ಆರ್) ಇದೀಗ ನಿರ್ಣಾಯಕ ಹೋರಾಟಕ್ಕೆ ಮುಂದಾಗಿದೆ. ಡಿ.19ರಿಂದ ಅನಿರ್ಧಿಷ್ಟಾವಧಿ ತನಕ ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನೌಕರರು ಸಾಮೂಹಿಕ ರಜೆ ಪಡೆದುಕೊಂಡಿದ್ದಾರೆ.
ಗ್ರಾಮ ಪಂಚಾಯತ್ ನೌಕರರು ಕಳೆದ 8 ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ, ಸಚಿವರು ಹಾಗೂ ಸರಕಾರದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಆದರೂ ಸರಕಾರದಿಂದ ಈ ತನಕ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳಿಗೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾ.ಪಂ.ನೌಕರರು ತಮ್ಮ ಮೂಲಭೂತ ಬೇಡಿಕೆಗಳಿಗಾಗಿ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ. ಡಿ.19ರಿಂದ 30ರ ತನಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದ್ದು ಇದೇ ಸಂದರ್ಭದಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸಲು ನೌಕರರು ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಹೋರಾಟದಲ್ಲಿ ರಾಜ್ಯದ 5600ಕ್ಕೂ ಮಿಕ್ಕಿದ ಗ್ರಾಮ ಪಂಚಾಯತ್‌ಗಳ ನೌಕರರೂ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ನೌಕರರಿಗೆ ಸೂಕ್ತ ಸ್ಥಾನಮಾನ ಮತ್ತು ಸವಲತ್ತು ನೀಡದೇ ಕೇವಲ ಕನಿಷ್ಠ ವೇತನ ನೀಡಿ ಹಗಲಿರುಳು ದುಡಿಸಿಕೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಹಲವಾರು ಒತ್ತಡದೊಂದಿಗೆ ಗ್ರಾಮ ಪಂಚಾಯಿತಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಸರಕಾರ ಗ್ರಾಮ ಪಂಚಾಯತ್ ನೌಕರರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ನೌಕರರು ನೋವು ತೋಡಿಕೊಂಡಿದ್ದಾರೆ.
ಸಾಮೂಹಿಕ ರಜೆ: ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‌ಗಳ 98 ಹಾಗೂ ಕಡಬ ತಾಲೂಕಿನ 21 ಗ್ರಾಮ ಪಂಚಾಯಿತ್‌ಗಳ 94 ನೌಕರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿರುವ ಗ್ರಾಮ ಪಂಚಾಯತ್ ನೌಕರರು ಡಿ.18ರಂದೇ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂಬಂಧ ಎಲ್ಲಾ ನೌಕರರೂ ಈಗಾಗಲೇ ಡಿ.19ರಿಂದ 23ರ ತನಕ 5 ದಿನಗಳ ರಜೆ ಪಡೆದುಕೊಂಡಿದ್ದಾರೆ.
ಚಟುವಟಿಕೆ ಸ್ಥಬ್ಧ ?: ಗ್ರಾಮ ಪಂಚಾಯಿತಿ ನೌಕರರು ಸಾಮೂಹಿಕವಾಗಿ ರಜೆ ಪಡೆದುಕೊಂಡಿರುವುದರಿಂದ ಗ್ರಾಮ ಪಂಚಾಯಿತಿ ಕೆಲಸಗಳು ಸ್ಥಬ್ಧಗೊಳ್ಳಲಿದೆ. ಈ ಮಧ್ಯೆ ಡಿ.19ರಿಂದ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘವೂ ನಿಶ್ಚಿತ ಪಿಂಚಣಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ’ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಕರೆ ಕೊಟ್ಟಿದ್ದು ಇದರಲ್ಲಿ ಗ್ರಾಮ ಪಂಚಾಯತ್‌ಗಳ ಬಹುತೇಕ ಪಿಡಿಒಗಳೂ ಭಾಗಿಯಾಗುತ್ತಿದ್ದಾರೆ. ಇದರಿಂದಾಗಿ ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯಚಟುವಟಿಕೆಗಳು ಸ್ಥಗಿತಗೊಳ್ಳುವ ಸಂಭವವಿದೆ. ಇದರಿಂದ ಗ್ರಾಮ ಪಂಚಾಯತ್‌ಗಳಲ್ಲಿನ ತುರ್ತು ಕೆಲಸಗಳಿಗೆ ಗ್ರಾಮಸ್ಥರು ತೊಂದರೆ ಅನುಭವಿಸುವ ಸಾಧ್ಯತೆ ದಟ್ಟವಾಗಿದೆ.
ಗ್ರಾ.ಪಂ.ನೌಕರರ ಪ್ರಮುಖ ಬೇಡಿಕೆಗಳು:
* ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್/ಕ್ಲರ್ಕ್ ಕಮ್ ಡಿಇಓ, ಬಿಲ್ ಕಲೆಕ್ಟರ್ ಹಾಗೂ ಡಾಟ ಎಂಟ್ರೀ ಅಪರೇಟರ್‌ಗಳಿಗೆ ಸಿ ದರ್ಜೆ ಸ್ಥಾನಮಾನ ಮತ್ತು ಅಟೆಂಡರ್, ಕ್ಲೀನರ್, ವಾಟರ್ ಮ್ಯಾನ್/ಪಂಪು ಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ಸ್ಥಾನಮಾನ ನೀಡಿ, ನಗರ ಮತ್ತು ಪಟ್ಟಣ ಪಂಚಾಯತ್‌ನಂತೆ ಸೇವಾನಿಯಮಾವಳಿ, ವೇತನ ಶ್ರೇಣಿ ನಿಗದಿಪಡಿಸಬೇಕು
* ಗ್ರಾಮ ಪಂಚಾಯತ್ ನೌಕರರು ಮತ್ತು ನೌಕರರ ಅವಲಂಬಿತರಿಗೆ ಆರೋಗ್ಯ ಭದ್ರತೆಯೊಂದಿಗೆ ನಿವೃತ್ತಿ ಜೀವನಕ್ಕೆ ಭವಿಷ್ಯ ನಿಧಿ/ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಬೇಕು.
* ಸರ್ಕಾರದ ಆದೇಶ ದಿನಾಂಕ: 29-09-2020ರ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸದೇ ಹಾಗೂ ಪಂಚಾಯತ್‌ಗಳಲ್ಲಿ ಹುದ್ದೆಗಳ ಗರಿಷ್ಠ ಮಿತಿಯನ್ನು ನಿಗದಿಪಡಿಸದೆ ಜಿಲ್ಲಾ ಪಂಚಾಯತ್‌ನಿಂದ ಅನುಮೋದನೆ ನೀಡಬೇಕು.
* ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಇತರೆ ಸಮಸ್ಯೆಗಳಿಂದ ಜಿಲ್ಲಾ ಪಂಚಾಯತ್ ಅನುಮೋದನೆಯಾಗದೇ ನಿವೃತ್ತಿಯಾದ ಹಾಗೂ ಮುಂದೆ ನಿವೃತ್ತಿಯಾಗುವ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಗೆ ನಿವೃತ್ತಿ ಉಪ ಧನ ಮಂಜೂರು ಮಾಡಬೇಕು. ಸದ್ರಿ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಸರಕಾರವೇ ಒಂದು ಶಾಶ್ವತ ನಿಧಿಯನ್ನು ಕಾಯ್ದಿರಿಸಬೇಕು.
ಗ್ರಾ.ಪಂ.ನೌಕರರು ಡಿ.19ರಿಂದ 5 ದಿನ ಸಾಮೂಹಿಕ ರಜೆ ಪಡೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಗ್ರಾಮ ಪಂಚಾಯತ್‌ನ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ. ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಗ್ರಾ.ಪಂ.ನೌಕರರ ಬೇಡಿಕೆಗೆ ಸ್ಪಂದಿಸಬೇಕು.
ವಿನೀತಾ ತಂಗಚ್ಚನ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಶಿರಾಡಿ
ಗ್ರಾಮ ಪಂಚಾಯತ್ ನೌಕರರು ಸೇವಾ ಭದ್ರತೆ ಇಲ್ಲದೇ ಕನಿಷ್ಠ ವೇತನದಲ್ಲಿ ಗರಿಷ್ಠ ಸೇವೆ ನೀಡುತ್ತಿದ್ದೇವೆ. ಗ್ರಾ.ಪಂ.ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡುವಂತೆ ಮುಖ್ಯಮಂತ್ರಿಗಳಿಂದ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಇದಕ್ಕೆ ಸ್ಪಂದನೆ ಸಿಗದೇ ಇರುವ ಹಿನ್ನೆಲೆಯಲ್ಲಿ ಡಿ.19ರಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧದ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ.
ಪುಷ್ಪಾಲತಾ ಗೋಳಿತ್ತೊಟ್ಟು
ಅಧ್ಯಕ್ಷರು. ಕ.ರಾ.ಗ್ರಾ.ಪಂ.ನೌ. ಶ್ರೇಯೋಭಿವೃದ್ಧಿ ಸಂಘ,
ಕಡಬ ತಾಲೂಕು