ನಗರಸಭೆ ವಿಶೇಷ ಸಾಮಾನ್ಯ ಸಭೆ; ಎಡಿಬಿ ವೈಫಲ್ಯತೆ ಜಲಸಿರಿಯಲ್ಲೂ ಮುಂದುವರಿಕೆ-ಸದಸ್ಯರ ಆರೋಪ

0

15 ದಿನದೊಳಗೆ ಜಲಸಿರಿ-ಕೌನ್ಸಿಲರ‍್ಸ್ ಮೀಟಿಂಗ್-ಜೀವಂಧರ್ ಜೈನ್

ಪುತ್ತೂರು:ನಗರಸಭೆ ವ್ಯಾಪ್ತಿಯ ಜಲಸಿರಿ ಕುಡಿಯುವ ನೀರು ಯೋಜನೆಯ ಕಾಮಗಾರಿಯಲ್ಲಿ ಸಾಕಷ್ಟು ವೈಫಲ್ಯತೆ ಕಂಡು ಬರುತ್ತಿದೆ.ಹಿಂದೆ ಎಡಿಬಿ ಯೋಜನೆಯಲ್ಲಿ ಆದ ವೈಫಲ್ಯತೆ ಜಲಸಿರಿ ಕಾಮಗಾರಿಯಲ್ಲೂ ಮುಂದುವರಿಯುತ್ತಿದೆ ಎಂದು ಆರೋಪಿಸಿದ ಸದಸ್ಯರು, ಈ ಕುರಿತು ಜಲಸಿರಿಯವರನ್ನು ಪ್ರಶ್ನಿಸಬೇಕಾಗಿರುವುದರಿಂದ ಅವರನ್ನು ಸಭೆಗೆ ಕರೆಸುವಂತೆ ಆಗ್ರಹಿಸಿದ ಮತ್ತು ಮುಂದಿನ 15 ದಿನಗಳೊಳಗೆ ‘ಜಲಸಿರಿ ವಿದ್ ಕೌನ್ಸಿಲರ‍್ಸ್’ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದ ಘಟನೆ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ನಗರಭೆ ವಿಶೇಷ ಸಾಮಾನ್ಯ ಸಭೆಯು ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಡಿ.20ರಂದು ನಡೆಯಿತು.ಸದಸ್ಯ ಶಕ್ತಿ ಸಿನ್ಹಾ ಅವರು ಮಾತನಾಡಿ, ಈಗಾಗಲೇ ಎಡಿಬಿ ಕಾಮಗಾರಿಯಲ್ಲಿ ಸುಮಾರು 28 ಕೋಟಿ ನೀರಿನಲ್ಲಿ ಇಟ್ಟ ಹೋಮದಂತಾಗಿದೆ. ಅದೇ ಪ್ರಕ್ರಿಯೆ ಜಲಸಿರಿ ಯೋಜನೆಯಲ್ಲೂ ಮುಂದುವರಿಯುತ್ತಿದೆ. ಬೊಳುವಾರು ಸಮೀಪ ಎಂ.ಎಸ್ ಪೈಪ್ ಅಳವಡಿಸಲಾಗಿದೆ.ಸ್ವಚ್ಛ ಶುದ್ದ ಕುಡಿಯುವ ನೀರಿನ ಸರಬರಾಜು ಎಂದು ಹೇಳಿ ತುಕ್ಕು ಹಿಡಿಯುವ ಪೈಪ್ ಹಾಕಿದರೆ ಮುಂದೆ ಮಣ್ಣು ಮಿಶ್ರಿತ ನೀರು ಬರುವ ಸಾಧ್ಯತೆ ಇದೆ. ಜೊತೆಗೆ ಪೈಪ್‌ಗಳನ್ನು ಆಳಕ್ಕೆ ಹಾಕದೆ ಮೇಲ್ಭಾಗದಲ್ಲೇ ಕಾಣುತ್ತಿದೆ. ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿ ತೆಗೆದು ಅದನ್ನು ಸರಿಯಾಗಿ ಮುಚ್ಚದೆ ಒಂದು ಕೆಲಸವನ್ನು ಮತ್ತೆ ಮತ್ತೆ ಮಾಡುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗುತ್ತಿದೆ.ಈ ಎಲ್ಲಾ ವಿಚಾರಗಳ ಕುರಿತು ದೂರು ನೀಡಿದರೂ ನಮಗೂ ನಿಮಗೂ ಏನೂ ಮಾಡಲಾಗುತ್ತಿಲ್ಲ.ಯೋಜನೆಗಳು ಬೆಂಗಳೂರಿನಲ್ಲಿ ಆಗುತ್ತಿದೆ.ಹಾಗಾಗಿ ಅವರನ್ನು ಇಲ್ಲಿಗೆ ಕರೆಸುವಂತೆ ಒತ್ತಾಯಿಸಿದರು.

ಜಲಸಿರಿ ಮೀಟರ್ ಹಾಕಿದಲ್ಲಿ ನೀರಿನ ಸಮಸ್ಯೆ:

ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಜಲಸಿರಿಯ ಪೈಪ್ ಕನೆಕ್ಷನ್ ವೇಳೆ ಮೀಟರ್ ಅಳವಡಿಸಿದ ಬಳಿಕ ಎತ್ತರದ ಮನೆಗಳಿಗೆ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ.ಮೀಟರ್‌ಗಳ ಬಳಿ ನೀರಿನ ಲೀಕೇಜ್ ಆಗುತ್ತಿದೆ.ಬಪ್ಪಳಿಗೆಯಲ್ಲಿ ಕಿಟ್ಟಣ್ಣ ಗೌಡರ ಮನೆಯಿಂದಲೂ ದೂರು ಬಂದಿದೆ. ಹಾಗಾಗಿ ಜಲಸಿರಿ ಪೈಪ್ ಲೈನ್ ಮನೆ ಸಂಪರ್ಕದಲ್ಲಿ ಮೀಟರ್‌ಗೆ ಸಂಪರ್ಕ ಕೊಡಬಾರದು.ಪೂರ್ಣ ಕಾಮಗಾರಿ ಆದ ಬಳಿಕವೇ ಮೀಟರ್ ಸಂಪರ್ಕ ಕೊಡಿಸಬೇಕೆಂದರು.ಸದಸ್ಯೆ ಶಶಿಕಲಾ ಸಿ.ಎಸ್ ಅವರು ಧ್ವನಿಗೂಡಿಸಿದರು.ಮನೋಹರ್ ಕಲ್ಲಾರೆ ಅವರು ಮಾತನಾಡಿ ರಸ್ತೆಗುಂಡಿಗಳನ್ನು ಸರಿಯಾಗಿ ಮುಚ್ಚದೆ ತೊಂದರೆ ಉಂಟಾಗಿದೆ ಎಂದರು.

15 ದಿನದೊಳಗೆ ಜಲಸಿರಿ- ಕೌನ್ಸಿಲರ‍್ಸ್ ಮೀಟಿಂಗ್:

ಜಲಸಿರಿ ಕಾಮಗಾರಿಯಿಂದ ಆಗಿರುವ ಸಮಸ್ಯೆಗಳ ಕುರಿತು ಸದಸ್ಯರಿಂದ ಮಾಹಿತಿ ಪಡೆದ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಜಲಸಿರಿಯವರಿಗೆ ಬಹಳಷ್ಟು ಕಡೆ ಸೂಚನೆ ಕೊಟ್ಟಿದೆ.ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ.ಇತ್ತೀಚೆಗೆ ಪೌರಾಯುಕ್ತರು ಕೂಡಾ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆಯಲ್ಲಿ 15 ದಿವಸದಲ್ಲಿ ಸಭೆ ಕರೆಯಲಾಗುವುದು.ಜಲಸಿರಿ ಮತ್ತು ನಗರಸಭೆ ಸದಸ್ಯರು ತಮ್ಮ ತಮ್ಮ ವಿಷಯ ಪ್ರಸ್ತಾಪಿಸಬಹುದು ಎಂದರು.

ಮಳೆಹಾನಿಗೆ ರೂ.2.50 ಕೋಟಿಗೆ ಪ್ರಸ್ತಾವನೆ:

ನಗರಸಭೆಯ ಮುಖ್ಯರಸ್ತೆಯಲ್ಲಿ ಪ್ಯಾಚ್‌ವರ್ಕ್ ಮಾಡಲಾಗುತ್ತಿರುವುದು ಸಂತೋಷದ ವಿಚಾರ.ಆದರೆ ಸಿಟಿ ಆಸ್ಪತ್ರೆಯಿಂದ ಬಸ್‌ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಪ್ಯಾಚ್‌ವರ್ಕ್ ಮಾಡದೆ ಉಳಿದಿರುವುದು ಗಮನಿಸಿ ಎಂದು ಶಕ್ತಿ ಸಿನ್ಹ ಅವರು ಪ್ರಸ್ತಾಪಿಸಿದರು.ಉತ್ತರಿಸಿದ ಅಧ್ಯಕ್ಷರು ಪ್ಯಾಚ್ ವರ್ಕ್‌ಗೆ ಯಾರು ಕೂಡಾ ಬರುತ್ತಿಲ್ಲ.ಆದರೂ ನಾವು ಮುಖ್ಯರಸ್ತೆಯ ಪ್ಯಾಚ್‌ವರ್ಕ್ ಮಾಡಿಸುತ್ತಿದ್ದೇವೆ.ಮಳೆಹಾನಿಯ ಮೂಲಕ ರೂ.2.5೦ ಕೋಟಿ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಮನೆ ದುರಸ್ತಿಗೆ ಆದಷ್ಟು ಶೀಘ್ರ ದಾಖಲೆ ಕೊಡಿ:

ಅಮೃತ ನಗರೋತ್ಥಾನದ ಕಾಮಗಾರಿಗಳು ಒಂದು ವಾರದೊಳಗೆ ಪ್ರಾರಂಭಗೊಳ್ಳುತ್ತದೆ.ಈಗಾಗಲೇ ರಾಮೇಗೌಡ ಎಂಬವರಿಗೆ ಟೆಂಡರ್ ಆಗಿದೆ.ಒಟ್ಟು ರೂ.16 ಕೋಟಿಯ ಪ್ಯಾಕೇಜ್ ಇದಾಗಿದ್ದು ಹಂತ ಹಂತವಾಗಿ ಕಾಮಗಾರಿ ನಡೆಯುತ್ತದೆ.ಒಟ್ಟು 5 ತಂಡವಾಗಿ ಕಾಮಗಾರಿ ನಡೆಸಲಾಗುತ್ತದೆ. ತಮ್ಮ ತಮ್ಮ ವಾರ್ಡ್‌ಗಳಲ್ಲಿ ಮನೆ ದುರಸ್ತಿಗೆ ಸಂಬಂಧಿಸಿ ಆಯ್ಕೆಯಾದವರು ದಾಖಲೆಯನ್ನು ಆದಷ್ಟು ಬೇಗ ಕೊಡಬೇಕು ಎಂದು ಅಧ್ಯಕ್ಷರು ತಿಳಿಸಿದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರ ಅವರು ಸಭಾ ನಡಾವಳಿಯನ್ನು ಮಂಡಿಸಿದರು.

ಸಭೆಯಲ್ಲಿ ನಗರಸಭಾ ಸದಸ್ಯರಾದ ಶಿವರಾಮ ಎಚ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮತ್ ಝೋರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ, ರೋಬಿನ್ ತಾವ್ರೋ, ಪ್ರೇಂ ಕುಮಾರ್, ಪದ್ಮನಾಭ ನಾಯ್ಕ ಪಡೀಲು, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ಯಶೋಧ ಹರೀಶ್, ದೀಕ್ಷಾ ಪೈ, ಇಂದಿರಾ ಪಿ, ರೋಹಿಣಿ ಕೇಶವ ಪೂಜಾರಿ, ಮಮತ ರಂಜನ್, ಇಸುಬು, ಬಿ.ಶೀನಪ್ಪ ನಾಯ್ಕ, ಪೂರ್ಣಿಮ ಕೋಡಿಯಡ್ಕ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here