ಪುತ್ತೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಸವಣೂರು ಹಾಗೂ ಪ್ರೌಢಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವು ಇತ್ತೀಚೆಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕ್ರೀಡಾಂಗಣದಲ್ಲಿ ನಡೆಯಿತು. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಕಾಲೇಜಿನ ಮತ್ತು ಪ್ರೌಢಶಾಲಾ ವಿಭಾಗದ ಆಕರ್ಷಕ ಪಥಸಂಚಲನದಲ್ಲಿ ಗೌರವಂದನೆಯನ್ನು ಸ್ವೀಕರಿಸಿ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಉಭಯ ಸಂಸ್ಥೆಗಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿರುವ ಗಿರಿಶಂಕರ್ ಸುಲಾಯರವರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳ ಮೂಲಕ ಕ್ರೀಡಾಸ್ಪೂರ್ತಿಯನ್ನು ಮೆರೆದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಶೆಟ್ಟಿ ವಹಿಸಿದ್ದರು.
ಕ್ರೀಡಾ ಜ್ಯೋತಿಯನ್ನು ಬೆಳಗಿಸಿದ ರಾಜ್ಯ ಕ್ರೀಡಾಪಟು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಆಗಿರುವ ರಾಕೇಶ್ ರೈ ಕೆಡಂಜಿ ತನ್ನ ಬಾಲ್ಯದ ಸವಿ ನೆನಪುಗಳೊಂದಿಗೆ ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವದ ಬಗ್ಗೆ ಯಾವ ರೀತಿ ವಿದ್ಯಾರ್ಥಿಗಳು ಶಿಸ್ತು ಸಂಯಮದೊಂದಿಗೆ ವರ್ತಿಸಬೇಕು ಎಂಬ ಮಾತಿನೊಂದಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಕ್ರೀಡಾಂಗಣ ನಿರ್ಮಾಣ ಗುತ್ತಿಗೆದಾರರಾದ ಪ್ರಜ್ವಲ್ ಕೆ.ಆರ್ ರವರನ್ನು ಸಂಸ್ಥೆ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾಮ ಪಂಚಾಯತ್ ನ ಸದಸ್ಯರುಗಳಾದ ತೀರ್ಥರಾಮ ಕೆಡಂಜಿ, ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ, ಸತೀಶ್ ಅಂಗಡಿ ಮೂಲೆ, ರಜಾಕ್, ರಫೀಕ್, ಸವಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಎ, ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಕೃಷ್ಣಕುಮಾರ್ ರೈ ದೇವಸ್ಯ, ಯುವಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುರೇಶ್ ರೈ ಸೂಡಿ ಮುಳ್ಳು ಸಹಿತ ಹಲವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಪದ್ಮಾವತಿ ಎನ್ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯಗುರು ರಘು ಬಿ.ಆರ್ ವಂದಿಸಿದರು. ಶಾಲಾ ವಿದ್ಯಾರ್ಥಿ ನಾಯಕರುಗಳಾದ ಪ್ರಸನ್ನ ಕುಮಾರ್, ಮಹಮ್ಮದ್ ಉನೈಸ್, ವತ್ಸಲ ಉಪಸ್ಥಿತರಿದ್ದು ಸಹಕರಿಸಿದರು. ತನ್ಮಿತ್ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೌಢಶಾಲಾ ಸಹ ಶಿಕ್ಷಕಿ ರೀನಾ ಎಂ.ಡಿ ಹಾಗೂ ಕಿಶನ್, ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ವರ್ಗ ಹಾಗೂ ಅಧ್ಯಾಪಕ ವೃಂದ ಬೋಧಕೇತರ ಸಿಬ್ಬಂದಿಗಳು ಹಿರಿಯ ವಿದ್ಯಾರ್ಥಿ ಸಂಘ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.