ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಪಾಣಾಜೆ, ಪಾಣಾಜೆ ವಿದ್ಯಾವರ್ಧಕ ಸಂಘ, ಸುಬೋಧ ಪ್ರೌಢಶಾಲೆ ಮತ್ತು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅವರ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ ಪಾಣಾಜೆ ಗ್ರಾಮದ ಆರ್ಲಪದವು ಸುಬೋಧ ಪ್ರೌಢಶಾಲೆಯಲ್ಲಿ ಡಿಸೆಂಬರ್ 31ರಂದು ನಡೆಯಲಿದೆ.
ಗಡಿನಾಡಿನ ಪ್ರದೇಶದಲ್ಲಿ ನಡೆಯುವ ಈ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾಗಿ ಗಡಿನಾಡ ಸಾಹಿತ್ಯ ಸಂಭ್ರಮ 2022 ಎಂಬ ಹೆಸರಿನಲ್ಲಿ ನಡೆಯಲಿದೆ.
ಹವಿಗನ್ನಡದ ಅನನ್ಯ ಸಾಹಿತಿ ಡಾ ಹರಿಕೃಷ್ಣ ಭರಣ್ಯ ಅವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ವೆಂಕಟರಮಣ ಭಟ್, ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ಮತ್ತು ನೋಟರಿ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್ ಭಾಗವಹಿಸಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪಾಣಾಜೆಯ ಸಂಶೋಧನಾ ಲೇಖನಗಳ ಸಂಕಲನವನ್ನು ಪಿಲಿಂಗಲ್ಲು ಕೃಷ್ಣ ಭಟ್ ಹಾಗೂ ಗಡಿನಾಡ ಧ್ವನಿ ಪ್ರಕಾಶನದ ನವರತ್ನಗಳು ಕೃತಿಯನ್ನು ನಾರಾಯಣ ರೈ ಕುಕ್ಕುವಳ್ಳಿ ಬಿಡುಗಡೆ ಮಾಡಲಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ. ಹರಿಕೃಷ್ಣ ಭರಣ್ಯ, ನಾರಾಯಣ ಭಟ್ ಕಾಕೆಕೊಚ್ಚಿ, ಸಾವಿತ್ರಿ ಅಮ್ಮ ನೀರೋಳ್ಯ, ಕಲಾವಿದ ದೀಪಕ್ ರೈ ಪಾಣಾಜೆ ಮತ್ತು ಗಡಿನಾಡ ಕನ್ನಡ ಚಿಂತಕ ಡಾ. ಅಬೂಬಕ್ಕರ್ ಆರ್ಲಪದವು ಅವರಿಗೆ ಸನ್ಮಾನ ನಡೆಯಲಿದ್ದು ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಕಲ್ಲುರಾಯ ಬನದಗದ್ದೆ ಅವರು ಅಭಿನಂದಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪನ್ಯಾಸ,ಬಾಲಕವಿ ಗೋಷ್ಠಿ, ಬಾಲಕಥಾಗೋಷ್ಠಿ, ಯುವಕವಿ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯಕ್ಕೆ ಪಾಣಾಜೆಯ ಕೊಡುಗೆ ಎಂಬ ವಿಚಾರದಲ್ಲಿ ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶಿವಕುಮಾರ್ ಕಾಕೆ ಕೊಚ್ಚಿರವರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರಿನ ಕಾಮತ್ ಆಪ್ಟಿಕಲ್ ಸಂಸ್ಥೆಯಿಂದ ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.