ಪುತ್ತೂರು: ಮನೆಯ ಕಾರ್ಯಕ್ರಮದಲ್ಲಿ ಬಳಸಿದ್ದ ತ್ಯಾಜ್ಯ, ಮದ್ಯದ ಬಾಟಲಿ, ಕೊಳೆತ ಆಹಾರ ಪದಾರ್ಥಗಳನ್ನು ರಸ್ತೆ ಬದಿ ಎಸೆದು ಹೋದವರನ್ನು ಪತ್ತೆ ಮಾಡಿ ಎಸೆದ ತ್ಯಾಜ್ಯವನ್ನು ಅವರ ಮೂಲಕವೇ ಶುಚಿಗೊಳಿಸಿ, ಕಳುಹಿಸಿಕೊಟ್ಟಿರುವ ಘಟನೆ ಡಿ.21ರಂದು ಬಲ್ನಾಡು ಗ್ರಾ.ಪಂ ವ್ಯಾಪ್ತಿಯ ಚನಿಯಮೂಲೆ ಎಂಬಲ್ಲಿ ನಡೆದಿದೆ.
ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಪರಮೇಶ್ವರಿ ಭಟ್ರವರ ಮುತುವರ್ಜಿಯಲ್ಲಿ ಈ ಕಾರ್ಯವು ನಡೆದಿದ್ದು ಸಂಪ್ಯ ಠಾಣಾ ಎಸ್.ಐ ಉದಯ ರವಿಯವರ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಸ್ಥಳಕ್ಕೆ ಕರೆಯಿಸಿ ಶುಚಿಗೊಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಬಳಸಿದ್ದ ಹಾಳೆ ತಟ್ಟೆ, ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು, ಐಸ್ ಕ್ರೀಂ ಕಪ್ ಗಳು, ಒಡೆದ ಗಾಜಿನ ಚೂರುಗಳು, ಪೇಪರ್ ಗ್ಲಾಸ್, ಉಳಿಕೆಯಾದ ಅನ್ನ ಪದಾರ್ಥಗಳನ್ನು ಗೋಣಿಯಲ್ಲಿ ತುಂಬಿಸಿ ತಂದು ಬಲ್ನಾಡು ಪಂಚಾಯತ್ ವ್ಯಾಪ್ತಿಯ ಬಲ್ನಾಡು-ದೇರಾಜೆ ಸಂಪರ್ಕ ರಸ್ತೆಯ ಚನಿಯಮೂಲೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಎರಡು ದಿನಗಳ ಹಿಂದೆ ಎಸೆದುಹೋಗಿದ್ದರು. ಇದನ್ನು ಬೀದಿ ನಾಯಿಗಳು ರಸ್ತೆ ತುಂಬಾ ಹರಡಿದ್ದವು. ಇದರಿಂದಾಗಿ ಪರಿಸರದಲ್ಲಿ ದುರ್ನಾತ ಬೀರುತ್ತಿತ್ತು. ಘಟನೆಯ ಬಗ್ಗೆ ಪಂಚಾಯತ್ ಸದಸ್ಯರ ಮೂಲಕ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಬಲ್ನಾಡು ಪರಿಸರದಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದು, ಅವರು ಕೈಯಲ್ಲಿ ತ್ಯಾಜ್ಯ ಚೀಲ ತರುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಹೀಗಾಗಿ ಅಲ್ಲಿನ ಕಾರ್ಮಿಕರನ್ನು ವಿಚಾರಿಸಿದಾಗ ತಾವೇ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಉತ್ತರ ಕನ್ನಡ ಮೂಲದ ಕಟ್ಟಡ ಗುತ್ತಿಗೆದಾರರಾಗಿರುವ ಸಂಗಮೇಶ್ ಎಂಬವರು ಬನ್ನೂರು ಸಮೀಪ ಹೊಸ ಮನೆ ನಿರ್ಮಿಸಿದ್ದು ಅದರ ಗೃಹ ಪ್ರವೇಶ ಕಾರ್ಯಕ್ರಮ ಕೆಲ ದಿನಗಳ ಹಿಂದೆ ನಡೆದಿದೆ. ಅಲ್ಲಿನ ತ್ಯಾಜ್ಯವನ್ನು ಎಸೆಯುವಂತೆ ನಮ್ಮ ಜೊತೆ ಕಳುಹಿಸಿರುವುದಾಗಿ ಅವರು ಮಾಹಿತಿ ನೀಡಿದ್ದರು.
ಕಾರ್ಮಿಕರ ಮೂಲಕ ಗುತ್ತಿಗೆದಾರರನ್ನು ಸಂಪರ್ಕಿಸಿ ಎಸೆದ ತ್ಯಾಜ್ಯವನ್ನು ಶುಚಿಗೊಳಿಸುವಂತೆ ಸೂಚಿಸಲಾಗಿದೆ. ಡಿ.21ರಂದು ತ್ಯಾಜ್ಯ ಎಸೆದ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿಕೊಂಡು ಅವರ ಮೂಲಕವೇ ಎಸೆದ ತ್ಯಾಜ್ಯ ಗಳನ್ನು ಶುಚಿಗೊಳಿಸಿ ಅವರಲ್ಲಿಯೇ ಹಿಂದಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲದೆ ಸಂಗಮೇಶ್ ಅವರಿಗೆ 3 ಸಾವಿರ ರೂ. ದಂಡ ವಿಧಿಸಲಾಗಿದೆ. ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷ ಪರಮೇಶ್ವರಿ ಭಟ್, ಸದಸ್ಯ ಕೃಷ್ಣಪ್ಪ ನಾಯ್ಕ, ಗ್ರಾ.ಪಂ ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ಸ್ಥಳೀಯರು ಉಪಸ್ಥಿತರಿದ್ದರು. ಸಂಪ್ಯ ಠಾಣಾ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.