ಪಸರಿಸುತ್ತಿದೆ ಚರ್ಮಗಂಟು ರೋಗ ಹೈರಾಣಾದ ಹೈನುಗಾರ

0

ನಾಟಿ ಔಷಧದ ಪರಿಹಾರ ಸೂಚಿಸಿದ ಪಶು ವೈದ್ಯಕೀಯ ಇಲಾಖೆ

ಉಪ್ಪಿನಂಗಡಿ: ಕೆಲವು ತಿಂಗಳ ಹಿಂದೆ ದೂರದಲ್ಲೆಲ್ಲೋ ಕೇಳಿ ಬರುತ್ತಿದ್ದ ಜಾನುವಾರುಗಳ ಚರ್ಮಗಂಟು ರೋಗ ಇದೀಗ ನಮ್ಮ ಪರಿಸರದಲ್ಲೂ ಕಾಣಿಸಿಕೊಂಡಿದೆ. ಇದು ಬಾರದಂತೆ ತಡೆಯಲು ಲಸಿಕಾಸ್ತ್ರಗಳ ಪ್ರಯೋಗಗಳಾಗುತ್ತಿದ್ದರೂ, ರೋಗ ಪಸರಿಸುತ್ತಲೇ ಇವೆ. ಇದರಿಂದ ಹೈನುಗಾರ ಮಾತ್ರ ಹೈರಣಾಗುವಂತಾಗಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಇದಕ್ಕೆ ನಾಟಿ ಔಷಧೀಯ ಪರಿಹಾರವನ್ನು ಸೂಚಿಸಿದ್ದು, ಮನೆಯಲ್ಲಿಯೇ ಇದನ್ನು ಮಾಡಿಕೊಳ್ಳಬಹುದಾಗಿದೆ.

ಪುಳಿತ್ತಡಿ, ನಾಗೋಜಿ, ಹಿರೇಬಂಡಾಡಿಯ ನಾಗನಕೋಡಿ ಸೇರಿದಂತೆ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ 12 ಚರ್ಮಗಂಟು ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಉಪ್ಪಿನಂಗಡಿಯ ನಟ್ಟಿಬೈಲ್, ಆಲಂಕಾರು ಹೀಗೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಈ ಪ್ರಕರಣಗಳು ಪತ್ತೆಯಾಗಿವೆ. ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಈಗಾಗಲೇ 300 ಲಸಿಕೆಗಳನ್ನು ಕೊಡಲಾಗಿದ್ದು, ಚರ್ಮ ಗಂಟು ರೋಗವಿದ್ದ ಜಾನುವಾರುಗಳಲ್ಲಿ ಲಸಿಕೆಯ ಬಳಿಕ ಶೇ.50ರಷ್ಟು ರೋಗ ಕಡಿಮೆಯಾಗಿದೆ. ಈ ವ್ಯಾಪ್ತಿಯಲ್ಲಿ ಈ ರೋಗದಿಂದ ಈವರೆಗೆ ಯಾವುದೇ ಜಾನುವಾರುಗಳ ಸಾವು ಸಂಭವಿಸಿಲ್ಲ ಎನ್ನುತ್ತಾರೆ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕೃತಕ ಗರ್ಭದಾರಕ ಹಾಗೂ ವ್ಯಾಕ್ಸಿನೇಟರ್ ಆಗಿರುವ ಗಣೇಶ್ ಕಿಂಡೋವು ಅವರು.

ನಾಟಿ ಔಷಧ: ಚರ್ಮ ಗಂಟು ರೋಗಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಎರಡು ಸೂತ್ರದಲ್ಲಿ ಬಾಯಿಯ ಮುಖಾಂತರ ನೀಡಬಹುದಾದ ಔಷಧಿಯನ್ನು ಹೇಳಿದ್ದು, ಈ ಔಷಧಿಯನ್ನು ನೀಡಿ ಕನಿಷ್ಟ ಒಂದು ಗಂಟೆಯ ಅಂತರದಲ್ಲಿ ಪರ್ಯಾಯವಾಗಿ ಆಹಾರವನ್ನು ನೀಡಬಹುದಾಗಿದೆ.

ಒಂದನೇ ಸೂತ್ರದ ತಯಾರಿಕೆ: ಒಂದನೇ ಸೂತ್ರದಂತೆ ಔಷಧದ ಪದಾರ್ಥ ಹಾಗೂ ಒಂದು ಸಲದ ಔಷಧಿಗೆ ಬೇಕಾದ ಪ್ರಮಾಣವನ್ನು ಈ ರೀತಿ ಪಟ್ಟಿ ಮಾಡಿದೆ. ವೀಳ್ಯದ ಎಲೆ- 10, ಕರಿಮೆಣಸು- 10ಗ್ರಾಂ, ಉಪ್ಪು- 10ಗ್ರಾಂ, ಅಗತ್ಯವಿದ್ದಷ್ಟು ಬೆಲ್ಲ. ಈ ಎಲ್ಲಾ ಪದಾರ್ಥಗಳನ್ನು ಬೆರೆಸಿ, ಅದಕ್ಕೆ ಅಗತ್ಯವಿದ್ದಷ್ಟು ಬೆಲ್ಲ ಹಾಕಿ ಪೇಸ್ಟ್ ತಯಾರಿಸಬೇಕು. ಅವನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ತಿನ್ನಿಸಬೇಕು. ಮೊದಲ ದಿನ ಮೂರು ಗಂಟೆಗಳಿಗೊಮ್ಮೆ ಒಂದು ಡೋಸ್ ನೀಡಬೇಕು. ಎರಡನೇ ದಿನದಿಂದ ಎರಡು ವಾರಗಳವರೆಗೆ ಪ್ರತಿದಿನ ಮೂರು ಡೋಸ್ ನೀಡಬೇಕು ಹಾಗೂ ಪ್ರತಿ ಡೋಸ್ ಅನ್ನು ತಿನ್ನಿಸುವ ಮೊದಲು ಔಷಧಿಯನ್ನು ಹೊಸದಾಗಿ ತಯಾರಿಸಬೇಕು ಎಂದು ತಿಳಿಸಿದೆ.

ಇಲ್ಲಿ ಬೇಕಾದ ಪದಾರ್ಥಗಳು ಹಾಗೂ ಎರಡು ಸಲದ ಔಷಧಿಗೆ ಬೇಕಾದ ಪ್ರಮಾಣವನ್ನು ಈ ರೀತಿ ಪಟ್ಟಿ ಮಾಡಲಾಗಿದೆ. ಬೆಳ್ಳುಳ್ಳಿ ಎರಡು ಎಸಳು, ಕೊತ್ತಂಬರಿ 10ಗ್ರಾಂ, ಜೀರಿಗೆ 10ಗ್ರಾಂ, ತುಳಸಿ ಒಂದು ಕೈಹಿಡಿ, ದಾಲ್ಚಿನಿ ಎಲೆಗಳು 10ಗ್ರಾಂ., ಕರಿಮೆಣಸು 10ಗ್ರಾಂ, ವೀಳ್ಯದ ಎಲೆ 5ಎಲೆಗಳು, ಸಣ್ಣ ಈರುಳ್ಳಿ ಒಂದು, ಅರಶಿನಪುಡಿ 10 ಗ್ರಾಂ, ಕಿರಾತ (ನೀಲಬೇವು) ಎಲೆಯ ಪುಡಿ 30ಗ್ರಾಂ, ಕಾಮಕಸ್ತೂರಿ ಒಂದು ಕೈಹಿಡಿ, ಬೇವಿನ ಎಲೆಗಳು ಒಂದು ಕೈಹಿಡಿ, ಬಿಲ್ವಪತ್ರೆ ಒಂದು ಕೈಹಿಡಿ, ಬೆಲ್ಲ 100 ಗ್ರಾಂ. ಈ ಎಲ್ಲಾ ಪದಾರ್ಥಗಳನ್ನು ಬೆರೆಸಿ, ಅದಕ್ಕೆ ಅಗತ್ಯವಿದ್ದಷ್ಟು ಬೆಲ್ಲ ಹಾಕಿ ಪೇಸ್ಟ್ ತಯಾರಿಸಿ, ಸಣ್ಣ ಪ್ರಮಾಣದಲ್ಲಿ ತಿನ್ನಿಸಬೇಕು. ಮೊದಲ ದಿನ ಪ್ರತಿ ಮೂರು ಗಂಟೆಗಳಿಗೊಮ್ಮೆ ಒಂದು ಡೋಸ್ ನೀಡಬೇಕು. ಎರಡನೇ ದಿನದಿಂದ ಪರಿಸ್ಥಿತಿ ಸುಧಾರಣೆಯಾಗುವವರೆಗೆ ಬೆಳಗ್ಗೆ ಒಂದು ಹಾಗೂ ಸಂಜೆ ಒಂದರಂತೆ ಪ್ರತಿದಿನ ಎರಡು ಡೋಸ್‌ಗಳನ್ನು ನೀಡಬೇಕು. ಇಲ್ಲಿ ಕೂಡಾ ಪ್ರತಿದಿನ ಔಷಧಿಯನ್ನು ಹೊಸದಾಗಿ ತಯಾರಿಸಬೇಕು ಎಂದು ತಿಳಿಸಿದೆ.

ಗಾಯಕ್ಕೆ ಲೇಪ: ಗಾಯವಿದ್ದಲ್ಲಿ ಲೇಪನೆ ಮಾಡಲು ಕೂಡಾ ನಾಟಿ ಔಷಧಿಯನ್ನು ತಿಳಿಸಿದ್ದು, ಇದಕ್ಕೆ ಬೇಕಾದ ಪದಾರ್ಥಗಳನ್ನು ಈ ರೀತಿ ಪಟ್ಟಿಮಾಡಿದೆ. ಅವುಗಳೆನೇಂದರೆ ಕುಪ್ಪಿ ಗಿಡದ ಎಲೆಗಳು ಒಂದು ಕೈಹಿಡಿ, ಬೆಳ್ಳುಳ್ಳಿ 10 ಎಸಲು, ಬೇವಿನ ಎಲೆಗಳು ಒಂದು ಕೈಹಿಡಿ, ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ 500 ಮಿ.ಲೀ., ಅರಶಿನ ಪುಡಿ 20ಗ್ರಾಂ, ಮೆಹಂದಿ (ಗೋರಂಟಿ) ಎಲೆಗಳು ಒಂದು ಕೈ ಹಿಡಿ, ತುಳಸಿ ಒಂದು ಕೈಹಿಡಿ, ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯೊಂದಿಗೆ ಕುದಿಸಿ ತಣ್ಣಗಾಗಿಸಿಕೊಳ್ಳಬೇಕು. ಜಾನುವಾರುಗಳ ದೇಹದ ಮೇಲಿನ ಗಾಯಗಳನ್ನು ಸ್ವಚ್ಛಗೊಳಿಸಿ ಈ ಔಷಧಿಯನ್ನು ಲೇಪಿಸಬೇಕು. ಒಂದು ವೇಳೆ ಗಾಯದೊಳಗೆ ಮರಿಹುಳು (ನೊಣದ ಹುಳು)ಗಳಿದ್ದಲ್ಲಿ ಉಪಚಾರದ ಮೊದಲ ದಿನ ಮಾತ್ರ ಸೀತಾಫಲದ ಎಲೆಗಳಿಂದ ಮಾಡಿದ ಪೇಸ್ಟ್ ಅಥವಾ ಕರ್ಪೂರ ಬೆರೆಸಿದ ತೆಂಗಿನ ಎಣ್ಣೆಯನ್ನು ಲೇಪಿಸಬೇಕು ಎಂದು ತಿಳಿಸಿದ್ದು, ಈ ಔಷಧಿಯ ಬಗ್ಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕೃತವಾಗಿ ಪ್ರಕಟನೆ ನೀಡಿದೆ.

ಚರ್ಮಗಂಟು ರೋಗವೆನ್ನುವುದು ಹೆಚ್ಚಾಗಿ ಲಂಪಿಸ್ಕಿನ್ ಎಂಬ ಸೊಳ್ಳೆಗಳಿಂದ ಹರಡುತ್ತಿದ್ದು, ಮುಖ್ಯವಾಗಿ ಕೊಟ್ಟಿಯನ್ನು ಹಾಗೂ ಜಾನುವಾರುಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ರೋಗ ಉಲ್ಭಣಗೊಂಡಲ್ಲಿ ಜಾನುವಾರುಗಳ ಸಾವು ಸಂಭವಿಸುವ ಅಪಾಯವಿದೆ. ಆದ್ದರಿಂದ ಹೈನುಗಾರರು ರೋಗ ಬಂದ ಬಳಿಕ ಕಷ್ಟಪಡುವುದಕ್ಕಿಂತ ರೋಗನಿರೋಧಕ ಲಸಿಕೆ ನೀಡುವುದೋ, ನಾಟಿ ಔಷಧಿಯನ್ನು ತಿನ್ನಿಸುವುದೋ ಮಾಡಿ ಈ ರೋಗ ಬಾರದಂತೆ ತಡೆಯುವುದು ಸೂಕ್ತವಾಗಿದೆ.

ಚರ್ಮಗಂಟು ರೋಗ ಈ ಭಾಗದಲ್ಲೂ ಈಗ ಪತ್ತೆಯಾಗುತ್ತಿದೆ. ಇದು ಬಾರದಂತೆ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಈವರೆಗೆ ಒಟ್ಟು ಉಪ್ಪಿನಂಗಡಿ ಪಶು ಆಸ್ಪತ್ರೆಯ ವ್ಯಾಪ್ತಿಯಲ್ಲಿ ಶೇ.60 ರಷ್ಟು ಲಸಿಕೆಯನ್ನು ನೀಡಲಾಗಿದೆ.

– ಡಾ. ಪ್ರಕಾಶ್,
ಮುಖ್ಯ ಪಶುವೈದ್ಯಾಧಿಕಾರಿ (ಪ್ರಭಾರ) ಪಶು ಆಸ್ಪತ್ರೆ ಉಪ್ಪಿನಂಗಡಿ

LEAVE A REPLY

Please enter your comment!
Please enter your name here