ವಿಟ್ಲ : ಅಡಿಕೆ ತಳಿಗಳು, ಅಡಿಕೆಯಲ್ಲಿ ಕೀಟ, ರೋಗಗಳ ಸಮಗ್ರ ನಿರ್ವಹಣೆ ತರಬೇತಿ

0

ವಿಟ್ಲ: ರೈತರು ಶ್ರಮ ಪಡುವುದು ಕಡಿಮೆಯಾಗುತ್ತಿದೆ. ರೈತರಿಗೆ ರಕ್ಷಣೆ ಸಿಗಬೇಕಾಗಿದೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕಾಗಿದೆ. ಹಕ್ಕೊತ್ತಾಯ ಮಾಡುವ ರೀತಿಯಲ್ಲಿ ರೈತರು ಸಂಘಟಿತರಾಗಬೇಕಾಗಿದೆ. ಪೇಟೆಯ ಜೀವನದ ಕಡೆಗೆ ಯುವ ಪೀಳಿಗೆ ಹೋಗುವುದರಿಂದ ಕೃಷಿಗೆ ಹಿನ್ನಡೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ಹೇಳಿದರು.


ಅವರು ಡಿ.23ರಂದು ವಿಟ್ಲ ಭಾ.ಕೃ.ಸಂ.ಪ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ರೈತ ಸಂಘ ದ. ಕ. ಜಿಲ್ಲೆಯ ವತಿಯಿಂದ ಅಡಿಕೆ ತಳಿಗಳು ಮತ್ತು ಅಡಿಕೆಯಲ್ಲಿ ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಿಟ್ಲ ಭಾ.ಕೃ.ಸಂ.ಪ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥೆ ಎಸ್. ಎಲೈನ್ ಅಪ್ಸರ ಮಾತನಾಡಿ ಅಡಿಕೆಯ ಜತೆಗೆ ಮಿಶ್ರ ಬೆಳೆಯನ್ನು ಬೆಳೆಯುವ ಅಗತ್ಯವಿದೆ. ನಾವು ನಮಗೆ ಬೇಕಾದ ವಸ್ತುಗಳನ್ನು ನಮ್ಮಲ್ಲೇ ಬೆಳೆಯುವ ಅಗತ್ಯವಿದೆ. ಕೃಷಿಕರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡಲು ಸದಾ ಸಿ.ಪಿ.ಸಿ.ಆರ್.ಐ. ಸಿದ್ದವಿದೆ. ಅಡಿಕೆ ಮತ್ತು ಕೊಕ್ಕೊ ಬೆಳೆಯ ಬಗ್ಗೆ ನಿರಂತರ ಸಂಶೋಧನೆಯಾಗುತ್ತಿದೆ ಎಂದರು. ವಿಜ್ಜಾನಿ ಡಾ. ನಾಗರಾಜ್, ರೋಗ ತಜ್ಞೆ ಡಾ. ಚೈತ್ರಾ, ಅಡಿಕೆ ಬೆಳೆಯ ಸಮಗ್ರ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಗತಿಪರ ಕೃಷಿಕರ ಅನಿಸಿಕೆ, ಬೋರ್ಡೋ ದ್ರಾವಣ ತಯಾರಿಕಾ ಪ್ರಾತ್ಯಕ್ಷಿಕೆ, ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ರೈತ ಸಂಘದ ರೂಪೇಶ್ ರೈ ಆಲಿಮಾರ್ ಉಪಸ್ಥಿತರಿದ್ದರು. ವಿಜ್ಞಾನಿ ಡಾ. ನಾಗರಾಜ ಎನ್. ಆರ್.ಸ್ವಾಗತಿಸಿದರು. ಗೀತಾ ಶೆಟ್ಟಿ ವಂದಿಸಿ, ತನುಜಾ ಜಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here