ನವಜೀವನ ಸದಸ್ಯರ,ಒಕ್ಕೂಟಗಳ ಸಾಧನಾ ಸಮಾವೇಶ,ವಿವಿಧ ಸೌಲಭ್ಯಗಳ ಹಸ್ತಾಂತರ
ಯೋಜನೆ ಮೂಲಕ ಗ್ರಾಮಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ-ಡಾ| ಎಲ್.ಎಚ್.ಮಂಜುನಾಥ್
ಸ್ವಸಹಾಯ ಸಂಘಗಳಿಂದ ಮಹಿಳೆಯರು ಅಭಿವೃದ್ಧಿಶೀಲರಾಗಿದ್ದಾರೆ-ಗಿರೀಶ್‌ನಂದನ್
ಭಾರತಕ್ಕೇ ಯೋಜನೆ ಪಸರಿಸುತ್ತಿದೆ-ಮಹಾಬಲ ರೈ ವಳತ್ತಡ್ಕ
ಕೇಂದ್ರ, ರಾಜ್ಯದ ೬೦೦ ಯೋಜನೆಗಳು ಕಾರ್ಯರೂಪಕ್ಕೆ -ಜೀವಂಧರ್ ಜೈನ್
ಸ್ವಸಹಾಯ ಸಂಘವೇ ಮಿನಿ ಸರಕಾರವಾಗಿ ಕಾರ್ಯನಿರ್ವಹಿಸುತ್ತಿದೆ-ಶಕುಂತಳಾ ಶೆಟ್ಟಿ
ಸ್ವಸಹಾಯ ಸಂಘದ ಸದಸ್ಯರಿಗೆ ವಿಶೇಷ ಗೌರವ-ಸಾಜ ರಾಧಾಕೃಷ್ಣ ಆಳ್ವ
ಪುತ್ತೂರು: ಗ್ರಾಮಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆ ಒದಗಿಸುವುದು,ಡಿಜಿಟಲ್ ವರ್ಗಾವಣೆಗೆ ಆದ್ಯತೆ ನೀಡುತ್ತಿದ್ದು ರಾಜ್ಯ ವ್ಯಾಪಿಯಲ್ಲಿ ಕೆಲಸ ಕಾರ್ಯ ನಡೆಯುತ್ತಿದೆ.ಪುತ್ತೂರಿನಲ್ಲಿ ಶೇ.೮೦ರಷ್ಟು ಬೆರಳಚ್ಚು ಕಾರ್ಯ ಪ್ರಗತಿಯಲ್ಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಕಾರ್ಯನಿರ್ವಹಣಾಧಿಕಾರಿ ಡಾ|ಎಲ್.ಎಚ್.ಮಂಜುನಾಥ್ ಅವರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್,ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪುತ್ತೂರು ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪುತ್ತೂರು ಮತ್ತು ಕಡಬ ತಾಲೂಕು ಇದರ ವತಿಯಿಂದ ಡಿ.೨೩ರಂದು ಕೊಂಬೆಟ್ಟು ಎಮ್ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ಕೇಂದ್ರ ಒಕ್ಕೂಟ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಒಕ್ಕೂಟಗಳ ಸಾಧನಾ ಸಮಾವೇಶ ಕಾರ್ಯಕ್ರಮ ಹಾಗೂ ವಿವಿಧ ಅನುದಾನದ ಸೌಲಭ್ಯಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರಕಾರದ ಕಾರ್ಯಕ್ರಮಗಳನ್ನು ಪಡೆಯಲು ಜನರಲ್ಲಿ ಶಿಸ್ತು ಬೇಕಾಗುತ್ತದೆ.ಇದನ್ನು ನಮ್ಮ ಸ್ವಸಹಾಯ ಸಂಘ ಚಳುವಳಿ ಮಾಡಿದೆ.ಶಿಸ್ತನ್ನು ಜೀವನದ ಒಂದು ಭಾಗವಾಗಿ ಬೆಳೆಸಿದೆ. ಹೃತ್ಪೂರ್ವಕ ಶಿಸ್ತು, ನಿರಂತರ ಚಟುವಟಿಕೆ, ಪಾರದರ್ಶಕತೆ, ಜವಾಬ್ದಾರಿ ಎಂಬ ೪ ತತ್ವಗಳು ನಮ್ಮ ಸ್ವಸಹಾಯ ಸಂಘ ಚಳುವಳಿಯ ಯಶಸ್ವಿಗೆ ಕಾರಣ ಎಂದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೇರೂರಿದ್ದು, ೪,೫೦,೦೦೦ ಸ್ವಸಹಾಯ ಸಂಘಗಳು ಕೆಲಸ ಮಾಡುತ್ತಿವೆ.ಭವಿಷ್ಯದಲ್ಲಿ ಇತರ ರಾಜ್ಯಗಳಿಗೆ ವಿಸ್ತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.ಹರ್‍ಯಾಣ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಲ್ಲಿನ ಸಂಘಟನೆಗಳ ಜತೆ ಸೇರಿಕೊಂಡು ಗ್ರಾಮಾಭಿವೃದ್ಧಿ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.ಗ್ರಾಮಗಳು ಸ್ವಾವಲಂಬಿ ಆಗಬೇಕೆಂಬ ನಿಟ್ಟಿನಲ್ಲಿ ನೇರವಾಗಿ ಕೇಂದ್ರದಿಂದ ಸಂಘದ ಸದಸ್ಯರಿಗೆ ಸಾಲ ನೀಡುವ ಯೋಜನೆ ಇದೆ.ಇದಕ್ಕಾಗಿ ಗ್ರಾಮದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗುವುದು.ಇದು ಪೂರ್ಣಗೊಂಡರೆ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಕೆಲಸ ಸಾರ್ಥಕವಾಗುತ್ತದೆ.ಮುಂದೆ ೨೦೨೨-೨೩ರಲ್ಲಿ ಡಿಜಿಟಲ್ ಸೇವಾ ವರ್ಷವಾಗುತ್ತದೆ ಎಂದರು.
೧,೫೦೦ ಕೋಟಿ ಸಾಲ ವಿತರಣೆ:
೨೦೦೨ರಲ್ಲಿ ಪುತ್ತೂರು ತಾಲೂಕಿಗೆ ಕಾಲಿಟ್ಟ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ೨೦ ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದೆ.ಇವತ್ತು ಪುತ್ತೂರು ಜಿಲ್ಲೆ ಆಗುವ ಮೊದಲೇ ಪುತ್ತೂರಿನಲ್ಲೇ ಯೋಜನೆಯ ಜಿಲ್ಲಾ ಕಚೇರಿ ಸ್ಥಾಪನೆಯಾಗಿದೆ.ಪುತ್ತೂರು,ಕಡಬ ತಾಲೂಕುಗಳೆರಡರಲ್ಲಿ ೧೬೪ ಒಕ್ಕೂಟಗಳಿದ್ದು, ಕಳೆದ ೨೦ ವರ್ಷದಲ್ಲಿ ೧೫೦೦ ಕೋಟಿ ರೂ.ಸಾಲ ವಿತರಿಸಲಾಗಿದೆ ಎಂದು ಡಾ|ಎಲ್.ಎಚ್.ಮಂಜುನಾಥ್ ಹೇಳಿದರು.
ಸ್ವಸಹಾಯ ಸಂಘಗಳಿಂದ ಗ್ರಾಮೀಣ ಭಾಗ ಆರ್ಥಿಕವಾಗಿ ಬೆಳೆದಿದೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರು ಮಾತನಾಡಿ, ಹಳ್ಳಿಗಳಲ್ಲಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಅಭಿವೃದ್ಧಿಶೀಲರಾಗಿದ್ದಾರೆ. ಅವರಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಸ್ವಸಹಾಯ ಸಂಘ ಮಾಡಿಕೊಟ್ಟಿದೆ.ಅದರ ಮೂಲಕ ಗ್ರಾಮೀಣ ಭಾಗ ಬಹಳಷ್ಟು ಆರ್ಥಿಕವಾಗಿ ಬೆಳೆದಿದೆ.ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಂಘದ ಮೂಲಕ ಪಡೆಯಬಹುದು.ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣವೇ ಇದರ ಮುಖ್ಯ ಉದ್ದೆಶ ಎಂದರು.
ಭಾರತಕ್ಕೇ ಯೋಜನೆ ಪಸರಿಸುತ್ತಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಅವರು ಮಾತನಾಡಿ ಆರಂಭದಲ್ಲಿ ನಾನು ಸೇವಾ ಮನೋಭಾವನೆಯಿಂದ ಮಾಡಿದ ಸೇವೆಯಿಂದಾಗಿ ಇವತ್ತು ಯೋಜನೆಯು ನನಗೆ ಉತ್ತಮ ಅವಕಾಶ ನೀಡಿದೆ.ಯೋಜನೆಯ ಮೂಲಕ ಮನೆ ನಿರ್ಮಾಣದ ಗುತ್ತಿಗೆಯಲ್ಲಿ ೮ ತಿಂಗಳೊಳಗೆ ೨೫೦ ಮನೆಗಳನ್ನು ನಿರ್ಮಿಸಿ ಯೋಜನೆಯ ಪ್ರಶಂಸೆಗೆ ಪಾತ್ರನಾಗಿದ್ದೆ.ಇವತ್ತು ಯೋಜನೆಯು ಕೇವಲ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಕ್ಕೂ ಕಾಲಿಟ್ಟು ಇಡೀ ಭಾರತವನ್ನೇ ಪಸರಿಸುತ್ತಿದೆ ಎಂದರು.
ಕೇಂದ್ರ, ರಾಜ್ಯದ ೬೦೦ ಯೋಜನೆಗಳು ಕಾರ್ಯರೂಪಕ್ಕೆ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ, ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ರೂ.೧೮ ಕೋಟಿ ಖರ್ಚು ಮಾಡುತ್ತಿದೆ.ಇಂತಹ ಸಂದರ್ಭದಲ್ಲಿ ಸರಕಾರದ ಸುಮಾರು ೬೦೦ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ೬೩ ಕೇಂದ್ರಗಳು ಸ್ವಸಹಾಯ ಸಂಘದ ಮೂಲಕ ನಡೆಯುತ್ತಿದೆ.ಬಡಜನರ ಕಲ್ಯಾಣವೇ ಇದರ ಮುಖ್ಯ ಉದ್ದೆಶ.ಹಾಗಾಗಿ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಡಾ|ವೀರೇಂದ್ರ ಹೆಗ್ಗಡೆಯವರು ನನಸು ಮಾಡುತ್ತಿದ್ದಾರೆ ಎಂದರು.
ಸ್ವಸಹಾಯ ಸಂಘವೇ ಮಿನಿ ಸರಕಾರವಾಗಿದೆ:
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಸರಕಾರ ಮಾಡಲು ಆಗದ ಕೆಲಸವನ್ನು ಎಲ್ಲಾ ಜನರಿಗೆ ಮುಟ್ಟಿಸುವ ಸಾಧನೆಯನ್ನು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಡಾ| ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ.ಸ್ವಸಹಾಯ ಸಂಘವೇ ಒಂದು ಮಿನಿ ಸರಕಾರವಾಗಿ ಕಾರ್ಯರೂಪಗೊಂಡಿದೆ ಎಂದರು.
ಸ್ವಸಹಾಯ ಸಂಘದ ಸದಸ್ಯರಿಗೆ ವಿಶೇಷ ಗೌರವ:
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ನೀಡಿದಾಗ ಮಹತ್ತರ ಬದಲಾವಣೆಗಳು ಆಗಲು ಸಾಧ್ಯವಾಯಿತು.ಇದಕ್ಕೆ ಗ್ರಾಮಾಭಿವೃದ್ದಿಯ ಚಳುವಳಿಯೇ ಕಾರಣ.ಯೋಜನೆಯ ಶಿಸ್ತು,ಅತ್ಯುತ್ತಮ ವ್ಯವಸ್ಥೆ, ನಡವಳಿಕೆಯಿಂದ ಸದಸ್ಯರ ಮೇಲೆ ವಿಶೇಷವಾದ ಗೌರವ ಇದೆ ಎಂದರು.ಪ್ರಗತಿಬಂಧು-ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಪುತ್ತೂರು, ಕಡಬ ತಾಲೂಕು ನಿರ್ಗಮಿತ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಪ್ರಗತಿಬಂಧು-ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಪುತ್ತೂರು ತಾಲೂಕು ಅಧ್ಯಕ್ಷ ಉದಯ ಕುಮಾರ್ ಮತ್ತು ಕಡಬ ತಾಲೂಕು ಅಧ್ಯಕ್ಷ ಸಂತೋಷ್ ಮುಂದಿನ ಮೂರು ವರ್ಷದಲ್ಲಿ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.
ರೂ. ೭.೫೨ ಕೋಟಿ ಲಾಭಾಂಶ ಸದಸ್ಯರಿಗೆ ವಿತರಣೆ:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರಿನಲ್ಲಿ ೯, ಕಡಬದಲ್ಲಿ ೬ ವಲಯಗಳಿದ್ದು ಒಟ್ಟು ೧೫೦ ಸೇವಾ ಪ್ರತಿನಿಧಿ ಕ್ಷೇತ್ರಗಳು, ೯೪ ಗ್ರಾಹಕ ಸೇವಾ ಕೇಂದ್ರಗಳು ಕೆಲಸ ಮಾಡುತ್ತಿವೆ.೨ ತಾಲೂಕುಗಳಲ್ಲಿ ೩೦೪೫ ಪ್ರಗತಿಬಂಧು ಸಂಘಗಳು, ೧೭೮೬ ಸ್ವಸಹಾಯ ಸಂಘಗಳು ಸೇರಿ ಒಟ್ಟು ೪೮೩೧ ಸಂಘಗಳಿದ್ದು, ೩೪೭೫೩ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ೨೦೨೨-೨೩ನೇ ಸಾಲಿನಲ್ಲಿ ೯೮.೬೦ ಕೋಟಿ ಪ್ರಗತಿನಿಧಿ ಸಾಲ ಸದಸ್ಯರಿಗೆ ನೀಡಲಾಗಿದೆ.ರೂ.೧೮೫.೬೦ ಕೋಟಿ ಹೊರಬಾಕಿ ಸಾಲವಿದೆ.ಸದಸ್ಯರು ಇದುವರೆಗೆ ೨.೬೦ ಕೋಟಿ ಉಳಿತಾಯ ಮಾಡಿದ್ದಾರೆ.ಈ ವರ್ಷ ೩೪೮೨ ಪ್ರಗತಿ ಬಂಧು ಸಂಘದಲ್ಲಿ ೭.೫೨ ಕೋಟಿ ಲಾಭಾಂಶ ಸದಸ್ಯರಿಗೆ ವಿತರಿಸಲಾಗಿದೆ.ಪ್ರಗತಿ ನಿಧಿ ವಿತರಣೆ, ಚಾಲ್ತಿ ಸಾಲ, ಉಳಿತಾಯ, ಲಾಭಾಂಶ ವಿತರಣೆ, ಸುರಕ್ಷಾ ಕಾರ್ಯಕ್ರಮ, ಮಾಸಾಶನ, ಅನುದಾನ, ಸಹಾಯಧನ, ಸಮುದಾಯ ಅಭಿವೃದ್ಧಿ, ಸುಜ್ಞಾನ ನಿಧಿ ಸಹಿತ ಹಲವು ಯೋಜನೆಯ ಸಾಧನೆಗಳ ವರದಿಯನ್ನು ತಾಲೂಕು ಯೋಜನಾಧಿಕಾರಿ ಆನಂದ್ ಮಂಡಿಸಿದರು.
ಒಕ್ಕೂಟದ ಪದಗ್ರಹಣ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು, ಕಡಬ ಕೇಂದ್ರ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ಅವರು ಪುತ್ತೂರು ತಾಲೂಕು ನೂತನ ಅಧ್ಯಕ್ಷ ಉದಯ ಕುಮಾರ್ ಮತ್ತು ಕಡಬ ತಾಲೂಕು ಅಧ್ಯಕ್ಷ ಸಂತೋಷ್ ಬಿಳಿನೆಲೆ ಹಾಗು ವಲಯದ ಅಧ್ಯಕ್ಷರುಗಳಿಗೆ ವೀಳ್ಯ,ಪುಷ್ಪ,ದಾಖಲಾತಿಗಳನ್ನು ನೀಡುವ ಮೂಲಕ ಪದಗ್ರಹಣ ನೆರವೇರಿಸಿದರು.
ವಿವಿಧ ಸೌಲಭ್ಯ ವಿತರಣೆ:
ಶೌರ್ಯ ವಿಪತ್ತು ನಿರ್ವಹಣೆಗೆ ಜೀವರಕ್ಷಕ, ನಿರ್ಗತಿಕರಿಗೆ ಮಾಸಾಶನ, ಜನಮಂಗಲ ಕಾರ್ಯಕ್ರಮದಲ್ಲಿ ವೀಲ್‌ಚಯರ್, ಸಹಾಯಧನ, ಸಮುದಾಯ ಅಭಿವೃದ್ದಿ, ಸುಜ್ಞಾನ ನಿಧಿ ಶಿಷ್ಯ ವೇತನ, ಇ-ಶ್ರಮ್ ಕಾರ್ಡ್, ವಿಮಾ ಬಾಂಡ್, ಹೈನುಗಾರಿಕೆಯವರಿಗೆ ಸೌಲಭ್ಯ ವಿತರಣೆ ಮಾಡಲಾಯಿತು.ಮದ್ಯವರ್ಜನ ಶಿಬಿರದಲ್ಲಿ ಪಾನಮುಕ್ತರಾದ ೪೨ ಸದಸ್ಯರನ್ನು ಗೌರವಿಸಲಾಯಿತು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ದಂಬೆಕ್ಕಾನ ಸದಾಶಿವ ರೈ, ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಜಿಲ್ಲಾ ನಿರ್ದೇಶಕ ಪ್ರವೀಣ್ ಸ್ವಾಗತಿಸಿದರು.ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಎಂ ವಂದಿಸಿದರು. ಪುತ್ತೂರು ವಲಯದ ಮೇಲ್ವಿಚಾರಕ ಮೋಹನ್, ಕಡಬ ವಲಯ ಮೇಲ್ವಿಚಾರಕ ನವೀನ್ ಕಾರ್ಯಕ್ರಮ ನಿರೂಪಿಸಿದರು