ಪುತ್ತೂರು: 34 ನೆಕ್ಕಿಲಾಡಿ, ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳ ತ್ರಿವೇಣಿ ಸಂಗಮ ಸ್ಥಳವಾದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದ.25 ರಂದು ಅಷ್ಟಬಂಧಕ್ರಿಯೆ ಮತ್ತು ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಧಾರ್ಮಿಕ ಸಭೆಯಲ್ಲಿ ರಾಜಶೇಖರ ಹೆಬ್ಬಾರ್ ಉಪನ್ಯಾಸ ನೀಡುತ್ತಿರುವುದು
ಸುಮಾರು 800 ವರ್ಷಗಳ ಇತಿಹಾಸ ಇರುವ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 2009 ರ ಮೇ ತಿಂಗಳಿನಲ್ಲಿ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆದಿತ್ತು. ಇದೀಗ 13 ವರ್ಷಗಳ ಬಳಿಕ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯುತ್ತಿದೆ.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಹಾವಿಷ್ಣು ದೇವರು, ಗಣಪತಿ ದೇವರು, ಧರ್ಮ ದೈವಗಳಾದ ರಕ್ತೇಶ್ವರಿ, ಮಹಿಷಂದಾಯ, ಪಂಜುರ್ಲಿ, ಗುಳಿಗ ದೈವಗಳ ಗುಡಿ, ನಾಗನಕಟ್ಟೆ ಮತ್ತು ಅಶ್ವತ್ಥಕಟ್ಟೆಯಲ್ಲಿ ದ.20 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ನಿರಂತರವಾಗಿ ಅನ್ನಸಂತರ್ಪಣೆ, ಭಜನಾ ಸೇವೆ, ಸಾಂಸ್ಕೃತಿಕ ಸಂಭ್ರಮ, ಧಾರ್ಮಿಕ ಸಭೆ ನಡೆಯುತ್ತಿದ್ದು ದ.25 ರಂದು ಬೆಳಿಗ್ಗೆ ಗಂಟೆ 5 ರಿಂದ ಮಹಾಗಣಪತಿ ಹವನ, ದಿವಾಗಂಟೆ 10.36 ರಿಂದ 11.20ರವರೆಗೆ ನಡೆಯುವ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ, ನಾಗತಂಬಿಲ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5 ಕ್ಕೆ ಶೃತಿಲಯ ಕ್ಲಾಸಿಕಲ್ಸ್ ಮಡಂತ್ಯಾರ್ ಇವರಿಂದ ವಿದುಷಿ ಶ್ಯಾಮಲಾ ನಾಗರಾಜ್ ಕುಕ್ಕಿಲ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ೭ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9.30ರಿಂದ ಯಕ್ಷನಾಟ್ಯ ಗುರು ಮಾಣಿ ಸತೀಶ್ ಆಚಾರ್ಯ ರಚಿಸಿ ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಯಕ್ಷನಾಟ್ಯ ತರಬೇತಿ ಕೇಂದ್ರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕನ್ನಡ ಯಕ್ಷಗಾನ `ಶ್ರೀ ಮಹಾವಿಷ್ಣು ಸಾನಿಧ್ಯ’ (ಶಾಂತಿನಗರ ಶ್ರೀ ಮಹಾವಿಷ್ಣು ಕ್ಷೇತ್ರ ಮಹಾತ್ಮೆ) ನಡೆಯಲಿದೆ. 2023 ರ ಫೆಬ್ರವರಿ 11ರ ಶನಿವಾರ ಮಧ್ಯಾಹ್ನ ಶ್ರೀ ದೇವರಿಗೆ ದೃಢಕಲಶಾಭಿಷೇಕ ಜರಗಲಿದೆ ಎಂದು ಆಡಳಿತ ಮೊಕ್ತೇಸರ ಯು.ಜಿ. ರಾಧಾ ತಿಳಿಸಿದ್ದಾರೆ.
ಧಾರ್ಮಿಕ ಸಭೆ;
ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ದ.23ರಂದು ರಾತ್ರಿ `ರಾಮ ಜಾನಕಿ’ ವೇದಿಕೆಯಲ್ಲಿ ದೇವಳದ ಹಿರಿಯ ಮೊಕ್ತೇಸರ ಡಾ.ಬಿ.ರಘು ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿಯ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಹೆಬ್ಬಾರ್ ಧಾರ್ಮಿಕ ಉಪನ್ಯಾಸ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣ ಬೋರ್ಕರ್, ಹಿರಿಯರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಮತ್ತು ಉದ್ಯಮಿ ಲಕ್ಷ್ಮಣ ಮಣಿಯಾಣಿ ಮುಂಬಯಿ ಅವರು ಶುಭ ಹಾರೈಸಿದರು. ಉದ್ಯಮಿ ಪುರುಷೋತ್ತಮ ಮುಂಗ್ಲಿಮನೆ, ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಶಿವಾಜಿನಗರ, ಕೋಡಿಂಬಾಡಿ ಗ್ರಾ.ಪಂ. ಸದಸ್ಯ ರಾಮಣ್ಣ ಗೌಡ ಗುಂಡೋಳೆ, ಮೊಕ್ತೇಸರ ರಾಜೀವ ರೈ ಅಲಿಮಾರ, ಬೈಲುವಾರು ಮುಖ್ಯಸ್ಥರಾದ ವಸಂತ ಗೌಡ ಶಾಂತಿನಗರ, ಗಣೇಶ್ ನಾಯಕ್ ದರ್ಬೆ ಮತ್ತು ಬಾಬು ನಾಯ್ಕ್ ಹನಂಗೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಮುಂಭಾಗದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧಾರ್ಮಿಕ ಸಭೆಗೆ ಚಾಲನೆ ನೀಡಲಾಯಿತು. ಶಾಂತಿನಗರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು. ಶೇಖರ ಪೂಜಾರಿ ಜೇಡರಪಾಲು ಸ್ವಾಗತಿಸಿ ಸೇಸಪ್ಪ ಎಸ್. ವಂದಿಸಿದರು. ಕೋರ್ ಕಮಿಟಿ ಸದಸ್ಯೆ ಪ್ರಿಯಾ ರಮೇಶ್ ಗೌಡ ಅತಿಥಿಗಳಿಗೆ ವೀಳ್ಯ ನೀಡಿ ಸ್ವಾಗತಿಸಿದರು. ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮ, ಭಜನಾ ಸೇವೆ, ಅನ್ನಸಂತರ್ಪಣೆ ನಡೆದು ಸಂಜೆ ಶಾಂತಿನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ `ಸಾಂಸ್ಕೃತಿಕ ಸೌರಭ’ ಜರಗಿತು. ಧಾರ್ಮಿಕ ಸಭೆಯ ಬಳಿಕ ತುಳುನಾಡ ಗಾನಗಂಧರ್ವ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ `ಹರಿಕುಣಿದಾ ನಮ್ಮ ಹರಿ ಕುಣಿದಾ ಭಕ್ತಿಗಾನ-ನಿನಾದ’ ನಡೆಯಿತು. ದ.೨೪ರಂದು ವಿವಿಧ ವೈದಿಕ ಕಾರ್ಯಕ್ರಮಗಳು, ಭಜನಾ ಸೇವೆ, ಅನ್ನಸಂತರ್ಪಣೆ ನಡೆದಿದ್ದು ಸಂಜೆ ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ `ಸಾಂಸ್ಕೃತಿಕ ಸಿಂಚನ’ ನಡೆಯಲಿದೆ. ನಂತರ ಧಾರ್ಮಿಕ ಸಭೆ, ಅನ್ನಸಂತರ್ಪಣೆ ನಡೆದು ಮಂಗಳೂರಿನ ಅಂಬುರುಹ ಯಕ್ಷಕಲಾ ಕೇಂದ್ರದವರಿಂದ ಕುಮಾರ್ ಮಾಲೆಮಾರ್ ಸಾರಥ್ಯದಲ್ಲಿ ಮಹಿಮೆದ ಮಂತ್ರದೇವತೆ ಖ್ಯಾತಿಯ ವಿಜಿತ್ ಶೆಟ್ಟಿ ಅಕಾಶ್‌ಭವನ ರಚಿಸಿ ನಿರ್ದೇಶಿಸಿರುವ `ಮಹಿಮೆದ ಬಬ್ಬುಸ್ವಾಮಿ’ ತುಳು ಯಕ್ಷಗಾನ ನಡೆಯಲಿದೆ.