ಸವಣೂರು ವಿದ್ಯಾರಶ್ಮಿ ಸಂಸ್ಥೆಯ ವಾರ್ಷಿಕೋತ್ಸವ ” ಸಂಭ್ರಮ ರಶ್ಮಿ”

0

ವಿದ್ಯಾರಶ್ಮಿ ವಿದ್ಯಾಲಯದಿಂದ ಅತ್ಯುತ್ತಮ ಶಿಕ್ಷಣ ಸೇವೆ- ಡಾ.ಕುಮಾರ್

ಚಿತ್ರ ಕೃಷ್ಣ ಪುತ್ತೂರು

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಅತ್ಯುತ್ತಮವಾದ ಶಿಕ್ಷಣ ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದು,. ಸವಣೂರು ಸೀತಾರಾಮ ರೈರವರು ನೈತಿಕ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಮೂಲಕ ಸುಭದ್ರ ಹಾಗೂ ಸಮಗ್ರ ಸಮಾಜಕ್ಕಾಗಿ ಸವಣೂರಿನಂಥ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವುದು ಸಮಾಜಕ್ಕೆ ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ ಎಂದು ಜಿ.ಪಂ, ಕಾರ್‍ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.


ಅವರು ದ. 23 ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ” ಸಂಭ್ರಮ ರಶ್ಮಿ” ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನವಾಗಿದ್ದು, ಅನ್ನ ದಾನ ನೀಡಿದರೆ ಒಮ್ಮೆ ಹಸಿವು ನೀಗಬಹುದು, ಅದರೆ ವಿದ್ಯಾದಾನವನ್ನು ನೀಡಿದರೆ ಅವರಿಗೆ ಜೀವನ ಪೂರ್ತಿ ನೆಮ್ಮದಿಯ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು ನಮ್ಮ ಮಕ್ಕಳಿಗೆ ನಾವೇ ರೋಲ್ ಮಾಡೆಲ್ ಆಗಬೇಕು, ಬೇರೆಯವರನ್ನು ಅನುಕರಣೆ ಮಾಡಬಾರದು, ಪೋಷಕರೇ ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡು, ಬದುಕು ಸಾಗಿಸಿದರೆ, ನಾವೇ ಮಕ್ಕಳಿಗೆ ರೊಡ್ ಮಾಡೆಲ್ ಆಗುತ್ತೇವೆ. ಮನೆಯಲ್ಲಿ  ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು  ಎಂದವರು ಹೇಳಿದರು. 500 ಕಿ.ಮೀ ದೂರದಲ್ಲಿ ಇರುವ ಸ್ನೇಹಿತರ ಜೊತೆ ಚಾಟಿಂಗ್, ಮೇಸೆಜ್ ಮಾಡುವ ಮಕ್ಕಳು ನಮ್ಮ ಮನೆಯಲ್ಲಿ ಇರುವ ಸಂಬಂಧಕರ ಜೊತೆ ಮಾತನಾಡಲು ಮನಸ್ಸು ಮಾಡುತ್ತಿಲ್ಲ. ಇದನ್ನು ಹೋಗಲಾಡಿಸಲು ಮನೆಯೇ ಸಂಸ್ಕಾರಯುತ ಕೇಂದ್ರವಾಗಬೇಕು ಎಂದು ಹೇಳಿದರು.

ನಮ್ಮ ಮಕ್ಕಳಿಗೆ ವರ್ಷ ಪೂರ್ತಿ ಪಾಠ ಮಾಡುವ ಶಿಕ್ಷಕರು, ವಾರ್ಷಿಕ ಪರೀಕ್ಷೆಯನ್ನು ನಡೆಸುವ ಹಾಲ್‌ನಲ್ಲಿ ಸಿಸಿಟಿವಿಯನ್ನು ಅಳವಡಿಸುವುದು ಖೇದಕರ ವಿಚಾರವಾಗಿದೆ,  ಸಮಾಜದ ಒಳಿತಿಗಾಗಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಸವಣೂರು ಸೀತಾರಾಮ ರೈರವರ ಪ್ರಯತ್ನವನ್ನು ಮುಕ್ತ ಕಂಠದಿಂದ ಡಾ. ಕುಮಾರ್ ಶ್ಲಾಘಿಸಿದರು.


ಸಮಾಜ ಮೆಚ್ಚುವ ಕೆಲಸ- ಡಾ.ವೀರಯ್ಯ ಹಿರೇಮಠ್
ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಡಾ.ವೀರಯ್ಯ ಹಿರೇಮಠ್‌ರವರು ಮಾತನಾಡಿ ಸವಣೂರಿನಲ್ಲಿ ಉನ್ನತವಾದ ಸಂಸ್ಥೆಯನ್ನು ಸ್ಥಾಪಿಸಿರುವ ಸವಣೂರು ಸೀತಾರಾಮ ರೈಯವರ ಕಾರ್‍ಯ ಸಮಾಜ ಮೆಚ್ಚುವ ಕೆಲಸವಾಗಿದ್ದು, ವಿದ್ಯಾರಶ್ಮಿ ಸಂಸ್ಥೆಯಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಭೋದಿಸುವ ಶ್ರೇಷ್ಠ ಕೆಲಸವನ್ನು ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಸಂತಸದ ವಿಚಾರ- ಚಂದ್ರಶೇಖರ್ ಪೇರಾಲು
ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲುರವರು ಮಾತನಾಡಿ ಮಕ್ಕಳಿಗೆ ಚೆನ್ನಾಗಿ ಶಿಕ್ಷಣ ಕಲಿಸುವ ಚಿಂತೆನೆಯನ್ನು ಪೋಷಕರು ಮಾಡಬೇಕು. ಸೀತಾರಾಮ ರೈಯವರು ಸವಣೂರಿನಂಥ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮವಾದ ಸೌಲಭ್ಯವನ್ನು ಹೊಂದಿರುವ ಶಿಕ್ಷಣ ಸಂಸ್ಥೆಯನ್ನು ಕಟ್ಟಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಹೇಳಿದರು.

ಉತ್ತಮವಾದ ಶಿಕ್ಷಣ- ಅಶ್ವಿನ್ ಎಲ್ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿರವರು ಮಾತನಾಡಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.


ವೇದಿಕೆಯಲ್ಲಿ ತಾ.ಪಂ, ಕಾರ್‍ಯನಿರ್ವಣಾಧಿಕಾರಿ ನವೀನ್ ಭಂಡಾರಿ, ಸಂಸ್ಥೆಯ ಟ್ರಸ್ಟಿಗಳಾದ ಸವಣೂರು ಎನ್.ಸುಂದರ ರೈ, ರಶ್ಮಿ ಆಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿ, ವಿದ್ಯಾರಶ್ಮಿ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಉಪಸ್ಥಿತರಿದ್ದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಸ್ವಾಗತಿಸಿ, ಪ್ರಾಂಶುಪಾಲ ಸೀತಾರಾಮ ಕೇವಳ ವರದಿ ವಾಚಿಸಿದರು. ವಿದ್ಯಾರ್ಥಿ ನಾಯಕ ಪ್ರಣವ್ ವಂದಿಸಿದರು ಫಾತಿಮತ್ ಶಮ್ನಾ, ಸಂಹಿತ್ ಜೈನ್ ಕಾರ್‍ಯಕ್ರಮ ನಿರೂಪಿಸಿದರು.

 ವಿವಿಧ ಮನೋರಂಜನೆ
ಸಭಾ ಕಾರ್‍ಯಕ್ರಮದ ಬಳಿಕ 171 ಮಕ್ಕಳಿಂದ ಕನ್ನಡ, ತುಳು, ಇಂಗ್ಲೀಷ್ ಹಿಂದಿ ಭಾಷೆಯಲ್ಲಿ 31 ಬಗೆಯ ವಿವಿಧ ಮನೋರಂಜನೆ ನಡೆಯಿತು.

ಮಕ್ಕಳಿಗೆ ಮೊಬೈಲ್, ಟಿ.ವಿ ಬಂದ ಬಳಿಕ ಓದುವ ಹವ್ಯಾಸ ಕಡಿಮೆ ಆಗಿದೆ. ಈ ಹಿಂದೆ ಮನೆಯಲ್ಲಿ ಇದ್ದ ಪುಸ್ತುಕ ಸಂಗ್ರಹದ ಕಪಾಟು ಕಣ್ಮಾರೆಯಾಗಿದೆ. ಇದನ್ನು ಮತ್ತೇ ಮನೆಯಲ್ಲಿ ಜೋಡಿಸುವ ಕಾರ್‍ಯವನ್ನು ಪೋಷಕರು ಮಾಡಬೇಕು
-ಡಾ.ಕುಮಾರ್
ಜಿ.ಪಂ, ಕಾರ್‍ಯನಿರ್ವಹಣಾಧಿಕಾರಿ

24 ಎಕ್ರೆಯಲ್ಲಿ 20 ಕೋಟಿ ರೂ ವೆಚ್ಚದಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳು.
ಸವಣೂರಿನಲ್ಲಿ 2001 ರಲ್ಲಿ 24 ಎಕ್ರೆ ಪ್ರದೇಶದಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದೆ. 20ಕೋಟಿ ರೂಪಾಯಿಯನ್ನು ನಾನು ವಿದ್ಯಾಲಯಕ್ಕೆ ಹಾಕಿದ್ದೇನೆ, ಮಂಗಳೂರು, ಬೆಂಗಳೂರಿನಂಥ ನಗರ ಪ್ರದೇಶಗಳಲ್ಲಿ ದೊರೆಯುವ ಶಿಕ್ಷಣವನ್ನು ನಾವು ಸವಣೂರಿನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ. ಕರ್ನಾಟಕ ರಾಜ್ಯದಲ್ಲಿಯೇ ವಿದ್ಯಾರಶ್ಮಿಗೆ ದೊಡ್ಡ ಗೌರವ ಇದೆ
ಸವಣೂರು ಕೆ.ಸೀತಾರಾಮ ರೈ
ಸಂಚಾಲಕರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು

LEAVE A REPLY

Please enter your comment!
Please enter your name here