ಪುತ್ತೂರು: ಅಡಿಕೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಎಂದು ಬೆಳಗಾವಿ ಅಧಿವೇಶನದಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ರೈತರಿಗೆ ಅವಮಾನ ಮಾಡಿದ್ದಾರೆ. ಗೃಹ ಸಚಿವರ ಹೇಳಿಕೆಯನ್ನು ನಾನು ಖಂಡಿಸುವುದಾಗಿ ಎಂದು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಅವರು, ದ.ಕ ಜಿಲ್ಲೆಯ ಅಭಿವೃದ್ಧಿಗೆ, ಇಷ್ಟೊಂದು ವಿದ್ಯಾ ಸಂಸ್ಥೆಗಳ ಪ್ರಾರಂಭಕ್ಕೆ ಅಡಿಕೆಯೇ ಮೂಲ ಕಾರಣವಾಗಿದೆ. ಅಡಿಕೆಯ ದರ ಕುಸಿತವಾಗುವುದಕ್ಕೆ ಕಾರಣವನ್ನು ಸರಕಾರ ಯೋಚಿಸಬೇಕು. ಬೆಳೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬಾರದು ಎನ್ನುವುದಕ್ಕಿಂತ ಅದಕ್ಕೆ ಪರಿಹಾರ ಯಾವುದು ಕಂಡು ಹಿಡಿಯಬೇಕು.
ಶಿವಮೊಗ್ಗ, ದ.ಕ ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಅಡಿಕೆ ಈಗ ಇತರ ಜಿಲ್ಲೆಗಳಲ್ಲೂ ಪ್ರಾರಂಭವಾಗಿದೆ. ಆಮದಾಗುವ ಅಡಿಕೆಯನ್ನು ನಿಲ್ಲಸಿ, ದೇಶದ ಅಡಿಕೆಯನ್ನೇ ಬಳಸಬೇಕು. ಅಡಿಕೆ ಭಾರತದ ಇತಿಹಾಸ ಪುರಾಣಗಳಲ್ಲಿ ಗೌರದ ಸ್ಥಾನವಿದೆ. ಶುಭ ಸಮಾರಂಭಗಳಲ್ಲಿ ವೀಳ್ಯ, ಅಡಿಕೆಗೆ ಗೌರವದ ಸ್ಥಾನವಿದೆ. ಅಡಿಕೆಯಿಂದ ಎಲ್ಲಾ ಆಹಾರ ವಸ್ತುಗಳ ತಯಾರಿಕೆಯಾಗುತ್ತದೆ. ಇಂತಹ ಅಡಿಕೆಗೆ ಪ್ರೋತ್ಸಾಹ ಕೊಡುವುದಿಲ್ಲ ಎನ್ನುವುದನ್ನು ಬಿಟ್ಟು ಆಮದು ಮಾಡುವ ಅಡಿಕೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ರೈತರು, ಅಡಿಕೆ ಬೆಳೆಗಾರರೊಂಡಿಗೆ ಪ್ರತಿಭಟನೆ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಎಚ್ಚರಿಸಿದರು.
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಮೃತರಾಗುವುದು ಸಾಮಾನ್ಯವಾಗಿದೆ. ಸಾಮಾನ್ಯ ಜ್ವರ ಬಂದು, ಗುಣಮುಖರಾದರೂ ಮತ್ತೆ ದಿಡೀರ್ ಅನಾರೋಗ್ಯದಿಂದಾಗಿ ಮೃತಪಡುವವರ ಸಂಖ್ಯೆ ಅಧಿಕವಾಗಿ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ವ್ಯಾಪಿಸಿದ್ದು ಮಕ್ಕಳೇ ಅಧಿಕವಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು. ಎಲ್ಲವನ್ನು ಕೊರೋನಾಕ್ಕೆ ದೂರ ಹಾಕಬಾರದು. ಲಸಿಕೆ ಪಡೆದುಕೊಂಡವರೂ ಸಾಯುತ್ತಿದ್ದಾರೆ. ಸರಕಾರ ನಿಜಾಂಶವನ್ನು ಪತ್ತೆಮಾಡಿ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.