ಇಂದು ಶುಕ್ರವಾರ (ಡಿ.30) ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಾಖಂಡದಿಂದ ದೆಹಲಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಾರು ಡಿವೈಡರ್ಗೆ ಡಿಕ್ಕಿ ಹೊಡಿದೆದೆ. ಪಂತ್ ಅವರ ಹಣೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು ಪ್ರಜ್ಞೆಯಲ್ಲಿದ್ದಾರೆ. ರೂರ್ಕಿಯ ಸಕ್ಷಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ದೆಹಲಿಗೆ ಶಿಫ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ. ಡಿಕ್ಕಿಯ ನಂತರ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು ಕಾರಿನ ಕಿಟಕಿ ಒಡೆದು ಪಂತ್ ಹೊರಬಂದಿದ್ದರು. ಬಹಳ ಪ್ರಾಯಾಸದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.25 ವರ್ಷ ಪ್ರಾಯದ ಪಂತ್ ಕಾರು ಚಾಲನೆ ಮಾಡುವಾಗ ಕಾರಿನ ನಿಯಂತ್ರಣ ಕಳೆದುಕೊಂಡಿದ್ದರು ಎಂದು ಉತ್ತರಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.