ರಾಮಕುಂಜ: ಮಕ್ಕಳ ಬದುಕನ್ನು ರೂಪಿಸುವಲ್ಲಿ ತಂದೆ, ತಾಯಿ ಹಾಗೂ ಗುರುಗಳ ಪಾತ್ರ ಮರೆಯಲಾಗದ್ದು. ವ್ಯಕ್ತಿತ್ವವು ಅರಳಿ ನಿಂತಾಗ ತಾನು ನಿಂತು ಬೆಳೆದ ನೆಲವನ್ನೂ ನೆಲೆಯನ್ನೂ ಕೃತಜ್ಞತೆಯಿಂದ ಕಾಣಬೇಕು ಎಂದು ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯದುಶ್ರೀ ಆನೆಗುಂಡಿ ಹೇಳಿದರು.
ಅವರು ಕೊಯಿಲ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅತಿಥಿಯಾಗಿದ್ದ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ಎಂ.ಎಸ್.ವೆಂಕಟೇಶ್ರವರು, ಇಂದು ಸಮಾಜಕ್ಕೆ ಸವಾಲಾದ ತ್ಯಾಜ್ಯ ಸಂಸ್ಕರಣೆಯ ಬಗ್ಗೆ ಯುವ ಜನಾಂಗ ಚಿಂತಿಸಬೇಕು. ಪ್ರಕೃತಿಗೆ ಹೊರೆಯಾಗುವ ಯಾವುದನ್ನೂ ಬಳಸದಂತೆ ಎಚ್ಚರ ವಹಿಸಬೇಕು ಎಂದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ್ ರಾವ್ರವರು ಮಾತನಾಡಿ, ಶಿಕ್ಷಣವು ರಾಷ್ಟ್ರೀಯ ಚಿಂತನೆಯನ್ನು ಬೆಳೆಸಬೇಕು. ಸಮಾಜವನ್ನು ಪೂಜ್ಯ ಭಾವನೆಯಿಂದ ಕಾಣುವ, ಅದಕ್ಕಾಗಿ ತನ್ನನ್ನು ಅರ್ಪಿಸಿಕೊಳ್ಳುವ ಸೇವಾ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಸುಜಾತ.ಎಂ., ಎಸ್ಡಿಎಂಸಿ ಅಧ್ಯಕ್ಷ ವಿಶ್ವನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ತೇಜಸ್ವಿ, ಧನುಶ್ರೀ, ಸುಮತಿ, ಅರ್ಚನಾ ಪ್ರಾರ್ಥಿಸಿದರು. ಮುಖೇಶ್ ಎಂ., ಸ್ವಾಗತಿಸಿದರು. ಶಿಬಿರಾಧಿಕಾರಿ ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.