ಸಿಡಿಲು ಬಡಿದು ಹಾನಿಯಾದ ಮನೆ :ನೇಸರ ಯುವಕ ಮಂಡಲದಿಂದ ಸಹಾಯ ಹಸ್ತ

0
  • ಪುತ್ತೂರು: ಸದಾ ಸಮಾಜಮುಖಿ ಚಿಂತನೆಯ ಬೆಳಕು ಹರಿಸಬೇಕು ಎನ್ನುವ ಪ್ರಯತ್ನದಲ್ಲಿ ನಿರತರಾಗಿರುವ, ದಶ ಪ್ರಣತಿಯ ಹೊಸ್ತಿಲಿನಲ್ಲಿರುವ ಸವಣೂರು ಸಮೀಪದ ಮುಕ್ಕೂರು ನೇಸರ ಯುವಕ ಮಂಡಲ ಕುಂಡಡ್ಕದಲ್ಲಿ ಸಿಡಿಲು ಬಡಿದು ತೀವ್ರ ಹಾನಿ ಉಂಟಾಗಿದ್ದ ಮನೆಗೆ ನೆರವು ನೀಡಿದೆ.
  • ಕತ್ತಲ್ಲಲ್ಲಿದ್ದ ಮನೆಗೆ ದೀಪಾವಳಿಯ ದಿನದಂದೇ ಬೆಳಕು ಹರಿಸುವ ಪ್ರಯತ್ನ ಮಾಡಿತ್ತು. ಅ.17 ರಂದು ಕುಂಡಡ್ಕ ಭಾರತಿ ಅವರ ಮನೆಗೆ ಸಿಡಿಲು‌ ಬಡಿದು ಹಾನಿ ಉಂಟಾಗಿತ್ತು. ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಅ. 21 ರಂದು ರಾತ್ರಿ ಮನೆಗೆ ಮರಳಿದ್ದರು. ದೀಪಾವಳಿ ಸಂಭ್ರಮದಲ್ಲಿರಬೇಕಾದ ಬಡ‌ ಕುಟುಂಬದ ಮನೆಗೆ ಸಿಡಿಲಿನ ಆಘಾತದಿಂದ ಕತ್ತಲು ಆವರಿಸಿತ್ತು. ಮನೆ ಛಾವಣಿಗೆ ಹಾನಿ ಮಳೆಯ ನಡುವೆ ಇರಬೇಕಾದ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ವಿದ್ಯುತ್ ಸಂಪರ್ಕ, ಪರಿಕರ ಸಂಪೂರ್ಣ ಹಾನಿಗೀಡಾಗಿ ಬೆಳಕು ಇಲ್ಲದ ಸ್ಥಿತಿ ಉಂಟಾಗಿತ್ತು.ಮನೆಯ ಪರಿಸ್ಥಿತಿ ಅರಿತ ಮುಕ್ಕೂರು ನೇಸರ ಯುವಕ ಮಂಡಲ ತನ್ನ‌ ಸೇವಾ ನಿಧಿಯ ಮೂಲಕ ಬಡ ಕುಟುಂಬಕ್ಕೆ ಅ.22 ರಂದು ನೆರವು ನೀಡಿದೆ.
  • ಬುಧವಾರ ಬೆಳಗ್ಗೆ ಸಂಘದ ವತಿಯಿಂದ ಸಿಮೆಂಟ್ ಶೀಟು, ವಿದ್ಯುತ್ ಮರು ಜೋಡಣೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಒದಗಿಸಲಾಯಿತು. ಸದಸ್ಯರು ಶ್ರಮದಾನದ ಮೂಲಕ ಜೋಡಣೆಯ ಕೆಲಸ ನಿರ್ವಹಿಸಿದರು. ಇಡೀ ಮೀಟರ್ ಬೋರ್ಡ್ ಸುಟ್ಟು ಕರಲಾಗಿತ್ತು. ಸಂಘದ ಕರೆಗೆ ತತ್ ಕ್ಷಣ ಸ್ಪಂದಿಸಿದ ಪವರ್ ಮೆನ್ ಮಹಾಂತೇಶ್ ಹೊಸ ಮೀಟರ್ ಜೋಡಿಸಲು ನೆರವಾದರು. ಜತೆಗೆ ಛಾವಣಿ ದುರಸ್ತಿಯ ಸಂದರ್ಭದಲ್ಲಿಯು ಸಹಕರಿಸಿದರು. ಈ ಸಂದರ್ಭದಲ್ಲಿ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಸದಸ್ಯರಾದ ಜಯಂತ ಕುಂಡಡ್ಕ, ರವಿ ಕುಂಡಡ್ಕ, ವಿದ್ಯುತ್ ಸಂಬಂಧಿಸಿದ ಕೆಲಸ ನಿರ್ವಹಿಸಿದ ಹುಕ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here