ನಗರಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ವಿಳಂಬಕ್ಕೆ ಕ್ರಮ !

0

ಪೌರಾಯುಕ್ತರಿಂದ ಟೇಬಲ್ ಇನ್‌ಸ್ಪೆಕ್ಷನ್ – ಕೆ.ಜೀವಂಧರ್ ಜೈನ್

ಪುತ್ತೂರು: ನಗರಸಭೆಯಲ್ಲಿ ಅರ್ಜಿಗಳು ಯಾವುದೇ ಪೆಂಡಿಂಗ್ ಇಲ್ಲ. ನಾನು ಪೌರಾಯುಕ್ತರು ಪ್ರತಿ ಸೋಮವಾರ ಅಧಿಕಾರಿ, ಸಿಬ್ಬಂದಿಗಳ ಸಭೆ ನಡೆಸಿ ಯಾವ ಯಾವ ಪೈಲ್ ಪೆಂಡಿಂಗ್ ಇದೆ. ಯಾಕೆ ಪೆಂಡಿಂಗ್ ಇದೆ ಎಂದು ಪರಿಶೀಲನೆ ನಡೆಸುತ್ತೇವೆ. ಒಂದು ವೇಳೆ ಅರ್ಜಿಗಳ ವಿಲೇವಾರಿ ವಿಳಂಬವಾದಲ್ಲಿ ಪೌರಾಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಹೇಳಿದರು.


ನಗರಸಭೆ ಸಭಾಂಗಣದಲ್ಲಿ ಜ.10 ರಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸದಸ್ಯ ಮಹಮ್ಮದ್ ರಿಯಾಜ್ ಅವರು ಕಟ್ಟಡ ಪರವಾನಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ತಡವಾಗುತ್ತಿದೆ ಎಂದು ಪ್ರಸ್ತಾಪಿಸಿದರು.

ಉತ್ತರಿಸಿದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ನಗರಸಭೆಯಲ್ಲಿ ಅರ್ಜಿಗಳು ಯಾವುದೇ ಪೆಂಡಿಂಗ್ ಇಲ್ಲ. ಪ್ರತಿ ವಾರ ಅಧಿಕಾರಿಗಳ ಸಿಬ್ಬಂದಿಗಳ ಸಭೆ ನಡೆಸಿ ಪರಿಶೀಲನೆ ನಡೆಸುತ್ತೇವೆ. ಸಾರ್ವಜನಿಕರಿಂದ ದೂರುಗಳಿದ್ದರೆ ನೇರವಾಗಿ ಪೌರಾಯುಕ್ತರಿಗೆ ನೀಡಬಹುದು. ಪೌರಾಯುಕ್ತರು ದೂರಿಗೆ ಸಂಬಂಧಿಸಿ ಕ್ರಮ ಕೈಗೊಳ್ಳುತ್ತಾರೆ. ಇದರ ಜೊತೆಗೆ ಪೌರಾಯುಕ್ತರು ಟೇಬಲ್ ಇನ್‌ಸ್ಪೆಕ್ಷನ್ ಕೂಡಾ ಮಾಡುತ್ತಾರೆ. ಅಲ್ಲಿ ಕಡತ ಪೆಂಡಿಂಗ್ ಇರುವ ಕುರಿತು ಮಾಹಿತಿ ಪಡೆಯುತ್ತಾರೆ ಎಂದರು.

ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಸಾರ್ವಜನಿಕರ ಗಮನಕ್ಕಾಗಿ ಸಕಾಲದ 19 ಸೇವೆಗಳ ಮತ್ತು ಅದರ ಸೇವಾ ಶುಲ್ಕದ ಹೊಸ ಸೇವಾ ಬೋರ್ಡ್ ಅನ್ನು ಹಾಕಿದ್ದೇವೆ. ಯಾವ ಯಾವ ಸೇವೆ ಯಾವ ದಿನದಲ್ಲಿ ಕೊಡಬೇಕೆಂದಿದೆ ಎಂಬುದು ಅದರಲ್ಲಿ ನಮೂದಿಸಲಾಗಿದೆ. ಸಾರ್ವಜನಿಕರು ಇದನ್ನು ಗಮನಿಸುವಂತೆ ತಿಳಿಸಿದರು.

ಹೆಸರು ಬದಲಾವಣೆ ಅಪಿದಾವಿತ್ ಸಲ್ಲಿಸಬೇಕು:
ಜನನ ಮರಣ ವಿಭಾಗದಲ್ಲಿ ಹೆಸರು ಬದಲಾವಣೆ ಇದ್ದಲ್ಲಿ ಅಪಿದಾವಿತ್ ಮಾಡಬೇಕು. ಎರಡೆರಡು ಬಾರಿ ತಿದ್ದುಪಡಿ ಇದ್ದರೆ ಕೋರ್ಟ್ ಮೂಲಕ ಅಪಿದಾವಿತ್ ಸಲ್ಲಿಸಬೇಕಾಗುತ್ತಾದೆ. ಇಂತಂಹ ಸಂದರ್ಭದಲ್ಲಿ ತಕ್ಷಣಕ್ಕೆ ಅರ್ಜಿ ವಿಲೇವಾರಿ ಆಗುವುದಿಲ್ಲ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸದಸ್ಯ ಮಹಮ್ಮದ್ ರಿಯಾಜ್ ಅವರ ಪ್ರಶ್ನೆಗೆ ಉತ್ತರಿಸಿದರು. ಸಾರ್ವಜನಿಕರನ್ನು ಸತಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು. ಇದೇ ವೇಳೆ ಸದಸ್ಯ ಮಹಮ್ಮದ್ ರಿಯಾಜ್ ಅವರು ನಗರಸಭೆ ಸಿಬ್ಬಂದಿ ಇಸಾಕ್ ಅವರನ್ನು ನೋಡಿ ಎಂತ ಮಹಮ್ಮದಾಲಿ ಎಂದು ಉಲ್ಲೇಖಿಸಿದ್ದೀರಾ. ನನಗೆ ಕೇಳಿದೆ ಎಂದು ಅವರನ್ನು ನೋಡಿ ಮಾತನಾಡಿದ ಘಟನೆಯೂ ನಡೆಯಿತು.

ರಸ್ತೆ ಅಗೆತಕ್ಕೆ ಎಸ್.ಆರ್. ದರದಂತೆ ಶುಲ್ಕ
ನಗರಸಭಾ ವ್ಯಾಪ್ತಿಯಲ್ಲಿರುವ ಮುಖ್ಯರಸ್ತೆ ಸಹಿತ ಒಳ ರಸ್ತೆಗಳ ಅಗೆತ ಮಾಡುವ ಕುರಿತಾಗಿ ನಗರಸಭೆಯಿಂದ ಅನುಮತಿ ನೀಡುವ ಸಂದರ್ಭ ಎಸ್.ಆರ್ ದರದಂತೆ ಶುಲ್ಕ ವಿಧಿಸಲಾಗುತ್ತಿದೆ. ಯಾವುದೇ ಅನಧಿಕೃತ ಶುಲ್ಕದ ವಿವರ ಇರುವುದಿಲ್ಲ. ಮೀಟರ್ ದರದಲ್ಲಿ ಮಣ್ಣಿನ ರಸ್ತೆಗೆ ರೂ. 280, ಡಾಮರು ರಸ್ತೆಗೆ ರೂ. 1,292, ಕಾಂಕ್ರೀಟಿ/ ಇಂಟರ್‌ಲಾಕ್ ರಸ್ತೆಗಳಿಗೆ ರೂ. 1786, ಹೆಚ್‌ಡಿಡಿ ತಂತ್ರಜ್ಞಾನದಂತೆ ಒಎಫ್‌ಸಿ ಕೇಬಲ್ ಅಳವಡಿಸಲು ರಸ್ತೆ ಬದಿಯ ಗುಂಡಿ ತೋಡುವಲ್ಲಿ ರೂ. 600, ಅದೆ ವಿಭಾಗದಲ್ಲಿ ರಸ್ತೆ ಅಗೆತ ಮಾಡಿದರೆ ರೂ. 700 ದರ ವಿಧಿಸಲಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರಸಭೆ ಅಧ್ಯಕ್ಷರು ಮಾಹಿತಿ ನೀಡಿದರು.

ಆನ್ ಲೈನ್ ಆಸ್ತಿ ಪರಿಶೀಲನೆಗೆ ಸದಸ್ಯರು ಸಹಕರಿಸಿ:
ನಗರಸಭೆ ವ್ಯಾಪ್ತಿಯಲ್ಲಿ 25,500 ರಷ್ಟು ಆಸ್ತಿಗಳು ನಗರಭೆ ವ್ಯಾಪ್ತಿಯಲ್ಲಿ ಇದೆ. ಇದೆಲ್ಲವನ್ನು ಆನ್‌ಲೈನ್ ಮೂಲಕ ತರಲು ಈಗಾಗಲೇ ವಾರ್ಡ್ ಮಟ್ಟದಲ್ಲಿ ಆಸ್ತಿಗಳನ್ನು ಪರಿಶೀಲನೆ ಮಾಡಿ ಅದನ್ನು ಆನ್‌ಲೈನ್ ಗೆ ಸೇರಿಸಲು ಕ್ರಮ ಕೈಗೊಳ್ಳುತ್ತಿವೆ. ಅದಕ್ಕಾಗಿ ಸರ್ವೆಯರನ್ನು ನೇಮಕ ಮಾಡಲಾಗಿದೆ. ಇದಕ್ಕೆ ಅನುಬಂಧ 2 ಎಂಬ ಅರ್ಜಿ ನಮೂನೆಯನ್ನು ಸಿದ್ದಪಡಿಸಲಾಗಿದೆ. ಪ್ರತಿಯೊಂದು ಆಸ್ತಿಯನ್ನು ದಾಖಲಿಕರಣ ಮಾಡಲು ಅದನ್ನು ಮುದ್ರಿಸಬೇಕಾಗಿದೆ. ಈಗಾಗಲೇ ಇ ಖಾತೆಯಲ್ಲಿ 9800 ಇಆರ್‌ಸಿಯಲ್ಲಿ ಇದೆ. ಅದನ್ನು ಬಿಟ್ಟು ಉಳಿದಂತಹ ಆಸ್ತಿಗಳನ್ನು ಆನ್‌ಲೈನ್ ಮೂಲಕ ಮಾಡಬೇಕು. ಇದರಿಂದಾಗಿ ಮುಂದೆ ತೆರಿಗೆ ಪಾವತಿ ಇರಬಹುದು ಅಥವಾ ಖಾತೆ ಕೊಡಲು ತುಂಬಾ ಸುಲಭವಾಗಿದೆ. ಈಗಾಗಲೇ ಅದೆಲ್ಲವನ್ನು ಪುಸ್ತಕದಲ್ಲಿ ದಾಖಲಿಕರಣ ಮಾಡಲಾಗುತ್ತಿದೆ. ಮುಂದೆ ಅದನ್ನು ಆನ್‌ಲೈನ್‌ಲ್ಲೇ ದಾಖಲಿಕರಣ ಮಾಡಲಾಗುತ್ತದೆ. ಎಪ್ರಿಲ್ ಅಂತ್ಯದೊಳಗೆ ಇದೆಲ್ಲ ಪೂರ್ಣಗೊಳ್ಳಬೇಕು. ಅದಕ್ಕಾಗಿ ನಗರಸಭಾ ಸದಸ್ಯರು ಸಹಕರಿಸುವಂತೆ ಪೌರಾಯುಕ್ತ ಮಧು ಎಸ್ ಮನೋಹರ್ ವಿನಂತಿಸಿದರು.


ಜಲಸಿರಿ ಪೈಪ್‌ಲಿಂಕ್ ತುಂಡರಿಸುವಂತೆ ಸೂಚನೆ:
ಜಲಸಿರಿ ಯೋಜನೆ ಪೂರ್ಣಗೊಳ್ಳದೆ ಅಲ್ಲಲ್ಲಿ ಪೈಪ್ ಲಿಂಕ್ ಕೊಡುವುದರಿಂದ ಗುಡ್ಡ ಪ್ರದೇಶದಲ್ಲಿರುವ ಮನೆಗಳಿಗೆ ಕುಡಿಯುವ ನೀರು ಹೋಗದೆ ಸಮಸ್ಯೆ ಉಂಟಾಗಿದೆ. ತಕ್ಷಣ ಜಲಸಿರಿ ಪೈಪ್‌ಲಿಂಕ್ ತೆರವು ಮಾಡುವಂತೆ ಸದಸ್ಯ ಭಾಮಿ ಅಶೋಕ್ ಶೆಣೈ ಪ್ರಸ್ತಾಪಿಸಿದರು. ಸದಸ್ಯರು ಧ್ವನಿಗೂಡಿಸಿದರು. ಉತ್ತರಿಸಿದ ಅಧ್ಯಕ್ಷರು ಎಲ್ಲೆಲ್ಲ ಜಲಸಿರಿ ಪೈಪ್ ಲಿಂಕ್ ಕೊಟ್ಟ ಬಳಿಕ ನೀರು ಬರುತ್ತಿಲ್ಲ ಎಂದಾದರೆ ಅಲ್ಲೆಲ್ಲಾ ಲಿಂಕ್ ತುಂಡರಿಸುವಂತೆ ನಗರಸಭೆ ಕುಡಿಯುವ ನೀರಿನ ವಿಭಾಗದ ವಸಂತ್ ಅವರಿಗೆ ಸೂಚನೆ ನೀಡಿದರು.

ಮುಂದೆ ಜ.13ರಂದು ಮಧ್ಯಾಹ್ನ ಶಾಸಕರ ಅಧ್ಯಕ್ಷತೆಯಲ್ಲಿ ಜಲಸಿರಿ ಇಂಜಿನಿಯರ್ ಅವರ ಸಭೆ ಕರೆಯಲಾಗುವುದು. ಸದಸ್ಯರು ತಮ್ಮ ಭಾಗದ ಜಲಸಿರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಸುವಂತೆ ತಿಳಿಸಿದರು. ಹೊಸ ಮನೆಗಳಿಗೆ ಖಾತೆ, ಡೋರ್ ನಂಬರ್ ಕೊಡುವಲ್ಲಿನ ವಿಚಾರದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಅವರು ಪ್ರಸ್ತಾಪಿಸಿದರು.

ಸದಸ್ಯೆ ಶೈಲಾ ಪೈ ಅವರು ನಮ್ಮ ವಾರ್ಡ್‌ನಲ್ಲಿ ಪೋಸ್ಟ್ ಆಫೀಸ್‌ನ ಡೋರ್ ಸಮಸ್ಯೆ ಮತ್ತು ದಾರಿ ದೀಪ ಎಲ್‌ಇಡಿ ಬಲ್ಪ್ ದುರಸ್ಥಿಗೆ ಹೋದವರು ಇನ್ನೂ ತಂದಿಲ್ಲ. ನಾವು ಕರೆ ಮಾಡಿದರೆ ನಗರಸಭೆ ಅಧ್ಯಕ್ಷರು ಒಂದು ವೇಳೆ ಕರೆ ಸ್ವೀಕರಿಸದಿದ್ದರೂ ಮತ್ತೆ ಅವರೇ ಕರೆ ಮಾಡಿ ವಿಚಾರಿಸುತ್ತಾರೆ. ಆದರೆ ಸಿಬ್ಬಂದಿಗಳು ಯಾರೂ  ನಮ್ಮ ವಾರ್ಡ್‌ನ ವಿಭಾಗಕಕ್ಕೆ ಸಂಬಂಧಿಸಿದ ಕೆಲಸ ನಿರ್ವಹಿಸುತ್ತಿರುವವರು ಕರೆಯೇ ಸ್ವೀಕರಿಸುತ್ತಿಲ್ಲ ಎಂದು ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ನಗರಸಭೆ ಸದಸ್ಯರು ಯಾರೆ ಆಗಲಿ ಕರೆ ಮಾಡಿದಾಗ ಅಧಿಕಾರಿಗಳು, ಸಿಬ್ಬಂದಿಗಳು ಕರೆ ಸ್ವೀಕರಿಸಬೇಕೆಂದು ಸೂಚನೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಶಿವರಾಮ ಎಸ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮಾತ್‌ಝೊರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ್, ಸುಂದರ ಪೂಜಾರಿ ಬಡಾವು, ರೋಬಿನ್ ತಾವ್ರೋ, ಪ್ರೇಂ ಕುಮಾರ್, ಪದ್ಮನಾಭ ನಾಯ್ಕ ಪಡೀಲು, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್ ಎಂ, ಭಾಮಿ ಅಶೋಕ್ ಶೆಣೈ, ಯಶೋಧ ಹರೀಶ್ ಪೂಜಾರಿ, ದೀಕ್ಷಾ ಪೈ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ ಕೇಶವ ಪೂಜಾರಿ, ಮಮತ ರಂಜನ್, ಬಿ.ಶೈಲಾ ಪೈ, ಇಸುಬು, ಮಹಮ್ಮದ್ ರಿಯಾಝ್ ಕೆ, ಬಿ.ಶಿವಪ್ಪ ನಾಯ್ಕ, ಪೂರ್ಣಿಮ ಕೋಡಿಯಡ್ಕ ಮತ್ತು ಅಧಿಕಾರಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರ ಅವರು ಸಭಾ ನಡಾವಳಿ ಮಾಹಿತಿ ನೀಡಿದರು.

ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ಆಕ್ಷನ್ ಪ್ಲಾನ್
ಡ್ರೋನ್ ಬಳಸಿ ಸಮೀಕ್ಷೆ
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾರಂಪರಿಕ ತ್ಯಾಜ್ಯವನ್ನು ಘನತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ಅನ್ವಯ ನಿರ್ವಹಿಸಲು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಬರುವ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಳೆದ 2005 ರಿಂದ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯದ ಪ್ರಮಾಣವನ್ನು ಗುರುತಿಸಲು ಡ್ರೋನ್ ಮ್ಯಾಪಿಂಗ್ ಸಮೀಕ್ಷೆ ನಡೆಸಲಾಗುವುದು. ರೂ.1.96 ಕೋಟಿಗೆ ಅಂದಾಜು ಪಟ್ಟಿ ಮಾಡಿದ್ದೇವೆ. ಡಿಪಿಆರ್ ಮಾಡಲು ಬಾಕಿ ಇದೆ. ನಗರಸಭೆಯಿಂದ ಕೇವಲ ಶೇ.16 , ಕೇಂದ್ರ ಸರಕಾರದಿಂದ ಶೇ.50 ಮತ್ತು ಉಳಿದ ಮೊತ್ತವನ್ನು ರಾಜ್ಯ ಸರಕಾರದಿಂದ ನೀಡಲಿದೆ. ಆದರೆ ಇದಕ್ಕೆ ಪೂರಕವಾಗಿ ಡ್ರೋನ್ ಮ್ಯಾಪಿಂಗ್‌ಗೆ ಬಿಡ್ಡು ಕರೆಯಲಾಗಿದ್ದು, ಮೂರವರು ಬಿಡ್ಡುದಾರರು ಭಾಗವಹಿಸಿದ್ದಾರೆ. ಲೈವ್ ಗ್ರೀನ್ ಸಂಸ್ಥೆಯವರು ರೂ. 40ಸಾವಿರದ ಕಡಿಮೆ ಬಿಡ್ಡು ಒಪ್ಪಿದ್ದು, ಅವರಿಗೆ ಕಾರ್ಯಾದೇಶ ನೀಡಲು ಮಂಜೂರಾತಿಗಾಗಿ ಸಭೆಯಲ್ಲಿ ನಗರಸಭೆ ಪೌರಾಯುಕ್ತರು ಮಾಹಿತಿ ನೀಡಿದರು.

ಬಯೋಗ್ಯಾಸ್ ಘಟಕಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಕೇಳಿದ ಮಂಡಳಿ
ಬನ್ನೂರು ನೆಲಭರ್ತಿ ಸ್ಥಳದಲ್ಲಿ ರೋಟರಿ ಸಂಸ್ಥೇಯ ಮೂಲಕ ನಿರ್ಮಾಣವಾಗುತ್ತಿರುವ ಬಯೋಗ್ಯಾಸ್ ಘಟಕಕ್ಕೆ ಮೆಕ್ಯಾನಿಕಲ್ ವರ್ಕ್ ಮಾತ್ರ ಬಾಕಿ ಇದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪೂರ್ವ ಸ್ಥಾಪನೆಗೆ ಒಪ್ಪಿಗೆ ಪತ್ರ ಬೇಕಾಗಿದ್ದು, ಅದು ಇನ್ನೂ ಬರಲು ಬಾಕಿ ಇರುವುದರಿಂದ ನಾವು ಅದನ್ನು ಇನ್‌ಸ್ಟಾಲ್ ಮಾಡಲು ಕಷ್ಟ ಆಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಕೊಡಲು ಪರಿಸರ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಕೇಳಿದ್ದಾರೆ. ಆದರೆ ಕೇಂದ್ರ ಇಲಾಖೆಯ ಆದೇಶದಂತೆ ಯಾವುದೇ ಬಯೋಗ್ಯಾಸ್ ಘಟಕಕ್ಕೆ ಪ್ರಮಾಣ ಪತ್ರ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಅವರ ಪತ್ರವನ್ನು ಕೂಡಾ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಲಾಗಿದೆ. ಇದೀಗ ಅವರು ಅನುಮತಿ ಕೊಡುವ ಭರವಸೆ ನೀಡಿದ್ದಾರೆ. ಮುಂದೆ ವಾರದೊಳಗೆ ಅನುಮತಿ ಸಿಗಬಹುದು.
ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here