ನೆಲ್ಯಾಡಿ: ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಅನುಷ್ಠಾನ ಸಮಿತಿ ಸಭೆ ಜ.10 ರಂದು ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಜಯರಾಜ್ರವರು ಮಾತನಾಡಿ, ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜಿಗೆ ಗುರುತಿಸಲಾಗಿರುವ 24.40 ಎಕ್ರೆ ಜಾಗದ ಗಡಿಗುರುತು ಮಾಡಲಾಗಿದ್ದು ತಾತ್ಕಾಲಿಕವಾಗಿ ತಡೆಬೇಲಿ ಹಾಕಲು ವಿಶ್ವ ವಿದ್ಯಾನಿಲಯದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಸದ್ರಿ ಜಾಗದ ಮಂಜೂರಾತಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಆರಂಭದಲ್ಲಿ ತಕರಾರು ಇದ್ದರೂ ಗಡಿ ಗುರುತು ಸಂದರ್ಭದಲ್ಲಿ ಸಹಕಾರ ಸಿಕ್ಕಿದೆ. ನೆಲ್ಯಾಡಿ ಘಟಕ ಕಾಲೇಜಿನಲ್ಲಿ ಪ್ರಸ್ತುತ ಬಿ.ಎ. ಹಾಗೂ ಬಿ.ಕಾಂ ತರಗತಿಗಳು ನಡೆಯುತ್ತಿವೆ. ಇನ್ನಷ್ಟೂ ಕೋರ್ಸು ಆರಂಭಿಸುವ ನಿಟ್ಟಿನಲ್ಲಿ ಕಾಲೇಜಿಗೆ ಅವಶ್ಯವಿರುವ ಕಟ್ಟಡ, ಬಸ್ಸಿನ ವ್ಯವಸ್ಥೆ ಹಾಗೂ ಇತರೇ ಮೂಲಸೌಕರ್ಯಗಳ ಅಗತ್ಯವಿದೆ. ಸುಸಜ್ಜಿತ ಕಟ್ಟಡ ಸ್ಥಾಪನೆಗೊಂಡಲ್ಲಿ ಕಾಲೇಜು ಇನ್ನಷ್ಟೂ ಚೆನ್ನಾಗಿ ಬೆಳೆಯಲಿದೆ. ಇದೊಂದು ಒಳ್ಳೆಯ ವಿದ್ಯಾಸಂಸ್ಥೆಯಾಗಿ ಬೆಳೆಯುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಗ್ರಾಮಸ್ಥರ, ದಾನಿಗಳ ಸಹಕಾರ ಸಿಗಬೇಕೆಂದು ಹೇಳಿದರು.
ಕಾಲೇಜಿಗೆ ಅವಶ್ಯಕ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮಂಗಳೂರು ವಿವಿ ಕುಲಪತಿ, ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರುರವರ ಭೇಟಿ ಮಾಡುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಮೊದಲ ಹಂತದಲ್ಲಿ ವಾರದೊಳಗೆ ಮಂಗಳೂರು ವಿವಿ ಕುಲಪತಿ ಅವರನ್ನು ಭೇಟಿ ಮಾಡಿ ಕಾಲೇಜಿನ ಬೆಳವಣಿಗೆ ಕುರಿತಂತೆ ಚರ್ಚಿಸಲು ನಿರ್ಧರಿಸಲಾಯಿತು. ಅನುಷ್ಠಾನ ಸಮಿತಿ ಅಧ್ಯಕ್ಷೆ ಉಷಾ ಅಂಚನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅನುಷ್ಠಾನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ, ಗೌರವಾಧ್ಯಕ್ಷ ಕೆ.ಪಿ.ತೋಮಸ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್, ಅನುಷ್ಠಾನ ಸಮಿತಿ ಸದಸ್ಯರೂ ಆಗಿರುವ ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ವಿವಿ ನೆಲ್ಯಾಡಿ ಘಟಕ ಕಾಲೇಜು ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಮಹಮ್ಮದ್ ಇಕ್ಬಾಲ್, ಮಾಜಿ ಸದಸ್ಯರಾದ ಕೆ.ಪಿ.ಅಬ್ರಹಾಂ, ತೀರ್ಥೇಶ್ವರ ಉರ್ಮಾನು, ಕಾಲೇಜು ಕಟ್ಟಡದ ಮಾಲಕ ರವಿಚಂದ್ರ ಹೊಸವೊಕ್ಲು, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪದಾಧಿಕಾರಿಗಳಾದ ಗಣೇಶ್ ಕೆ.ರಶ್ಮಿ, ಸತೀಶ್ ಕೆ.ಎಸ್.ದುರ್ಗಾಶ್ರೀ, ಜಾನ್ ಪಿ.ಎಸ್. ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ನೂರಂದಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಆನಂದ, ಲಲಿತ ಕಲಾಸಂಘದ ಸಂಚಾಲಕಿ ದಿವ್ಯಶ್ರೀ ಜಿ.,ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಸಹ ಸಂಯೋಜಕ ಡಾ.ಸೀತಾರಾಮ ಪಿ.ಸ್ವಾಗತಿಸಿದರು. ಡಾ.ನೂರಂದಪ್ಪ ವಂದಿಸಿದರು.