ಕಡಬ: ರೂ. 1.23 ಕೋಟಿ ವೆಚ್ಚದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣವಾಗಲಿದೆ. ಕಟ್ಟಡದಲ್ಲಿ ನೆಮ್ಮದಿ ಮುಖ್ಯವಾಗಿದೆ. ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸೂಕ್ತ ವಾತಾವರಣ ಬೇಕಿದೆ. ಅದು ಕಾನೂನು ಸುವ್ಯವಸ್ಥೆ ಕಾಪಾಡಲು ಪೂರಕವಾಗಲಿದೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಜ.16 ರಂದು ಕರ್ನಾಟಕ ರಾಜ್ಯ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 1.23 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಬ್ರಹ್ಮಣ್ಯ ಪೊಲೀಸ್ ಠಾಣಾ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಡಬಕ್ಕೆ ಸಿ.ಐ.ಗೆ ಪ್ರಸ್ತಾವನೆ: ಈಗಾಗಲೇ ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಶೀಘ್ರ ಉದ್ಘಾಟನೆ ನಡೆಯಲಿದೆ. ಕಡಬ ತಾಲೂಕು ಕೇಂದ್ರವಾಗಿದ್ದು, ಕಡಬಕ್ಕೆ ಪೊಲೀಸ್ ವೃತ್ತ ನಿರೀಕ್ಷಕರ (ಸಿ.ಐ.) ಹುದ್ದೆ ನೀಡುವಂತೆ ಗೃಹ ಸಚಿವರು ಹಾಗೂ ಸರಕಾರಕ್ಕೆ ಪ್ರಸ್ತಾವನೆ ಮುಂದಿಟ್ಟಿದ್ದೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಪುತ್ತೂರು ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಡಾ.ವೀರಯ್ಯ ಹಿರೇಮಠ್, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಎಸೈ ಮಂಜುನಾಥ್, ಎಎಸೈ ಕರುಣಾಕರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಕೇಂದ್ರೀಯ ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್, ಕೇಂದ್ರೀಯ ನೈರುತ್ಯ ರೈಲ್ವೇ ಸಲಹಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಣ್ಣೇಗೌಡ, ಯೋಜನಾ ಸಹಾಯಕ ಕಾಳಿದಾಸ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಭಟ್, ಸದಸ್ಯರಾದ ಭಾರತಿ ದಿನೇಶ್, ರಾಜೇಶ್ ಎನ್.ಎಸ್., ಶಿವರಾಮ ನೆಕ್ರಾಜೆ, ಪಿಡಿಒ ಮೋನಪ್ಪ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸದಸ್ಯರಾದ ಶ್ರೀವತ್ಸ, ಶೋಭಾ ಗಿರಿಧರ್, ವನಜಾ ಭಟ್, ತಾ.ಪಂ. ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಪ್ರಮುಖರಾದ ವೆಂಕಟ್ ವಳಲಂಬೆ, ಅಚ್ಚುತಾ ಗೌಡ, ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್, ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ, ಉದ್ಯಮಿ, ಸಮಾಜಸೇವಕ ಡಾ.ರವಿ ಕಕ್ಕೆಪದವು, ಗುತ್ತಿಗೆದಾರ ಸನತ್ ಕುಮಾರ್ ರೈ ಕೆ. ಉಡುಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಫೆಬ್ರವರಿಯಲ್ಲಿ ಕಡಬ, ಸುಬ್ರಹ್ಮಣ್ಯಕ್ಕೆ ಸಿಎಂ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಹಾಗೂ ಉದ್ಘಾಟನೆ ನೆರವೇರಿಸಲು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಫೆಬ್ರವರಿ ತಿಂಗಳ 28ರ ಮೊದಲು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಡಬಕ್ಕೆ ಆಗಮಿಸಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 300 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್ ಕಾಮಗಾರಿಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಫೆಬ್ರವರಿ 28ರಂದು ಅಥವಾ ಅದಕ್ಕಿಂತ ಮೊದಲು ಸಿಎಂ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಡಬ ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಕಡಬ ತಾಲೂಕು ಪಂಚಾಯತ್ ಕಟ್ಟಡ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಿನಿ ವಿಧಾನ ಸೌಧ, ಪಶುಪಾಲನಾ ಇಲಾಖೆಯ ಡಿಪ್ಲೊಮಾ ಕಾಲೇಜು ಇವುಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಅವರು ದಿನಾಂಕ ನಿಗದಿ ಮಾಡಿದ ಕೂಡಲೇ ಪೂರ್ವಭಾವಿ ಸಭೆ, ಸಿದ್ಧತೆಗಳನ್ನು ನಡೆಸಲಾಗುವುದು ಎಂದು ಸಚಿವ ಅಂಗಾರರವರು ತಿಳಿಸಿದರು.