ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು ಮಾಹಿತಿ
- 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ
- ಶೋಭಾಯಾತ್ರೆಯಲ್ಲಿ ಡಾ| ಬಾಲಗಂಗಾಧರನಾಥ ಸ್ವಾಮೀಜಿಯ ಕಂಚಿನ ಪುತ್ಥಳಿ
- ಜ.21ಕ್ಕೆ ಹಸಿರುವಾಣಿಯಲ್ಲಿ ಅಡಿಕೆ, ತೆಂಗಿನಕಾಯಿ, ಸೀಯಾಳಕ್ಕೆ ಮಹತ್ವ
- 120 ಅಡಿ ಉದ್ದ, 40 ಅಡಿ ಅಗಲದ ವೇದಿಕೆ
- ಸುಮಾರು 70 ಕೆ.ಜಿ ಬೆಳ್ಳಿಯಿಂದ ತುಲಾಭಾರ
- ದ.ಕ.ಜಿಲ್ಲೆಯ ಗೌಡ ಸಮುದಾಯದಿಂದ ಶಾಶ್ವತ ಕೊಡುಗೆ
ಪುತ್ತೂರು:1979ರಲ್ಲಿ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ದಕ್ಷಿಣ ಕನ್ನಡಕ್ಕೆ ಬಂದು ಒಕ್ಕಲುತನ ಮಾಡುವ ಬಂಧುಗಳ ಮನೆಯಲ್ಲಿ ನಿಂತು ಶ್ರೀ ಮಠದ ಬಗ್ಗೆ ಇಲ್ಲಿನ ಭಕ್ತರನ್ನು ಸಂಘಟಿಸುವ ಕೆಲಸ ಮಾಡಿದ್ದಾರೆ. 1958ರಲ್ಲಿ ಅವರಿಗೆ ಬೆಳ್ಳಿಯ ತುಲಾಭಾರ ಮಂಗಳೂರಿನಲ್ಲಿ ಮಾಡಲಾಗಿತ್ತು. 68ನೇ ಜಯಂತ್ಯೋತ್ಸವವು ಮಂಗಳೂರಿನಲ್ಲಿ ನಡೆಯಿತು. ಅವರು ಭೈರವೈಕ್ಯರಾದ ಬಳಿಕವೂ 78ನೇ ಜಯಂತ್ಯೋತ್ಸವವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಶ್ರೀಗಳ ಕಾರ್ಯವನ್ನು ಮತ್ತೊಮ್ಮೆ ಸಮಾಜಕ್ಕೆ ನೆನಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಜಯಂತ್ಯೋತ್ಸವದ ಕಾರ್ಯಾಲಯದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಡಾ| ಬಾಲಗಂಗಾಧರನಾಥ ಶ್ರೀಗಳಿಗೆ ಬೆಳ್ಳಿಯ ತುಲಾಭಾರ ಮಾಡಲಾಗಿದ್ದು ಅದನ್ನು ಪೂರ್ತಿಯಾಗಿ ಶ್ರೀಮಠದ ಪ್ರಭಾವಳಿ, ಗರ್ಭಗುಡಿಗೆ ಬಳಸಲಾಗಿದೆ. ಇದು ದಕ್ಷಿಣ ಕನ್ನಡ ಗೌಡ ಸಮುದಾಯದ ಶಾಶ್ವತ ಕೊಡುಗೆಯಾಗಿದೆ. ಜ.22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜರುಗುವ ಡಾ|ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವದ ಸಂದರ್ಭದಲ್ಲಿ ಶ್ರೀ ಡಾ| ನಿರ್ಮಲಾನಂದನಾಥ ಶ್ರೀಗಳು ಪೀಠಾಧ್ಯಕ್ಷರಾಗಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ದಶಮಾನೋತ್ಸವ ಆಚರಣೆಗೆ ಅವರಿಗೆ ಬೆಳ್ಳಿಯ ತುಲಾಭಾರ ಮಾಡಲಾಗುತ್ತದೆ. ಇದರ ಜೊತೆಗೆ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಶ್ರೀಗಳ ಕುರಿತು ಬರೆದ ಧಾರ್ಮಿಕ ಗ್ರಂಥಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಆ ಮಹಾಪ್ರಬಂಧ ‘ಸಂಸ್ಕೃತ ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೊಡುಗೆ ಒಂದು ಅಧ್ಯಯನ’ ಗ್ರಂಥದ ಲೋಕಾರ್ಪಣೆಯೂ ನಡೆಯಲಿದೆ ಎಂದರು.
ಕಾರ್ಯಕ್ರಮದ ವಿವರ: ಜ.22ರಂದು ಬೆಳಿಗ್ಗೆ ಗಂಟೆ 8ಕ್ಕೆ ಪೆರಿಯಡ್ಕದಲ್ಲಿ ಆಂಗ್ಲಮಾಧ್ಯಮ ಶಾಲೆ ಸಿಬಿಎಸ್‌ಇ ಶಾಲೆಗೆ ಶಿಲಾನ್ಯಾಸ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಎಸ್ ಅಂಗಾರ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಉಪ್ಪಿನಂಗಡಿಯಿಂದ ನೇರವಾಗಿ ಸ್ವಾಮೀಜಿಯವರು ದರ್ಬೆ ವೃತ್ತಕ್ಕೆ ಬಂದು ಅಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಕೊಂಬೆಟ್ಟು ಮಹಾಲಿಂಗೇಶ್ವರ ಐಟಿಐಯಲ್ಲಿ ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಭಾಂಗಣ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಆರ್.ಅಶೋಕ್, ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಸುಧಾಕರ್, ಅಬಕಾರಿ ಸಚಿವ ಗೋಪಾಲಯ್ಯ, ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ, ಒಕ್ಕಲಿಗ ನಿಗಮದ ಅಧ್ಯಕ್ಷ ಕೃಷ್ಣಪ್ಪ, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಮಡಿಕೇರಿಯಿಂದ ಕೆ.ಜೆ.ಬೋಪಯ್ಯ ಹೀಗೆ ಹಲವು ಶಾಸಕರ ಸಹಿತ ಗಣ್ಯರು ಮತ್ತು ಆದಿ ಚುಂಚನಗಿರಿಯ ಎಲ್ಲಾ ಶಾಖಾ ಮಠದ ಸಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
1 ಲಕ್ಷ ಜನರು ಸೇರುವ ನಿರೀಕ್ಷೆ: ಕಾರ್ಯಕ್ರಮಕ್ಕೆ ಎಲ್ಲಾ ತಾಲೂಕಿನಿಂದ ಬರುವವರ ಸಂಖ್ಯೆಯ ಆಧಾರದಲ್ಲಿ ಸುಮಾರು 1 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮ ಒಟ್ಟು 3 ಗಂಟೆ ಅವಧಿಯಲ್ಲಿ ನಡೆದು, ಮಧ್ಯಾಹ್ನ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ಬೆಳಿಗ್ಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಜ.21ಕ್ಕೆ ಹಸಿರುವಾಣಿಯಲ್ಲಿ: ಜ.21ಕ್ಕೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಈ ಹಿಂದೆ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರು ಪುತ್ತೂರಿಗೆ ಬಂದಿದ್ದ ವೇಳೆ ರೈತರ ಮನೆ ಸಂಪರ್ಕ ಮಾಡಿ ರೈತರ ವಾಣಿಜ್ಯ ಬೆಳೆಯಿಂದ ಆದಿ ಚುಂಚನಗಿರಿಯಲ್ಲಿ ಶಾಶ್ವತ ಕಾರ್ಯ ಮಾಡಿದ್ದಾರೆ. ಅದೇ ರೀತಿ ಈ ಬಾರಿಯೂ ಹಸಿರುವಾಣಿಯಲ್ಲಿ ಅಡಿಕೆ, ತೆಂಗಿನಕಾಯಿ, ಸೀಯಾಳಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಬೆಳೆಯನ್ನು ಸಂಪೂರ್ಣವಾಗಿ ಆದಿಚುಂಚನಗಿರಿಗೆ ಕೊಂಡೊಯ್ಯಲಾಗುವುದು. ತೆಂಗಿನಕಾಯಿ,ಸೀಯಾಳವನ್ನು ಆದಷ್ಟು ಇಲ್ಲಿ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ ಎಂದು ಸಂಜೀವ ಮಠಂದೂರು ಹೇಳಿದರು.
ಸ್ವಾಮೀಜಿಯವರ ಪುತ್ಥಳಿ ಪೆರಿಯಡ್ಕದಲ್ಲಿ ಪ್ರತಿಷ್ಠೆ: ಜಯಂತ್ಯೋತ್ಸವದಲ್ಲಿ ಆರಂಭದಲ್ಲಿ ಮೆರವಣಿಗೆಯಲ್ಲಿ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕಂಚಿನ ಪುತ್ಥಳಿಯನ್ನು ಸ್ವಾಗತಿಸಿ, ದೇವಳದ ಗದ್ದೆಯಲ್ಲಿ ನಡೆಯುವ ಜಯಂತ್ಯೋತ್ಸವ ವೇದಿಕೆಯಲ್ಲಿ ಪುತ್ಥಳಿಗೆ ಪುಷ್ಪಾರ್ಚನೆ, ಪಾದಪೂಜೆ ಮಾಡುವ ಮೂಲಕ ಜಯಂತ್ಯೋತ್ಸವ ಸಂಸ್ಮರಣೆ ನಡೆಯಲಿದೆ. ಮಹಾಸ್ವಾಮೀಜಿ ಅವರು ಜೀವಂತವಿದ್ದಾಗ ಯಾವ ರೀತಿ ಜಯಂತ್ಯೋತ್ಸವ ಆಚರಿಸಲಾಗಿತ್ತೋ, ಅದೇ ರೀತಿಯ ಆಚರಣೆ ಪುತ್ತೂರಿನಲ್ಲಿ ನಡೆಯಲಿದೆ. ಬಳಿಕ ಈ ಪುತ್ಥಳಿಯನ್ನು ಉಪ್ಪಿನಂಗಡಿ ಪೆರಿಯಡ್ಕದಲ್ಲಿ ನೂತನವಾಗಿ ಶಂಕುಸ್ಥಾಪನೆಗೊಳ್ಳಲಿರುವ ಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಸಂಜೀವ ಮಠಂದೂರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಜಯಂತ್ಯೋತ್ಸವ ಸಮಿತಿ ಜಿಲ್ಲಾ ಸಂಚಾಲಕರರಾದ ದಿನೇಶ್ ಮೆದು, ಚಿದಾನಂದ ಬೈಲಾಡಿ, ತಾಲೂಕು ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ ಸಹಿತ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.