ಕಡಬ ಸರಕಾರಿ ಪ್ರೌಢಶಾಲೆಯಲ್ಲಿ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಿ.ಸಿ ನಾಗೇಶ್
ಕಡಬ: ಕೇಂದ್ರ ಹಾಗೂ ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳನ್ನು ನೀಡುವುದರೊಂದಿಗೆ ಆಮೂಲಾಗ್ರ ಬದಲಾವಣೆ ತಂದು ಹೊಸ ಶಿಕ್ಷಣ ನೀತಿಯಿಂದ ದೇಶದ ಭವಿಷ್ಯವನ್ನು ಬದಲಾಯಿಸಿ ದೇಶದ ಗತವೈಭವವನ್ನು ಮರು ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಕಡಬ ಸರಕಾರಿ ಪ್ರೌಢ ಶಾಲೆಯಲ್ಲಿ ಸಚಿವರ ವಿಶೇಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಐದು ಕೊಠಡಿಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೋಸ್ಕರ ಬದುಕಬೇಕು, ಭಗವಂತ ಕೊಟ್ಟ ಶಕ್ತಿಯನ್ನು ಸಮಾಜಕ್ಕೆ, ಈ ದೇಶಕ್ಕೋಸ್ಕರ ವಿನಿಯೋಗಿಸಬೇಕು, ನಮ್ಮ ಎಲ್ಲಾ ಕಾರ್ಯಗಳು ಸಮಾಜಮುಖಿಯಾಗಿರಬೇಕು ಎನ್ನುವ ಮೇಲ್ಪಂಕ್ತಿಯನ್ನು ನಮ್ಮ ಹಿರಿಯರು ದೇಶಕ್ಕೆ ಹಾಕಿಕೊಟ್ಟಿದ್ದಾರೆ. ಭಾರತದ ಋಷಿಮುನಿಗಳ ಕಾಲದಿಂದಲೂ ಮೌಲ್ಯಾಧಾರಿತ ಸಮಾಜವನ್ನು. ಸ್ವಾವಲಂಭಿ ಸ್ವಾಭಿಮಾನಿ ಸಮಾಜ ಸೃಷ್ಠಿ ಮಾಡಿದ್ದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಉದ್ದೇಶ ನಾವು ಭಾರತದಲ್ಲಿ ಆಡಳಿತ ನಡೆಸಬೇಕೆನ್ನುವುದು ಅಲ್ಲ, ಭಾರತವನ್ನು ಮತ್ತೆ ಪರಮವೈಭವಕ್ಕೆ ಕೊಡೊಯ್ಯಬೇಕು ಎನ್ನುವ ಸದುದ್ದೇಶ. ಇಂತಹ ಪರಂಪರೆ ಇರುವ ದೇಶದಲ್ಲಿ ಪರಕೀಯರು ಆಳ್ವಿಕೆ ಮಾಡಿದರೂ ಮೌಲ್ಯಗಳು ಕುಸಿಯುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ಮೌಲ್ಯಗಳು ಕುಸಿಯುತ್ತಾ ಇವೆ. ನಮ್ಮ ಹಿರಿಯರಿಗೆ ವೈಭವದ ಸ್ಥಿತಿಗೆ ಅಡಚಣೆಗಳು ಇರುವ ವ್ಯವಸ್ಥೆಗಳನ್ನು ಬದಲಾಯಿಸಬೇಕು ಎನ್ನುವ ಇಚ್ಛೆಯಿತ್ತು. ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಮ್ಮ ಈಗಿನ ಕೇಂದ್ರ ಸರಕಾರ ಶಿಕ್ಷಣದ ಮೂಲಕ ಯುವಜನತೆಯನ್ನು ಈ ದೇಶಕ್ಕಾಗಿ ಬದುಕುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಉದ್ಧೇಶಿಸಿದೆ, ಅದಕ್ಕೆ ಹೊಸ ಶಿಕ್ಷಣ ನೀತಿ ತರುತ್ತಿದೆ ಎಂದು ಸಚಿವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂದರು ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಮಾತನಾಡಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶಿಕ್ಷಣ ಕ್ಷೇತ್ರದ ಮೂಲಭೂತ ವ್ಯವಸ್ಥೆ ಕಲ್ಪಿಸುವಲ್ಲಿ ಯಾವುದೇ ರಾಜಕೀಯ ಮಾಡಿಲ್ಲ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುಧಾಕರ ಕೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಕಡಬ ಆರಕ್ಷಕ ಠಾಣಾಧಿಕಾರಿ ಆಂಜನೇಯ ರೆಡ್ಡಿ , ಕಡಬ ಸರಕಾರಿ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಜನಾರ್ಧನ ಕೆ.ಎ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಶಿಕ್ಷಣ ಸಚಿವರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವರು ಹಾಗೂ ಶಾಲಾ ಕ್ರೀಡಾ ಪ್ರತಿಭೆ ಚರಿಷ್ಮಾ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಬೇಡಿಕೆಗಳ ಬಗ್ಗೆ, ಅಕ್ಷರ ದಾಸೋಹ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸ್ವಾಗತಿಸಿದರು. ಶಾಲಾ ವೈಸ್ ಪ್ರಿನ್ಸಿಪಾಲ್ ಡಾ| ವೇದಾವತಿ ಬಿ ವಂದಿಸಿದರು. ಶಿಕ್ಷಕರಾದ ಆನಂದ ಆಪ್ಟೆ ಹಾಗೂ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.
ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಈ ಹಿಂದೆ ರಾಜ್ಯದಲ್ಲಿದ್ದ ಸರಕಾರ ಐದು ವರ್ಷದಲ್ಲಿ ಕೇವಲ 3517 ಕೊಠಡಿಗಳನ್ನು ಕಟ್ಟಿದ್ದಾರೆ. 5600 ಕೊಠಡಿಗಳನ್ನು ದುರಸ್ತಿ ಮಾಡಿದಾರೆ. ನಾವು ಕೇವಲ ಮೂರು ವರ್ಷದಲ್ಲಿ ಸುಮಾರು 22,೦೦೦ ಕೊಠಡಿಗಳನ್ನು ನಿರ್ಮಿಸುತ್ತಿದ್ದೆವೆ. 1 ಲಕ್ಷ ಕ್ಕೂ ಮಿಕ್ಕಿ ಕೊಠಡಿಗಳನ್ನು ದುರಸ್ತಿ ಮಾಡಿದ್ದೆವೆ. 34,೦೦೦ ಅತಿಥಿ ಶಿಕ್ಷಕರನ್ನು ಶಾಲಾ ಪ್ರಾರಂಭದಲ್ಲೇ ತಗೊಂಡು ಸಂಬಳ ಕೂಡ ಜಾಸ್ತಿ ಮಾಡಿದ್ದೆವೆ. 15,೦೦೦ ಜಿಪಿಟಿ ಶಿಕ್ಷರು, 25೦೦ ಹೈಸ್ಕೂಲು ಶಿಕ್ಷಕರು , 1೦೦೦ ಪಿಯು ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಿದ್ದೆವೆ. 15,೦೦೦ ಶಿಕ್ಷಕರ ಸಿಇಟಿ ಆಗಿದೆ, ಕಾನೂನು ಕಾರಣಕ್ಕಾಗಿ ಸ್ವಲ್ಪ ತಡವಾಗಿದೆ ಎಲ್ಲವನ್ನು ನಿವಾರಿಸಿಕೊಂಡು ಇನ್ನು ಹದಿನೈದು ದಿನಗಳಲ್ಲಿ ನೇಮಕಾತಿಯ ಅಂತಿಮ ಪ್ರಕ್ರಿಯೆ ನಡೆಯಲಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಸಚಿವ ಅಂಗಾರ ಅವರ ಒತ್ತಡದಿಂದಾಗಿ ರಾಜ್ಯದಲ್ಲೇ ಅತೀ ಹೆಚ್ಚು ಅಂದ್ರೆ 39ಕೊಠಡಿಗಳನ್ನು ಒಂದು ವರ್ಷದಲ್ಲಿ ನೀಡಿದ್ದೆವೆ
-ಬಿ.ಸಿ. ನಾಗೇಶ್ ,ರಾಜ್ಯ ಶಿಕ್ಷಣ ಸಚಿವ