ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ;  ತಲೆಮರೆಸಿಕೊಂಡಿರುವ ಆರೋಪಿಗಳಿಬ್ಬರ ಸುಳಿವು ನೀಡಿದವರಿಗೆ ತಲಾ ರೂ 5 ಲಕ್ಷ ಬಹುಮಾನ ಘೋಷಿಸಿದ ಎನ್‌ಐಎ

0

ಮಂಗಳೂರು: ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾಗಿದ್ದು ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.

ಕಳೆದ ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು, ಅವರ ಕೋಳಿ ಮಾರಾಟ ಅಂಗಡಿಯ ಎದುರೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)‌ ಸಂಘಟನೆಯ ಸದಸ್ಯರಾಗಿರುವ ಬಂಟ್ವಾಳ ತಾಲ್ಲೂಕಿನ ಕೊಡಾಜೆಯ ಮೊಹಮ್ಮದ್ ಶರೀಫ್‌ (53ವ.) ಮತ್ತು ನೆಕ್ಕಿಲಾಡಿಯ ಕೆ.ಎ ಮಸೂದ್ (40ವ) ಕೂಡಾ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾಗಿದ್ದಾರೆ. ತಲೆಮರೆಸಿಕೊಂಡಿರುವ ಇವರಿಬ್ಬರ ಸುಳಿವು ನೀಡಿದರೆ ತಲಾ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಹೇಳಿದ್ದು, ಇವರಿಬ್ಬರ ಮಾಹಿತಿ ನೀಡುವವರನ್ನು ಗೌಪ್ಯವಾಗಿಡಲಾಗುವುದು ಎಂದೂ ತಿಳಿಸಿದೆ. ಈ ಬಗ್ಗೆ ಯಾವುದೇ ಮಾಹಿತಿ ಇದ್ದವರು ಬೆಂಗಳೂರಿನ ಎನ್‌ಐಎ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಬೆಳ್ಳಾರೆಯ ಎಸ್.ಮಹಮ್ಮದ್ ಮುಸ್ತಫ, ಕೊಡಗು ಜಿಲ್ಲೆಯ ಮಡಿಕೇರಿಯ ಎಂಎಚ್ ತುಫೈಲ್, ಕಲ್ಲುಮುಟ್ಲು ಮನೆಯ ಎಂ.ಆರ್.ಉಮ್ಮರ್ ಫಾರೂಕ್ ಮತ್ತು ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ಎಂಬ ನಾಲ್ವರು ಶಂಕಿತರ ಮಾಹಿತಿ ಹಂಚಿಕೊಂಡವರಿಗೆ ಎನ್‌ಐಎ ಕಳೆದ ನವೆಂಬರ್‌ನಲ್ಲಿ ಒಟ್ಟು 14 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು.

LEAVE A REPLY

Please enter your comment!
Please enter your name here