ಕೌಕ್ರಾಡಿ ಹಿರಿಯ ದಂಪತಿಯ ವಾಸ್ತವ್ಯದ ಮನೆ ನೆಲಸಮವಾಗಿ 1 ವರ್ಷ – ಡಿ.22ಕ್ಕೆ ಪುತ್ತೂರು ಎಸಿ ಕಚೇರಿಯ ಮುಂಭಾಗ ನ್ಯಾಯಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

0

ಪುತ್ತೂರು: ಕೌಕ್ರಾಡಿ ಗ್ರಾ.ಪಂ ವ್ಯಾಪ್ತಿಯ ಕಾಪಿನ ಬಾಗಿಲು ನಿವಾಸಿ ರಾಧಾಮ್ಮ, ಮುತ್ತು ಸ್ವಾಮಿ ದಂಪತಿಯ ಮನೆಯನ್ನು ಕಡಬ ತಹಶೀಲ್ದಾರ್ ಮತ್ತು ಅಧಿಕಾರಿಗಳು ನೆಲಸಮ ಮಾಡಿ ಒಂದು ವರ್ಷ ಕಳೆದು ಹೋಗಿದೆ. ಇನ್ನೂ ಕೂಡಾ ಆ ವೃದ್ದ ದಂಪತಿಗೆ ನ್ಯಾಯ ಸಿಗಲಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಮತ್ತು ನೊಂದ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸುವಂತೆ ಆಗ್ರಹಿಸಿ ಡಿ.22ರಂದು ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ನೀತಿ ತಂಡದ ಜಯಂತ್ ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕೌಕ್ರಾಡಿ ಗ್ರಾಮದ ಸರ್ವೆ ನಂಬರ್ 123/1ರಲ್ಲಿ ಮಲೆಕುಡಿಯ ಜನಾಂಗದವರು ಸುಮಾರು 200 ವರ್ಷಗಳಿಂದ ವಾಸವಾಗಿದ್ದಾರೆ. ಅದೇ ಜಾಗದಲ್ಲಿ 29 ಸೆಂಟ್ಸ್ ಸ್ಥಳದಲ್ಲಿ ರಾಧಾಮ್ಮ ಎಂಬವರು ತಮ್ಮ ಗುಡಿಸಲು ಮನೆಯಲ್ಲಿ ಜೀವನ ನಡೆಸುತ್ತಿದ್ದು, 2021ರಲ್ಲಿ ಅದೇ ಸ್ಥಳದಲ್ಲಿ ಮನೆಯ ನಿರ್ಮಿಸಿದ್ದರು. ಆ ಕುಟುಂಬಕ್ಕೆ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಗ್ಯಾಸ್, ವಿದ್ಯುತ್ ಸಂಪರ್ಕ ಸೇರಿದಂತೆ ಸರಕಾರದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಾನೂನು ಬದ್ಧವಾಗಿ ಪಡೆದಿತ್ತು. ಜಾಗಕ್ಕೆ 94 ಸಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಈ ಕುಟುಂಬ 2015 ಹಿಂದಕ್ಕೆ ವಾಸವಾಗಿರುವುದಿಲ್ಲ ಎಂದು ಹಿಂಬರಹ ನೀಡಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಅಕ್ರಮಸಕ್ರಮದಲ್ಲೂ ಸಲ್ಲಿಸಿದ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ತಹಶೀಲ್ದಾರ್ ಮತ್ತು ಅಧಿಕಾರಿಗಳು 2024ರ ನ.13ರಂದು ಮನೆ ನೆಲಸಮಗೊಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲಾ ಇಲಾಖೆಗಳಿಗೆ ದೂರು ನೀಡಿದರೂ ಬಡಕುಟುಂಬಕ್ಕೆ ನ್ಯಾಯ ಸಿಗಲಿಲ್ಲ. ಈ ನಿಟ್ಟಿನಲ್ಲಿ ನಾವು ಡಿ.22ರಂದು ಬೆಳಿಗ್ಗೆ ಗಂಟೆ 11ಕ್ಕೆ ಪುತ್ತೂರು ಎಸಿ ಕಚೇರಿ ಇರುವ ಕಂದಾಯ ಇಲಾಖೆಯ ಆವರಣದಲ್ಲಿ ಪ್ರತಿಭಟನೆ ಮಾಡಲಿದ್ದೇವೆ. ಪ್ರತಿಭಟನೆಯಲ್ಲಿ ವೃದ್ಧ ದಂಪತಿ, ಅವರ ಮಕ್ಕಳು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.


ಕೊಟ್ಟ ದೂರು ಸ್ವೀಕರಿಸದೆ ನನ್ನ ಮೇಲೆಯೇ ಪ್ರಕರಣ:
ನೊಂದ ಕುಟುಂಬದ ಮುತ್ತುಸ್ವಾಮಿ ಅವರು ಮಾತನಾಡಿ, ಮನೆ ಧ್ವಂಸ ಮಾಡಿದ ಕುರಿತು ನಾವು ಪೊಲೀಸರಿಗೆ ದೂರು ನೀಡಿದ್ದೇವು. ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಆದರೆ ಕರ್ತವ್ಯಕ್ಕೆ ಅಡ್ಡಿ ಎಂದು ನನ್ನ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರಾಧಾಮ್ಮ ಮತ್ತು ಮುತ್ತುಸ್ವಾಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here