ಮಂಗಳೂರು:ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ರಚಿಸಲು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ|ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ಸಮಿತಿ ಜ.21 ಮತ್ತು 22ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ.21ರಂದು ಬೆಳಿಗ್ಗೆ ನಗರದ ಸರ್ಕ್ಯೂಟ್ ಹೌಸ್ನಲ್ಲಿ ಬೆಳಿಗ್ಗೆ 10:30ರಿಂದ ಸಾರ್ವಜನಿಕರು, ವಿವಿಧ ವಲಯದ ಸಂಘಟನೆಗಳ ಮುಖಂಡರು, ಮತದಾರರ ಜೊತೆ ಸಮಿತಿಯವರು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಜ.22ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಅಮೂಲ್ಯ ಸಲಹೆಗಳಿಗೆ ಸ್ವಾಗತವಿದೆ. ಪ್ರಣಾಳಿಕೆ ರಚನೆ ಸಮಿತಿ ಅಧ್ಯಕ್ಷ ಡಾ|ಜಿ.ಪರಮೇಶ್ವರ ಅವರ ಜೊತೆ ಮಾಜಿ ಶಾಸಕ ಮಧು ಬಂಗಾರಪ್ಪ, ಪ್ರೊ|ಕೆ.ಇ.ರಾಧಾಕೃಷ್ಣ ಮೊದಲಾದವರು ಸಮಿತಿಯಲ್ಲಿದ್ದಾರೆ ಎಂದು ಐವನ್ ಡಿ’ಸೋಜ ತಿಳಿಸಿದ್ದಾರೆ.
ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ:
ಕೆಪಿಸಿಸಿ ರಾಜ್ಯದ ಕರಾವಳಿ ಜಿಲ್ಲೆಗಳ ಭೌಗೋಳಿಕ ರಚನೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಚುನಾವಣಾ ಪ್ರಣಾಳಿಕೆ ರಚಿಸಲಿದೆ. ಈ ಸಂದರ್ಭದಲ್ಲಿ ಬೀಡಿ ಕಾರ್ಮಿಕರ ಪುನರ್ವಸತಿ, ಮೀನುಗಾರಿಕೆ, ಉದ್ಯೋಗ ಅವಕಾಶಗಳು, ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿ ಗಮನಹರಿಸಲಿದೆ ಎಂದು ಐವನ್ ಡಿ’ಸೋಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ನವೀನ್ ಡಿ ಸೋಜ, ಕವಿತಾ ಸನಿಲ್, ಚಿತ್ತರಂಜನ್ ಶೆಟ್ಟಿ, ಶುಭೋದಯ ಆಳ್ವ, ಮುಸ್ತಾಫ, ಮುಸ್ತಾಫ ಸುಳ್ಯ, ಸಲೀಂ, ಅಲಿಸ್ಪರ್ ಡಿ’ಕುನ್ಹಾ, ಸತೀಶ್ ಪೆಂಗಲ್, ಹಬೀಬುಲ್ಲಾ ಕಣ್ಣೂರು, ಪಿಯೂಸ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.